ದಕ್ಷಿಣ ಕನ್ನಡದಲ್ಲಿ ಜಲ ದಿಗ್ಬಂಧನ, ಗುಡ್ಡ ಕುಸಿತ – ಉಡುಪಿ ಜಿಲ್ಲೆಯಲ್ಲಿ ೫ ಲಕ್ಷಕ್ಕೂ ಹೆಚ್ಚು ಹಾನಿ

ದಕ್ಷಿಣ ಕನ್ನಡದಲ್ಲಿ ಜಲ ದಿಗ್ಬಂಧನ, ಗುಡ್ಡ ಕುಸಿತ – ಉಡುಪಿ ಜಿಲ್ಲೆಯಲ್ಲಿ ೫ ಲಕ್ಷಕ್ಕೂ ಹೆಚ್ಚು ಹಾನಿ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದ್ದು, ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದೆ. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಗುರುವಾರ ಸರಾಸರಿ 120.1 ಮಿ.ಮಿ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳು, ಕೃಷಿ ಭೂಮಿ ಜಲಾವೃತಗೊಂಡಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಅತಿಕಾರಿಬೆಟ್ಟು ಗ್ರಾಮದ ಮಟ್ಟು ಪ್ರದೇಶದ ಮೂಲಕ ಹರಿಯುವ ಶಾಂಭವಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕಾರ್ಣಿಕ ಬಪ್ಪನಾಡು ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿದೆ. ಅತಿಕಾರಿಬೆಟ್ಟು ಗ್ರಾಮದ ಮಟ್ಟು ಪ್ರದೇಶವು ಪ್ರತಿ ವರ್ಷದಂತೆ ಈ ಬಾರಿಯೂ ಜಲಾವೃತಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಮನೆಗಳು ಮುಳುಗಡೆಯಾಗುವ ಸಾಧ್ಯತೆ ಇದ್ದು, ಜನರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರವರೆಗೆ ರೆಡ್ ಅಲರ್ಟ್ – ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಎಂದು ಉಸ್ತುವಾರಿ ಸಚಿವರಿಗೆ ಸಿಎಂ ಸಿದ್ದು ಸೂಚನೆ

ಸುಳ್ಯ ತಾಲೂಕಿನ ಕಲ್ಲಪ್ಪಳ್ಳಿ ಬಳಿ ಗುಡ್ಡ ಕುಸಿತ ಸುಳ್ಯ ತಾಲೂಕಿನಲ್ಲಿ ನಿರಂತವಾಗಿ ಮಳೆಯಾಗುತ್ತಿದ್ದು, ಕಲ್ಲಪ್ಪಳ್ಳಿ ಬಳಿ ರಸ್ತೆ ಮೇಲೆ ಗುಡ್ಡ ಕುಸಿತಗೊಂಡು ಸಂಚಾರ ಅಸ್ತವ್ಯಸ್ಥಗೊಂಡಿದೆ. ಸುಳ್ಯದಿಂದ ಕೇರಳದ ಪಾಣತ್ತೂರು ಸಂಪರ್ಕಿಸುವ ರಸ್ತೆ ಇದಾಗಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.

ಇನ್ನು ಪುತ್ತೂರಿನಿಂದ ಪಾಣಾಜೆಯಾಗಿ ಕಾಸರಗೋಡು ಜಿಲ್ಲೆಯ ಪೆರ್ಲ ಸಂಪರ್ಕಿಸುವ ರಸ್ತೆಯಲ್ಲಿರುವ ಚೇಳ್ಯಡ್ಕ ಸೇತುವೆ ಜಲಾವೃತಗೊಂಡಿದೆ. ಮಳೆಗಾಲ ಸಂದರ್ಭದಲ್ಲಿ ಪ್ರತಿ ಬಾರಿ ಈ ಸೇತುವೆ ಮುಳುಗಡೆಯಾಗುತ್ತದೆ. ಆದರೆ ಈ ಬಾರಿ ಮೊದಲ ಮಳೆಗೇ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್ ಪರಿಶೀಲನೆ ನಡೆಸಿದ್ದಾರೆ. ಕಾಸರಗೋಡು ಜಿಲ್ಲೆ ಸೇರಿದಂತೆ ಹಲವು ಗ್ರಾಮದ ಸಂಪರ್ಕ ಸೇತುವೆ ಇದಾಗಿದ್ದು, ಜನರು ಪರ್ಯಾಯ ರಸ್ತೆ ಬಳಸಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇನ್ನು ಉಡುಪಿ ಜಿಲ್ಲೆಯಲ್ಲೂ ನಿರಂತರವಾಗಿ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ಮುಳುಗಡೆಯಾಗಿವೆ. ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಜಿಲ್ಲೆಯ ಕುಂದಾಪುರ, ಆನಗಳ್ಳಿ, ಕುಳುಂಜೆ, ಹಂದಾಡಿ, ಹನೇಹಳ್ಳಿ, ವಾರಂಬಳ್ಳಿ, ಆರೂರು, ಇನ್ನಾ, ಯಡ್ತರೆ, ಕಿರಿಮಂಜೇಶ್ವರ, ಖಂದಕೋಣೆ, ಕುಕ್ಕೆಹಳ್ಳಿ, ಪಡುತೋನ್ಸೆ, ಶಂಕರನಾರಾಯಣ, ಹಾವಂಜೆ ಭಾಗದಲ್ಲಿ ಮರಬಿದ್ದು, ಮನೆ, ಜಾನುವಾರು ಕೊಟ್ಟಿಗೆ, ಅಡಕೆ ತೋಟಗಳು ಹಾನಿಯಾಗಿದ್ದು, ಒಟ್ಟು 5,90,000 ರೂ. ನಷ್ಟ ಅಂದಾಜಿಸಲಾಗಿದೆ. ಉಡುಪಿಯಲ್ಲಿ 131, ಬ್ರಹ್ಮಾವರ 106.9, ಕಾಪು 130.7, ಕುಂದಾಪುರ 97.7, ಬೈಂದೂರು 151.6, ಕಾರ್ಕಳ 124, ಹೆಬ್ರಿ 116.6 ಮಿ.ಮಿ ಮಳೆ ಸುರಿದಿದೆ.

ಭಾರಿ ಮಳೆಯಿಂದ ಉಡುಪಿಯಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಈ ಕುರಿತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದು, ಮಳೆ ಹಾನಿಯಿಂದ ಉಡುಪಿ ಜಿಲ್ಲೆಯಲ್ಲಿ ಪ್ರಾಣ ಹಾನಿ ಸಂಭವಿಸಿದ್ದು, ಈ ನಿಟ್ಟಿನಲ್ಲಿ ಉಡುಪಿಗೆ ಭೇಟಿ ನೀಡುತ್ತೇನೆ ಹಾಗೂ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

suddiyaana