ಜಾಗಿಂಗ್ ಮಾಡುತ್ತಿದ್ದಾಗ ಹೃದಯಾಘಾತ! – ಉದ್ಯಮಿಯ ಜೀವ ಉಳಿಸಿತು ಸ್ಮಾರ್ಟ್ ವಾಚ್!
ಇಂದಿನ ದಿನಗಳಲ್ಲಿ ಹೃದಯದ ಆರೋಗ್ಯದ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟವಾಗಿದೆ. ವಯಸ್ಸಲ್ಲದ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಹೃದಯದ ಆರೋಗ್ಯ ಮಟ್ಟದ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಟೆಕ್ ವಲಯವೂ ಹೊಸ ಪ್ರಯೋಗಗಳಿಗೆ ಒಗ್ಗಿಕೊಂಡಿದೆ. ಅದರ ಪರಿಣಾಮ ನಮ್ಮ ಹೃದಯದ ಆರೋಗ್ಯ ಮಟ್ಟವನ್ನು ಟ್ರ್ಯಾಕ್ ಮಾಡಬಲ್ಲ ಅನೇಕ ಡಿವೈಸ್‌ಗಳು ಲಭ್ಯವಿರುತ್ತವೆ. ಇದೀಗ ಇಲ್ಲೊಬ್ಬ ಉದ್ಯಮಿಯ ಜೀವವನ್ನು ಸ್ಮಾರ್ಟ್ ವಾಚ್ ಉಳಿಸಿದೆ. ಅಚ್ಚರಿಯಾದ್ರೂ ಸತ್ಯ.
ಬೆಳಗ್ಗೆ ಜಾಗಿಂಗ್ ಹೋಗುವಾಗ ಉದ್ಯಮಿಯೊಬ್ಬರಿಗೆ ಹೃದಯಾಘಾತ ಸಂಭವಿಸಿದ್ದು, ಸ್ಮಾರ್ಟ್ ವಾಚ್ ಅವರ ಜೀವ ಉಳಿಸಿದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಲಂಡನ್‌ನಲ್ಲಿ ನೆಲೆಸಿರುವ ಹಾಕಿ ವೇಲ್ಸ್ ಸಂಸ್ಥೆಯ ಸಿಇಒ 42 ವರ್ಷ ವಯಸ್ಸಿನ ಪೌಲ್ ವಾಪ್‌ಹಾಮ್ ಅವರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಈ ವೇಳೆ ಅವರ ಸ್ಮಾರ್ಟ್ ವಾಚ್ ಸೂಕ್ತ ಸಮಯದಲ್ಲಿ ಎಚ್ಚರಿಕೆ ನೀಡುವ ಮೂಲಕ ಉದ್ಯಮಿಯ ಜೀವ ಉಳಿಸಿದೆ. ತಾವು ಹೃದಯಾಘಾತದ ಅಪಾಯದಿಂದ ಪಾರಾದ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರೋಬೋಟ್ ದಾಳಿಗೆ ವ್ಯಕ್ತಿ ಬಲಿ ! – ಮಾರಣಾಂತಿಕವಾಯ್ತಾ ಸೆನ್ಸಾರ್ ಸಮಸ್ಯೆ?
ಹಾಕಿ ವೇಲ್ಸ್ ನ ಸಿಇಒ ಪೌಲ್ ವಾಫಮ್, ಬೆಳಿಗ್ಗೆ ಜಾಗಿಂಗ್ ಗೆ ಹೋಗಿದ್ದಾಗ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡಿದೆ. ತಮ್ಮ ಸ್ಮಾರ್ಟ್ ವಾಚ್ ಮೂಲಕ ಪತ್ನಿಯನ್ನು ಈ ವ್ಯಕ್ತಿ ಸಂಪರ್ಕಿಸಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪತ್ನಿ ಪೌಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
“ಎಂದಿನಂತೆ ಬೆಳಿಗ್ಗೆ 7ಕ್ಕೆ ನಾನು ಜಾಗಿಂಗ್ ಹೋಗಿದ್ದೆ. ಅದಾದ 5 ನಿಮಿಷಗಳಲ್ಲಿ ತೀವ್ರವಾದ ಎದೆ ನೋವು ಕಾಣಿಸಿಕೊಂಡಿತ್ತು. ಎದೆ ಬಿರಿಯುವಂತಹ ಅನುಭವ ಆಯಿತು. ನಂತರ ಹಿಂಡಿದ ಅನುಭವ ಆಯಿತು. ತೀವ್ರವಾದ ನೋವಿನಿಂದ ಬಳಲಿದೆ. ತಕ್ಷಣವೇ ನನ್ನ ಸ್ಮಾರ್ಟ್ ವಾಚ್ ಸಹಾಯದಿಂದ ನನ್ನ ಪತ್ನಿ ಲಾರಾಗೆ ಕರೆ ಮಾಡಿದೆ. ಮನೆಯಿಂದ 5 ನಿಮಿಷವಷ್ಟೇ ದೂರ ಇದ್ದೆ. ಆದ್ದರಿಂದ ಅವಳು ನನ್ನನ್ನು ಕಾರಿನಲ್ಲಿ ಆಸ್ಪತ್ರೆಗೆ ಬೇಗ ಕರೆದೊಯ್ಯಲು ಸಾಧ್ಯವಾಯಿತು ಎಂದು ಪೌಲ್ ಹೇಳಿದ್ದಾರೆ.
ಪೌಲ್ ವಾಫಮ್ ಅವರ ಅಪಧಮನಿಗಳ ಪೈಕಿ ಒಂದು ಬ್ಲಾಕ್ ಆಗಿದ್ದರಿಂದ ಹೃದಯಾಘಾತ ಉಂಟಾಗಿತ್ತು. ಆದರೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಬ್ಲಾಕ್ (ರಕ್ತ ಹೆಪ್ಪುಗಟ್ಟಿದ್ದನ್ನು ತೆಗೆದು) ನಿವಾರಿಸಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಸ್ಮಾರ್ಟ್ ವಾಚ್‌ಗಳು ಜೀವ ರಕ್ಷಕ ಎಂದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಹೃದಯ ಬಡಿತ, ಇಸಿಜಿ ಮತ್ತು ಹೆಚ್ಚಿನದನ್ನು ಅಳೆಯುವ ಸಂವೇದಕಗಳನ್ನು ಬಳಸಿಕೊಂಡು ಬಳಕೆದಾರರ ಆರೋಗ್ಯದಲ್ಲಿನ ಅಸಹಜತೆಯನ್ನು ಪತ್ತೆಹಚ್ಚುವ ಮೂಲಕ ಅದು ಹೇಗೆ ಜೀವಗಳನ್ನು ಉಳಿಸಿದೆ ಎಂಬುದರ ಕುರಿತು ಅನೇಕ ಘಟನೆಗಳು ನಡೆದಿವೆ.