ಮತದಾನಕ್ಕೆ ಬಂದಿದ್ದ ಮಹಿಳೆ, ವೃದ್ಧ ಸಾವು – ಪ್ರತ್ಯೇಕ ಮತ ಕೇಂದ್ರದಲ್ಲಿ ಘಟನೆ

ಮತದಾನಕ್ಕೆ ಬಂದಿದ್ದ ಮಹಿಳೆ, ವೃದ್ಧ ಸಾವು – ಪ್ರತ್ಯೇಕ ಮತ ಕೇಂದ್ರದಲ್ಲಿ ಘಟನೆ

ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ. ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದ ವ್ಯಕ್ತಿ ಹಾಗೂ ಮಹಿಳೆ ಎರಡು ಪ್ರತ್ಯೇಕ ಮತದಾನ ಕೇಂದ್ರದಲ್ಲಿ ಸಾವನ್ನಪ್ಪಿರುವ ಘಟನೆ ಹಾಸನ ಮತ್ತು ಬೆಳಗಾವಿಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ, ಚಿಕ್ಕೋಲೆ ಗ್ರಾಮದಲ್ಲಿ ಮತದಾನ ಮಾಡಿ ಪೋಲಿಂಗ್ ಬೂತ್ ನಿಂದ ಹೊರಬರುತ್ತಿದ್ದಂತೆ ಜಯಣ್ಣ ಎಂಬ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕುಟುಂಬ ಸಮೇತ ಹೆಚ್.ಡಿ ಕುಮಾರಸ್ವಾಮಿ ಮತದಾನ –  ಎಡಗೈ ಬದಲು ಬಲಗೈಗೆ ಶಾಹಿ ಹಾಕಿಸಿಕೊಂಡ ಸಿದ್ದರಾಮಯ್ಯ 

ಮತಗಟ್ಟೆಯ 100 ಮೀಟರ್ ವ್ಯಾಪ್ತಿಯೊಳಗಡೆ ಜಯಣ್ಣ ಸಾವನ್ನಪ್ಪಿದ್ದರಿಂದ ಕೆಲಹೊತ್ತು ಮತದಾನ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿತ್ತು. ಕೂಡಲೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ  ಯರಝರ್ವಿ ಗ್ರಾಮದಲ್ಲಿ ಮತ ಚಲಾಯಿಸಲು ಬಂದಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತ ಮಹಿಳೆಯನ್ನು ಪಾರವ್ವ ಈಶ್ವರ ಸಿದ್ನಾಳ (ಪನದಿ) (68) ಎಂದು ಗುರುತಿಸಲಾಗಿದೆ. ‘ಪಾರವ್ವ ತಮ್ಮ‌ ಮತದಾನದ ಹಕ್ಕು ಚಲಾಯಿಸಲು ಬಂದಿದ್ದರು. ಆದರೆ, ಮತದಾನಕ್ಕೂ ಮುನ್ನ, ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮತಗಟ್ಟೆಯ ಬಳಿಯೇ ಮಹಿಳೆ ಮೃತಪಟ್ಟಿದ್ದರಿಂದ ಕೆಲ ಹೊತ್ತು ಮತದಾನ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಯಾಗಿತ್ತು.

suddiyaana