Ola , Uber ರೀತಿಯಲ್ಲೇ ಆ್ಯಂಬುಲೆನ್ಸ್ ಸೇವೆ – ಆರೋಗ್ಯ ಇಲಾಖೆಯಿಂದ ಮಾಸ್ಟರ್ ಪ್ಲ್ಯಾನ್

Ola , Uber ರೀತಿಯಲ್ಲೇ ಆ್ಯಂಬುಲೆನ್ಸ್ ಸೇವೆ –  ಆರೋಗ್ಯ ಇಲಾಖೆಯಿಂದ ಮಾಸ್ಟರ್ ಪ್ಲ್ಯಾನ್

ಆರೋಗ್ಯದ ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸಿಗೋದಿಲ್ಲ.  108 ಆ್ಯಂಬುಲೆನ್ಸ್ ಅಥವಾ ಖಾಸಗಿ ಆ್ಯಂಬುಲೆನ್ಸ್​ಗಳ ಸಹ ಸರಿಯಾದ ಸಮಯಕ್ಕೆ ಬುಕ್ ಆಗದೆ ಜನ ಪರಿತಪಿಸುವಂತಾಗುತ್ತದೆ. ರೋಗಿಯ ಸ್ಥಿತಿಗತಿಯನ್ನು ಪರಿಶೀಲಿಸಿ ಆ್ಯಂಬುಲೆನ್ಸ್​​​ ಕಂಟ್ರೋಲ್ ರೂಂಗೆ ಕಾಲ್ ಮಾಡಿ ರೋಗಿಯಿರುವ ಸ್ಥಳಕ್ಕೆ ಆ್ಯಂಬುಲೆನ್ಸ್ ಬರುವಷ್ಟರಲ್ಲಿ ರೋಗಿಗಳ ಸ್ಥಿತಿ ಗಂಭೀರವಾಗಿರುತ್ತದೆ. ಎಷ್ಟೋ ಬಾರಿ ಇದು ಅವರ ಪ್ರಾಣಕ್ಕೂ ಕುತ್ತು ತರಬಹುದು. ಸಮಸ್ಯೆಗಳಿಗೆ ಬ್ರೇಕ್ ಹಾಕುವ ಸಲುವಾಗಿ ಇದೀಗ ಆರೋಗ್ಯ ಇಲಾಖೆ ಆ್ಯಪ್​ ಆಧಾರಿತ ಸೇವೆ ಒದಗಿಸಲು ಮುಂದಾಗಿದೆ. ಇದರಿಂದ ಭವಿಷ್ಯದಲ್ಲಿ ಆ್ಯಂಬುಲೆನ್ಸ್​​​ ಸೇವೆ ಮತ್ತಷ್ಟು ಸುಲಭವಾಗಲಿದೆ.

ವಾಸ್ತವವಾಗಿ, ಸರಿಯಾದ ಸಮಯಕ್ಕೆ ರೋಗಿಗಳಿಗೆ ಆ್ಯಂಬುಲೆನ್ಸ್  ಸಿಗುವಂತಾಗಬೇಕು. ತುರ್ತಾಗಿ ಚಿಕಿತ್ಸೆ ಲಭಿಸುವಂತಾಗಬೇಕು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಓಲಾ, ಊಬರ್ ಕ್ಯಾಬ್​​ಗಳನ್ನು ಬುಕ್​ ಮಾಡುವ  ಮಾದರಿಯಲ್ಲಿಯೇ ಆ್ಯಂಬುಲೆನ್ಸ್​​​ ಸೇವೆಯನ್ನು ಒದಗಿಸಲು ಆರೋಗ್ಯ ಇಲಾಖೆ  ಯೋಜನೆ ರೂಪಿಸಿದೆ. ಇದರಿಂದ  ಆ್ಯಂಬುಲೆನ್ಸ್​​​ ಸೇವೆ ಮತ್ತಷ್ಟು ಸರಳ ಮತ್ತು ಸುಲಭವಾಗಿ ಲಭ್ಯವಾಗಲಿದೆ.

ಆ್ಯಪ್‌ ಆಧಾರಿತ ಆ್ಯಂಬುಲೆನ್ಸ್  ಸೇವೆ  
ಆರೋಗ್ಯ ಇಲಾಖೆ  ಹೊಸ ಪ್ಲಾನ್ ಪ್ರಕಾರ, ಈ ಆ್ಯಪ್‌ ಆಧಾರಿತ ಆ್ಯಂಬುಲೆನ್ಸ್  ಸೇವೆಯನ್ನು ಪಡೆಯಲು ತುರ್ತು ಸಂದರ್ಭಗಳಲ್ಲಿ ನಾವಿರುವ ಸ್ಥಳದಿಂದ ಯಾವ್ ಆಸ್ಪತ್ರೆ ಅಥವಾ ಪಿಹೆಚ್‌ಸಿ ಸೆಂಟರ್‌ಗೆ ಹೋಗಬೇಕೆಂದು ಆಯ್ಕೆ ಮಾಡಿದರೆ ಸಾಕು ಕೂಡಲೇ ಸ್ಥಳಕ್ಕೆ ಆ್ಯಂಬುಲೆನ್ಸ್​​​ ತಲುಪಲಿದೆ.

ಆ್ಯಪ್‌ ಆಧಾರಿತ ಆ್ಯಂಬುಲೆನ್ಸ್ ಶುಲ್ಕ
ಆ್ಯಪ್‌ ಆಧಾರಿತ ಆ್ಯಂಬುಲೆನ್ಸ್ ಸೇವೆಯಲ್ಲಿ ಕೇವಲ ಸರ್ಕಾರದ ಉಚಿತ ಆ್ಯಂಬುಲೆನ್ಸ್ ಮಾತ್ರವಲ್ಲದೆ, ಖಾಸಗಿ ಆ್ಯಂಬುಲೆನ್ಸ್​​​​ಗಳನ್ನು ಕೂಡ ಸೇರಿಸಲಾಗುವುದು. ಹಾಗಂತ, ಖಾಸಗಿ ಆ್ಯಂಬುಲೆನ್ಸ್​​​​ಗಳಿಗೆ ಅಧಿಕ ಶುಲ್ಕ ಭರಿಸಬೇಕಾಗಬಹುದು ಎಂಬ ಚಿಂತೆಯೂ ಇರುವುದಿಲ್ಲ. ಏಕೆಂದರೆ ಎಲ್ಲಾ ಖಾಸಗಿ ಆ್ಯಂಬುಲೆನ್ಸ್​​​ಗಳಿಗೆ ಸರ್ಕಾರವೇ ಏಕರೂಪದ ಶುಲ್ಕವನ್ನು ನಿಗದಿ ಮಾಡಲಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ ಓಲಾ, ಊಬರ್ ಮಾದರಿಯಲ್ಲೇ ಆ್ಯಂಬುಲೆನ್ಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಿದೆ. ಇದರ ಆಗುಹೋಗುಗಳ‌‌ ಬಗ್ಗೆ ಸಮಾಲೋಚನೆ ಬಳಿಕ ಯೋಜನೆ ಜಾರಿಯಾಗಲಿದೆ  ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Kishor KV