ಡಬಲ್ ಸೆಂಚುರಿ ಹೊಡೆದರು ಸಿಗಲಿಲ್ಲ ಪಂದ್ಯಶ್ರೇಷ್ಠ ಪ್ರಶಸ್ತಿ – ಅಭಿಮಾನಿಗಳ ಹೃದಯ ಗೆದ್ದ ಯಶಸ್ವಿ ಜೈಸ್ವಾಲ್
ರಾಜ್‌ಕೋಟ್‌ನಲ್ಲಿ ಆಂಗ್ಲರ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದು ಯಶಸ್ವಿ ಜೈಸ್ವಾಲ್. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಜೈಸ್ವಾಲ್ ಅಜೇಯ ದ್ವಿಶತಕ ಬಾರಿಸಿದ್ದರು. ಡಬಲ್ ಸೆಂಚುರಿ ಬಾರಿಸಿ ಜೈ ಹೋ ಅಂತಾ ಬಹುಪರಾಕ್ ಹಾಕಿಸಿಕೊಂಡರು ಕೂಡಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಮಾತ್ರ ಈ ಯಂಗ್ ಕ್ರಿಕೆಟರ್‌ಗೆ ಸಿಗಲೇ ಇಲ್ಲ.
ಇದನ್ನೂ ಓದಿ:ಜೈ ಹೋ ಜೈಸ್ವಾಲ್ – ಆಂಗ್ಲರ ವಿರುದ್ಧ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ ಬ್ಯಾಕ್ ಟು ಬ್ಯಾಕ್ ಡಬಲ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಈ ಎರಡು ದ್ವಿಶತಕಗಳ ಹೊರತಾಗಿಯೂ ಜೈಸ್ವಾಲ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿಲ್ಲ ಎಂಬುದೇ ಅಚ್ಚರಿ. ವಿಶಾಖಪಟ್ಟಣಂನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಯಶಸ್ವಿ ಜೈಸ್ವಾಲ್ 209 ರನ್ ಬಾರಿಸಿ ಅಬ್ಬರಿಸಿದ್ದರು. ಆದರೆ ಇದೇ ಪಂದ್ಯದಲ್ಲಿ ಮಿಂಚಿನ ದಾಳಿ ಸಂಘಟಿಸಿದ್ದ ಜಸ್ಪ್ರೀತ್ ಬುಮ್ರಾ 2 ಇನಿಂಗ್ಸ್‌ಗಳಲ್ಲಿ 9 ವಿಕೆಟ್ ಕಬಳಿಸಿದರು. ಈ ಮೂಲಕ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಇನ್ನು ರಾಜ್‌ಕೋಟ್‌ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿಫಲರಾಗಿದ್ದ ಯಶಸ್ವಿ ಜೈಸ್ವಾಲ್ ದ್ವಿತೀಯ ಇನಿಂಗ್ಸ್ನಲ್ಲಿ ಅಜೇಯ 214 ರನ್ ಬಾರಿಸಿದ್ದರು. ಆದರೆ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 112 ರನ್ಗಳಿಸಿದ್ದ ಜಡೇಜಾ ಬೌಲಿಂಗ್‌ನಲ್ಲಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಜಡ್ಡುಗೆ ಒಲಿದಿದೆ.
ಅಂದರೆ ಎರಡೂ ಪಂದ್ಯಗಳಲ್ಲೂ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರೂ ಯಶಸ್ವಿ ಜೈಸ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಯಿಂದ ವಂಚಿತರಾಗಿದ್ದಾರೆ. ಇದನ್ನೇ ಈಗ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ. 22 ವರ್ಷದ ಯುವ ಆಟಗಾರನೊಬ್ಬ ಅದ್ಭುತ ಪ್ರದರ್ಶನ ನೀಡಿದರೂ ಆತನನ್ನು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಪರಿಗಣಿಸದಿರುವುದು ಅನ್ಯಾಯ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಇಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಅವರ ಟೆಸ್ಟ್ ಅನುಭವವನ್ನು ಕೂಡ ಪರಿಗಣಿಸಬೇಕು. ಇಲ್ಲಿ ಜೈಸ್ವಾಲ್ ಆಡಿರುವುದು ಕೇವಲ 7 ಟೆಸ್ಟ್ ಪಂದ್ಯಗಳನ್ನು ಮಾತ್ರ. ಇದಾಗ್ಯೂ 22 ವರ್ಷದ ಯುವ ಆಟಗಾರನ ಪ್ರತಿಭೆಯನ್ನು ಪ್ರೋತ್ಸಾಹಿಸದೇ ಹಿರಿಯ ಆಟಗಾರರನ್ನೇ ಪಂದ್ಯ ಶ್ರೇಷ್ಠ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿರುವುದು ನ್ಯಾಯಯುತವಾಗಿಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.