ಫ್ರೆಂಡ್‌ಗಾಗಿ ಪ್ರೇಯಸಿಯನ್ನೇ ಗಿಫ್ಟ್ ನೀಡಿದ – ಸಿನಿಮಾ ಸ್ಟೋರಿಗೂ ಮೀರಿಸುವಂತಿದೆ ತ್ಯಾಗಮಯಿ ಸ್ನೇಹಿತನ ಕಥೆ..!
ಸ್ನೇಹಕ್ಕಾಗಿ ಎಂಥಾ ತ್ಯಾಗಕ್ಕೂ ಸಿದ್ದ ಎಂಬ ಗೆಳೆಯರ ಬಗ್ಗೆ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಅಷ್ಟೇ ಯಾಕೆ ಪೌರಾಣಿಕ ಕಥೆಗಳಲ್ಲೂ ಕೇಳಿದ್ದೇವೆ. ಸ್ನೇಹಿತನಿಗೆ ಸಂಪತ್ತು ಕೊಟ್ಟ ಕೃಷ್ಣ – ಕುಚೇಲರ ಕಥೆ. ಗೆಳೆಯನಿಗಾಗಿ ರಾಜ್ಯ ನೀಡಿದ ಕರ್ಣ – ದುರ್ಯೋಧನರ ಸ್ನೇಹದ ಕಥೆ. ಸಿನಿಮಾದಲ್ಲೂ ಕೂಡಾ ಗೆಳೆಯನಿಗಾಗಿ ತನ್ನ ಪ್ರೀತಿಯನ್ನೇ ಬಿಟ್ಟುಕೊಟ್ಟ ಕಥೆಯೂ ಬಂದಿದೆ. ಆದರೆ, ಇಲ್ಲೊಬ್ಬ ಭೂಪ ನಿಜ ಜೀವನದಲ್ಲೂ ಸ್ನೇಹಿತನಿಗಾಗಿ ತನ್ನ ಪ್ರೀತಿಯನ್ನೇ ತ್ಯಾಗ ಮಾಡಿದ್ದಾನೆ. ಪ್ರೇಯಸಿಯನ್ನೇ ಫ್ರೆಂಡ್‌ಗೆ ಗಿಫ್ಟ್ ಆಗಿ ನೀಡಿದ್ದಾನೆ.
ಇದನ್ನೂ ಓದಿ: ಅಪ್ಪ ಮಾರಾಟಕ್ಕಿದ್ದಾರೆ..! – 2 ಲಕ್ಷ ರೂಪಾಯಿಗೆ ತಂದೆಯನ್ನೇ ಮಾರಾಟ ಮಾಡಲು ಮುಂದಾದ ಮಗಳು!
ರಾಮನಗರದಲ್ಲಿ ಬಿಕಾಂ ಓದುತ್ತಿರುವ ವಿದ್ಯಾರ್ಥಿನಿಯನ್ನು ಮಂಜು ಎಂಬಾತ ಪ್ರೀತಿಸುತ್ತಿದ್ದ. ಇಬ್ಬರು ಪ್ರಣಯಪಕ್ಷಿಗಳಂತೆ ಸುತ್ತಾಡುತ್ತಿದ್ದರು. ಸಾಕಷ್ಟು ಬಾರಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು. ಈಗ ಬಿಡಿ, ಸ್ಮಾರ್ಟ್ ಫೋನ್ ಜಮಾನಾ. ಇನ್ನು ಪ್ರೇಮಿಗಳೆಂದ ಮೇಲೆ ಕೇಳಬೇಕಾ. ಇಬ್ಬರೂ ಜೊತೆಯಲ್ಲಿದ್ದಾಗ ಒಂದಿಷ್ಟು ಫೋಟೋ ಬೇರೆ ತೆಗೆಸಿಕೊಂಡಿದ್ದರು. ಹುಡುಗಿ ಕೂಡಾ ಮಂಜುವನ್ನೇ ಪ್ರಾಣ ಎಂಬಂತೆ ಪ್ರೀತಿಸುತ್ತಿದ್ದಳು. ಇವರ ಪ್ರೀತಿ ಕಥೆ ಮುಂದುವರೆಯುತ್ತಿದ್ದಾಗಲೇ ಎಂಟ್ರಿಯಾಗಿದ್ದು ಮಂಜುವಿನ ಸ್ನೇಹಿತ ರವಿ.
ಮಂಜು ಮತ್ತು ರವಿ ಇಬ್ಬರೂ ಸ್ನೇಹಿತರು. ಮಂಜುಗೆ 21 ವರ್ಷ. ರವಿಗೆ 33 ವರ್ಷ. ರವಿ ಈಗಾಗಲೇ ಮದುವೆಯಾಗಿದ್ದ. ಆದರೆ, ಹೆಂಡತಿ ಅವನ ಜೊತೆಯಲಿಲ್ಲ. ರವಿ ಕಣ್ಣು ತನ್ನ ಗೆಳೆಯನ ಪ್ರೇಯಸಿ ಮೇಲೆ ಬಿದ್ದಿತ್ತು. ಇಬ್ಬರೂ ಜೊತೆಯಾಗಿ ಓಡಾಡುವುದು ಕೂಡಾ ರವಿಗೆ ಗೊತ್ತಿತ್ತು. ಹೀಗಾಗಿ ರವಿ ಮಂಜುವನ್ನು ಚೆನ್ನಾಗಿ ಪುಸಲಾಯಿಸಿ ಇಟ್ಟುಕೊಂಡಿದ್ದ. ಒಂದು ದಿನ ನಿನ್ನ ಸ್ನೇಹಿತನಿಗಾಗಿ ನಿನ್ನ ಲವರ್‌ನನ್ನು ಬಿಟ್ಟುಕೊಡು ಎಂದು ಪೂಸಿ ಹೊಡೆಯುತ್ತಲೇ ಕೇಳಿದ್ದ. ಮಂಜು ಕೂಡಾ ಗೆಳೆಯನ ಮಾತಿಗೆ ಓಕೆ ಎಂದು ಹೇಳಿಯೇ ಬಿಟ್ಟ. ರವಿ ಒಂದು ಮಾತು ಹೇಳಿದ್ದ. ನೋಡು ನಿನಗೆ ಎಷ್ಟು ಬೇಕಾದರೂ ಹುಡುಗಿಯರು ಬೀಳುತ್ತಾರೆ. ನನಗೆ ಯಾರೂ ಸಿಗುವುದಿಲ್ಲ. ನಿನ್ನ ಲವರ್‌ನನ್ನು ನಂಗೆ ಬಿಟ್ಟುಕೊಡು ಎಂದಿದ್ದ. ಗೆಳೆಯನ ಮಾತು ಸತ್ಯ ಎನಿಸಿ ಮಂಜು ತನ್ನ ಪ್ರೇಯಸಿಯನ್ನು ಫ್ರೆಂಡ್‌ಗೆ ಗಿಫ್ಟ್ ಆಗಿ ನೀಡಲು ಒಪ್ಪಿಕೊಂಡೇ ಬಿಟ್ಟ.
ಮಂಜು ತನ್ನ ಗರ್ಲ್ ಫ್ರೆಂಡ್ ರವಿಗೆ ಬಿಟ್ಟುಕೊಡಲು ಮನಸು ಮಾಡಿದ್ದ. ಅದಕ್ಕಾಗಿ ಹುಡುಗಿಯ ಬಳಿ ಒಂದು ಮಾತು ಕೂಡಾ ಕೇಳಲಿಲ್ಲ. ಅವಳು ತನ್ನ ಗರ್ಲ್‌ಫ್ರೆಂಡ್ ಎಂಬ ಧಿಮಾಕು ಮಾತ್ರ ಮಂಜುಗಿತ್ತು. ಅವಳಿಗೂ ಒಂದು ಮನಸಿದೆ. ಅವಳು ಮನುಷ್ಯಳು ಎಂಬ ಕಿಂಚಿತ್ತೂ ಯೋಚನೆಯೂ ಇರಲಿಲ್ಲ. ಆ ಹುಡುಗಿ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದಾಗಲೇ ಮಂಜು ಹೋಗಿ ಕರೆದುಕೊಂಡು ಬಂದಿದ್ದ. ಹಿಂದೆ ಮುಂದೆ ನೋಡದೇ ತನ್ನ ಲವರ್ ಕರೆಯುವುದು ಎಂದುಕೊಂಡು ಹುಡುಗಿಯೂ ಪರೀಕ್ಷೆ ಅರ್ಧಕ್ಕೆ ಬಿಟ್ಟು ಬಂದಿದ್ದಾಳೆ. ನಂತರ ಮಂಜು ನೀನು ನನ್ನ ಫ್ರೆಂಡ್ ರವಿ ಜೊತೆ ಹೋಗು ಎಂದಿದ್ದಾನೆ. ಆಗ ಗರ್ಲ್‌ಫ್ರೆಂಡ್ ಹೋಗುವುದಿಲ್ಲ ಎಂದಿದ್ದಾಳೆ. ಇದೇ ವೇಳೆ ತಾವಿಬ್ಬರೂ ಜೊತೆಗಿದ್ದ ಫೋಟೋ ತೋರಿಸಿ ಮಂಜು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ನಂತರ ಮಂಜು ರವಿ ಹತ್ರ ಹೇಳಿ ಹುಡುಗಿ ಕುತ್ತಿಗೆಗೆ ದಾರವೊಂದನ್ನು ಕಟ್ಟಿಸಿ ಕಳುಹಿಸಿಕೊಟ್ಟಿದ್ದಾನೆ. ಸ್ನೇಹಿತ ಕೇಳಿದ ಎಂದು ಪ್ರೇಯಸಿಯನ್ನೇ ಗಿಫ್ಟ್ ಆಗಿ ಕೊಟ್ಟಿದ್ದಾನೆ. ಯುವತಿಯನ್ನು ಆಟದ ಗೊಂಬೆಯಂತೆ ತನ್ನ ಕೈಯಿಂದ ತನ್ನ ಸ್ನೇಹಿತನ ಕೈಗೆ ರವಾನಿಸುವಷ್ಟು ಸುಲಭವಾಗಿ ಯುವತಿಯನ್ನು ಕಳುಹಿಸಿದ್ದಾನೆ.
ಇತ್ತ ಮಗಳು ಕಾಲೇಜಿನಿಂದ ಮನೆಗೆ ಬಂದಿಲ್ಲ ಎಂದು ಯುವತಿಯ ಪೋಷಕರು ಗಾಬರಿಗೊಂಡಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಕೇಸ್ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಯುವತಿಯನ್ನು ಶಿರಾದಲ್ಲಿ ಆರೋಪಿಗಳು ಇರಿಸಿರುವ ಮಾಹಿತಿ ದೂರವಾಣಿ ಸಂಖ್ಯೆಯ ಟವರ್ ಲೋಕೇಶನ್‌ನಿಂದ ಗೊತ್ತಾಗುತ್ತದೆ. ತಕ್ಷಣ ರವಿಯನ್ನು ಬಂಧಿಸಿ ಯುವತಿಯನ್ನು ರಕ್ಷಿಸುತ್ತಾರೆ. ಆಗ, ಯುವತಿಯನ್ನು ಅಪಹರಿಸಿಕೊಂಡು ಹೋಗಿರುವ ವಿಚಾರ ಬೆಳಕಿಗೆ ಬರುತ್ತದೆ. ಮತ್ತು ಯುವತಿಯನ್ನು ಸ್ನೇಹಿತರಿಬ್ಬರು ಈ ರೀತಿ ಉಡುಗೊರೆ ವಿನಿಮಯ ಮಾಡಿಕೊಂಡಿರುವ ವಿಚಾರವೂ ಬೆಳಕಿಗೆ ಬರುತ್ತದೆ. ರವಿ ಮತ್ತು ಮಂಜು ಈಗ ಪೊಲೀಸರ ವಶದಲ್ಲಿದ್ದಾರೆ.