ಹೊಸ ದೋಸ್ತಿ.. ಹಳೇ ಕುಸ್ತಿ! – ಬಿಜೆಪಿಗಾಗಿ ಮಾತ್ರವೇ ಹೊಂದಾಣಿಕೆ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಬದ್ಧವೈರಿಗಳಾಗಿದ್ದ ಹೆಚ್ಡಿ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ಈ ಬಾರಿ ಕೈ ಜೋಡಿಸಿದ್ದಾರೆ. ಖುದ್ದು ಕುಮಾರಣ್ಣನೇ ಮಂಡ್ಯ ಅಖಾಡಕ್ಕೆ ಧುಮುಕುತ್ತಿದ್ದಂತೆ ಸಂಸದೆ ಸುಮಲತಾ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ತಮ್ಮ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಇಬ್ಬರು ನಾಯಕರು ಇಂದು ಮತ್ತೆ ಒಂದಾಗಿದ್ದಾರೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ಘೋಷಿಸಿದ್ದ ಸುಮಲತಾ ಅಂಬರೀಶ್ ಅವರು, ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮೈತ್ರಿ ಅಭ್ಯರ್ಥಿಗೆ ಸುಮಲತಾ ಅಂಬರೀಶ್ ಸಪೋರ್ಟ್ ನೀಡೋದು ಕನ್ಫರ್ಮ ಆಗಿದೆ. ಮೇಲ್ನೋಟಕ್ಕೆ ಇಬ್ಬರೂ ನಾಯಕರು ದ್ವೇಷ ಮರೆತು ಒಂದಾದವರಂತೆ ಕಾಣ್ತಾ ಇದ್ರೂ ಕೂಡ ಇಬ್ಬರ ಒಡಲಾಳದ ದ್ವೇಷ ಮಾತ್ರ ತಣಿದಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಕುಮಾರಸ್ವಾಮಿಯವ್ರ ನಾಮಿನೇಷನ್ ಮತ್ತು ಸುಮಲತಾ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ.
ಇದನ್ನೂ ಓದಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಹೈದರಾಬಾದ್ – ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ ಎಸ್ಆರ್ಹೆಚ್
ಬಿಜೆಪಿಗಾಗಿ ಮಾತ್ರವೇ ಹೊಂದಾಣಿಕೆ?
ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಮಂಡ್ಯದಿಂದ ಗುರುವಾರ ಹೆಚ್.ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಕುಮಾರಸ್ವಾಮಿ ನಾಮಿನೇಷನ್ಗೆ ಖುದ್ದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಎರಡೂ ಪಕ್ಷಗಳ ಹಲವು ನಾಯಕರು ಭಾಗಿಯಾಗಿದ್ರು. ಆದ್ರೆ ಪ್ರಮುಖವಾಗಿ ಸುಮಲತಾ ಅಂಬರೀಶ್ ಬಂದಿರಲಿಲ್ಲ. ಆದ್ರೂ ಕುಮಾರಸ್ವಾಮಿ ಮಾತ್ರ, ಸುಮಲತಾ ಬಿಜೆಪಿ ಸೇರ್ಪಡೆ ನಿರ್ಧಾರ ನನಗೂ ಬೆಂಬಲ ಕೊಟ್ಟ ಹಾಗೆ ಎಂದಿದ್ದರು. ಮತ್ತೊಂದೆಡೆ ಸುಮಲತಾ ಏಪ್ರಿಲ್ 3ರಂದು ತಮ್ಮ ನಿರ್ಧಾರ ಘೋಷಣೆ ವೇಳೆಯೂ ಎಲ್ಲೂ ಕೂಡ ಹೆಚ್ಡಿ ಕುಮಾರಸ್ವಾಮಿಯವ್ರ ಹೆಸರನ್ನ ಪ್ರಸ್ತಾಪ ಮಾಡಿರಲಿಲ್ಲ. ಕ್ಷೇತ್ರ ತ್ಯಾಗ ಮಾಡಿ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ಆದ್ರೆ ರಾಜಕೀಯ ಬಿಡಲ್ಲ ಎಂದಿದ್ದರು. ಅಲ್ದೇ ಏಪ್ರಿಲ್ 5ರಂದು ಬಿಜೆಪಿ ಸೇರ್ಪಡೆ ವೇಳೆಯೂ ಎಲ್ಲೂ ಸಹ ಕುಮಾರಸ್ವಾಮಿ ಪರ ಪ್ರಚಾರ ಮಾಡ್ತೇನೆ ಅಂತಾ ಹೇಳಲೇ ಇಲ್ಲ. ಇದು ಹೊಸ ಅಧ್ಯಯ ಎಂದು ಹೇಳಿದ ಸುಮಲತಾ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ ಎಂದಿದ್ದಾರೆ. ಬಳಿಕ ಮಾಧ್ಯಮದವರು ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೀರಾ ಅಂತಾ ಕೇಳಿದಾಗ ನಗುತ್ತಲೇ ಉತ್ತರ ನೀಡಿದ್ದಾರೆ. ಬಿಜೆಪಿ ಹೈಕಮಾಂಡ್ ಯಾರಿಗೇ ಹೇಳಿದ್ರೂ ಪ್ರಚಾರ ಮಾಡ್ತೀನಿ ಅಂದಿದ್ದಾರೆ.
ಸುಮಲತಾ ಅವರು ಗೆದ್ದು ಬೀಗಿದ್ದ ಮಂಡ್ಯ ಕ್ಷೇತ್ರದಲ್ಲಿ ಈ ಭಾರಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್ಡಿ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ತಮಗೆ ಬೆಂಬಲ ನೀಡುವಂತೆ ಕೋರಿ ಎಚ್ಡಿಕೆ ಅವರು ಸುಮಲತಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದ್ರೆ ಸುಮಲತಾ ಮಾತ್ರ ಹೆಚ್ಡಿ ಕುಮಾರಸ್ವಾಮಿಯವ್ರು ನನ್ನ ಪರ ಪ್ರಚಾರ ಮಾಡುವಂತೆ ನನಗೆ ಕರದೇ ಇಲ್ಲ ಎಂದಿದ್ದಾರೆ. ಹೀಗೆ ಇಬ್ಬರು ಕೂಡ ಮೇಲ್ನೋಟಕ್ಕೆ ಒಂದಾದಂತೆ ಕಂಡ್ರೂ ಒಳಗೊಳಗೆ ಕೆಂಡದಂಥ ಜ್ವಾಲೆ ಇಟ್ಟುಕೊಂಡಿದ್ದಾರೆ.
ಹೊಸ ದೋಸ್ತಿ.. ಹಳೇ ಕುಸ್ತಿ!
2019ರಲ್ಲಿ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಸೋಲೋಕೆ ಪ್ರಮುಖ ಕಾರಣವೇ ಸುಮಲತಾ ಅಂಬರೀಶ್. ಮಂಡ್ಯದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಜೆಡಿಎಸ್ ಪಕ್ಷದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದರು. ಯಶ್ ಹಾಗೂ ದರ್ಶನ್ ಇಬ್ಬರನ್ನ ಕಟ್ಟಿಕೊಂಡು ಜಿಲ್ಲಾಯಾದ್ಯಂತ ಸುತ್ತಾಡಿ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ರು. ಲೋಕಸಭೆಯಲ್ಲಿ ಸೋತ ನಿಖಿಲ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಸೋಲು ಕಂಡಿದ್ರು. ಹೀಗಾಗಿ ಮಗನ ರಾಜಕೀಯ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕೋಕೆ ಪ್ರಮುಖ ಕಾರಣವೇ ಸುಮಲತಾ ಎಂಬ ದ್ವೇಷ ಹೆಚ್ಡಿಕೆಗೆ ಇದ್ದೇ ಇದೆ. ಮತ್ತೊಂದೆಡೆ ಈ ಬಾರಿ ಶತಾಯ ಗತಾಯ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೆ ಟಿಕೆಟ್ ಮಿಸ್ ಆಗೋಕೆ ಕಾರಣವೇ ಕುಮಾರಣ್ಣ. ಬಿಜೆಪಿ ಜೊತೆಗಿನ ಮೈತ್ರಿಯಿಂದ ಟಿಕೆಟ್ ತನಗೇ ಬೇಕೆಂದು ಪಟ್ಟು ಹಿಡಿದು ಗಿಟ್ಟಿಸಿಕೊಂಡಿದ್ರು. ಅಲ್ದೇ 2019ರಲ್ಲಿ ಇದ್ದ ಸ್ಥಿತಿ ಈಗ ಮಂಡ್ಯದಲ್ಲಿ ಇಲ್ಲ. ಮಂಡ್ಯದ ಜನ ಸುಮಲತಾ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಈ ಬಾರಿಯೂ ಸ್ವತಂತ್ರವಾಗಿ ಕಣಕ್ಕಿಳಿದ್ರೆ ಹಿನ್ನಡೆಯಾಗಬಹುದೆಂಬ ಭಯದಿಂದಲೇ ಸುಮಲತಾ ಕಣದಿಂದ ಹಿಂದೆ ಸರಿದಿದ್ದರು. ಒಟ್ಟಾಗಿ ಮೇಲ್ನೋಟಕ್ಕೆ ಸುಮಲತಾ ಹಾಗೂ ಕುಮಾರಣ್ಣ ಒಂದಾದವರಂತೆ ತೋರಿಸಿಕೊಳ್ತಿದ್ದಾರೆ. ಆದ್ರೆ ಇಬ್ಬರ ಒಡಲಲ್ಲೂ ಕೂಡ ಬೆಟ್ಟದಷ್ಟು ಸಿಟ್ಟಿದೆ. ಜ್ವಾಲಾಮುಖಿಯಂಥ ಕೋಪವಿದೆ. ಆದ್ರೂ ತಮ್ಮ ತಮ್ಮ ರಾಜಕೀಯಕ್ಕಾಗಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.