ಈ ಎರಡೇ ಕಾರಣಕ್ಕಾ ಕುಮಾರಣ್ಣ ಸ್ಪರ್ಧೆ? – HDK ಮಂತ್ರಿಯಾದ್ರೆ ಡಾಕ್ಟರ್‌ ಕತೆಯೇನು?

ಈ ಎರಡೇ ಕಾರಣಕ್ಕಾ ಕುಮಾರಣ್ಣ ಸ್ಪರ್ಧೆ? – HDK ಮಂತ್ರಿಯಾದ್ರೆ ಡಾಕ್ಟರ್‌ ಕತೆಯೇನು?

ಕುಮಾರಸ್ವಾಮಿ ಮಂಡ್ಯದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.. ಇದು ಲೋಕಸಭಾ ಸದಸ್ಯ ಸ್ಥಾನದ ಅದೃಷ್ಟ ಪರೀಕ್ಷೆ ಅಷ್ಟೇ ಅಲ್ಲ.. ಕೇಂದ್ರದಲ್ಲಿ ಮಂತ್ರಿಯಾಗುವುದರ ಅದೃಷ್ಟ ಪರೀಕ್ಷೆ ಎಂಬ ಲೆಕ್ಕಾಚಾರ ಜೆಡಿಎಸ್‌ ಪಾಳಯದಲ್ಲಿ ನಡೆಯುತ್ತಿದೆ.. ಈ ಹಿಂದೆ ಲೋಕಸಭಾ ಸದಸ್ಯರಾಗಿದ್ದರೂ ಕೇಂದ್ರಲ್ಲಿ ಮಂತ್ರಿಯಾಗುವ ಯೋಗ ಕೂಡಿಬರಲಿಲ್ಲ.. ಆದ್ರೀಗ ಹಾಗಲ್ಲ.. ಮೋದಿ ಸರ್ಕಾರದಲ್ಲಿ ಬಿಜೆಪಿಗೆ ಫುಲ್‌ ಮೆಜಾರಿಟಿ ಇದ್ರೂ ಮಿತ್ರ ಪಕ್ಷಗಳಿಗೆ ಒಂದು ಎರಡು ಅಂತ ಮಂತ್ರಿ ಸ್ಥಾನ ಕೊಡ್ತಿದ್ದಾರೆ.. ಇದೇ ಕೋಟಾದಲ್ಲಿ ತಮಗೂ ಮಂತ್ರಿಸ್ಥಾನ ಸಿಗಬಹುದು ಎಂಬ ದೂರದ ಲೆಕ್ಕಾಚಾರ ಕುಮಾರಸ್ವಾಮಿಯವರಲ್ಲಿ ಇದ್ದಂತೆ ಕಾಣ್ತಿದೆ.. ಆದ್ರೆ ಸಮಸ್ಯೆ ಇರೋದು ಇದರಲ್ಲಿ ಅಲ್ಲ.. ಇಲ್ಲಿ ಇನ್ನೊಂದು ಕ್ಷೇತ್ರದಲ್ಲೂ ಮಂತ್ರಿಯಾಗ್ತಾರೆ ಎಂಬ ಪ್ರಚಾರ ಜೋರಾಗಿದೆ.. ಅದು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ.. ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್‌ ಅವರನ್ನು ಸೋಲಿಸಲು ಬಿಜೆಪಿ ನಾಯಕರೆಲ್ಲಾ ಡಾ.ಸಿ.ಎನ್‌.ಮಂಜುನಾಥ್‌ ಗೆದ್ದರೆ, ಮೋದಿ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವರಾಗುತ್ತಾರೆ ಎಂದು ತಾವೇ ಕ್ಯಾಬಿನೆಟ್‌ ರಚಿಸಿ, ಖಾತೆ ಹಂಚುವವರು ಎನ್ನುವಲ್ಲಿಯವರೆಗೆ ಪ್ರಚಾರ ಮಾಡ್ತಿದ್ದಾರೆ.. ಹಾಗಿದ್ದರೆ ನಿಜಕ್ಕೂ ಇಲ್ಲಿ ರಾಜಕೀಯವಾಗಿ ನಡೀತಿರೋದೇನು? ಕೇಂದ್ರದಲ್ಲಿ ಯಾರು ಮಂತ್ರಿಯಾಗುವ ಅವಕಾಶ ಎಷ್ಟಿದೆ? ಕೇಂದ್ರದಲ್ಲಿ ಮಂತ್ರಿಯಾಗ್ತಾರೆ ಎನ್ನುವ ಏಕೈಕ ಕಾರಣಕ್ಕೆ ರಾಜ್ಯದಿಂದ ಜನರು ಗೆಲ್ಲಿಸಿ ಕಳಿಸ್ತಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ‘ನಾಯಿ’ ಎಂದಿದ್ಯಾರಿಗೆ ಸಿಧು?, ಮುಂಬೈನಲ್ಲೂ ಹಾರ್ದಿಕ್ ಟ್ರೋಲ್? – ಮುಂಬೈ ಇಂಡಿಯನ್ಸ್ ಒಳಗಿನ ರಹಸ್ಯ ಬಿಚ್ಚಿಟ್ಟಿದ್ಯಾರು?

ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಮಂಡ್ಯದಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಕುಮರಾಸ್ವಾಮಿಯವರದ್ದು ಒಂದು ರೀತಿಯಲ್ಲಿ ಅಕ್ಕಿ ಮೇಲೆ ಆಸೆ.. ನೆಂಟರ ಮೇಲೆ ಪ್ರೀತಿ ಎಂಬಂತಾಗಿತ್ತು. ಒಮ್ಮೆ ನಾನು ಸ್ಪರ್ಧಿಸಲ್ಲ.. ಮಗನ ಮೇಲೆ ಒತ್ತಡ ಇದೆ ಅಂತಿದ್ರು. ಮತ್ತೊಮ್ಮೆ ನನ್ನ ಮಗ ಯಾವುದೇ ಕಾರಣಕ್ಕೂ ಎಲೆಕ್ಷನ್‌ಗೆ ನಿಲ್ಲೋದಿಲ್ಲ. ಮಂಡ್ಯದಿಂದ ಸೂಕ್ತ ಅಭ್ಯರ್ಥಿ ಕಣಕ್ಕಿಳೀತಾರೆ ಅಂತೆಲ್ಲಾ ಹೇಳಿದ್ದರು.. ಇದರ ಪ್ರಕಾರ ಒಂದು ಹಂತದಲ್ಲಿ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರೇ ಜೆಡಿಎಸ್‌ ಅಭ್ಯರ್ಥಿ ಆಗ್ತಾರೆ ಅಂತ ಜೆಡಿಎಸ್‌ ಪಾಳಯದಿಂದ ಸ್ಪಷ್ಟ ಮಾಹಿತಿ ಹೊರಬಿದ್ದಿತ್ತು.. ಪುಟ್ಟರಾಜು ಕೂಡ ಕುಮಾರಸ್ವಾಮಿ ಮಾತು ನಂಬಿ, ಎಸ್‌.ಎಂ.ಕೃಷ್ಣ ಸೇರಿದಂತೆ ಮಂಡ್ಯದ ಹಿರಿಯ ನಾಯಕರ ಆಶೀರ್ವಾದ ಪಡೆಯಲು ಶುರು ಮಾಡಿದ್ದರು.. ಅತ್ತ ಪುಟ್ಟರಾಜುವನ್ನು ಮುಂದೆ ಬಿಟ್ಟಿದ್ದ ಕುಮಾರಸ್ವಾಮಿ ಇತ್ತ ತಾವೇ ಮಂಡ್ಯದಿಂದ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದು ಸ್ಪಷ್ಟವಾಗಿತ್ತು. ಇದರ ಮುಂದುವರಿದ ಭಾಗವಾಗಿ ಮಂಡ್ಯದಲ್ಲಿ ಪುಟ್ಟರಾಜು ಅವರನ್ನು ಅಭ್ಯರ್ಥಿಯೆಂದು ಘೋಷಿಸುವ ನಿಟ್ಟಿನಲ್ಲಿ ಸಭೆಯೊಂದನ್ನು ಕರೆದಿದ್ದರು. ಆ ಸಭೆಯಲ್ಲಿ ಜೆಡಿಎಸ್‌ನ ಕೆಲ ಕಾರ್ಯಕರ್ತರು, ನಿಖಿಲ್‌ ಅವರೇ ಇಲ್ಲಿಂದ ಸ್ಪರ್ಧಿಸಬೇಕು. ಇಲ್ಲಾಂದ್ರೆ ನೀವು ಬರಬೇಕು ಅಂತ ಕುಮಾರಸ್ವಾಮಿಯವರ ಮುಂದೆಯೇ ಗಲಾಟೆ ಎಬ್ಬಿಸಿದ್ದರು. ಕಾರ್ಯಕರ್ತರು ಹಾಗೆಲ್ಲಾ ಗಲಾಟೆ ಮಾಡಿದ್ದರಲ್ಲಿ ವಿಶೇಷ ಏನೂ ಇರಲಿಲ್ಲ. ಹಾಗೆ ನೋಡಿದ್ರೆ ಒಂದು ಪಕ್ಷದ ನಾಯಕ ಅಂತ ಅನ್ನಿಸಿಕೊಂಡವರು, ಕಾರ್ಯಕರ್ತರು ಹೀಗೆಲ್ಲಾ ಗಲಾಟೆ ಮಾಡಿದ್ರು.. ಒತ್ತಾಯ ಮಾಡಿದ್ರು ಅನ್ನೋ ಕಾರಣವನ್ನೇ ಮುಂದಿಟ್ಟು ಚುನಾವಣೆಗೆ ಸ್ಪರ್ಧಿಸುವಂತಹ ದೊಡ್ಡ ನಿರ್ಧಾರಕ್ಕೆ ಬರೋದಿಲ್ಲ.. ಅದರ ಬದಲು ಕಾರ್ಯಕರ್ತರ ಮನವೊಲಿಸಿ, ನೋಡಿ ಇವ್ರೇ ನಮ್ಮ ಪಕ್ಷದ ಅಭ್ಯರ್ಥಿ.. ಅವರು ಅಭ್ಯರ್ಥಿಯಾದ್ರೂ ನಾನೇ ಅಭ್ಯರ್ಥಿ ಅಂತ ಭಾವಿಸಿ ನೀವೆಲ್ಲಾ ಕೆಲಸ ಮಾಡಬೇಕು.. ಈಗ ನೀವು ಪಕ್ಷವನ್ನು ಗೆಲ್ಲಿಸಿದ್ರಿ ಅಂದ್ರೆ ನಾನೇ ಗೆದ್ದಂತೆ ಅಂತೆಲ್ಲಾ ಹೇಳಿ ಸಮಾಧಾನ ಹೇಳುವ ಚಾಕಚಕ್ಯತೆ ರಾಜಕೀಯ ನಾಯಕರಲ್ಲಿ ಇದ್ದೇ ಇರುತ್ತದೆ.. ಆದ್ರೆ ಕುಮಾರಸ್ವಾಮಿ ಇಂತಹ ಸಮಾಧಾನ ಪಡಿಸುವ ಗೋಜಿಗೆ ಹೋಗಲೇ ಇಲ್ಲ.. ಅದರ ಬದಲು, ಆಯ್ತಪ್ಪ.. ಈಗ ಅಭ್ಯರ್ಥಿ ಯಾರು ಅಂತ ಹೇಳೋದಿಲ್ಲ.. ಆದ್ರೆ ನಿಮ್ಮ ಆಸೆಗೆ ಪೂರಕ ನಿರ್ಧಾರ ಮಾಡಿ ಬಿಡ್ತೀನಿ.. ನಿಖಿಲ್‌ ಅವರನ್ನೂ ಒಪ್ಪಿಸ್ತೀನಿ ಅಂತೆಲ್ಲಾ ಹೇಳಿ ತಮ್ಮ ಮನಸ್ಸಲ್ಲಿ ಪುಟ್ಟರಾಜು ಅವರನ್ನು ನಿಲ್ಲಿಸುವ ಏಕೈಕ ಉದ್ದೇಶ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದರು.. ಅಸಲಿಗೆ ಇದೊಂದು ಕುಮಾರಸ್ವಾಮಿ ಉರುಳಿಸಿದ ರಾಜಕೀಯ ದಾಳ ಎನ್ನವುದು ಜೆಡಿಎಸ್‌ ಕಾರ್ಯಕರ್ತರಿಗೆ ಗೊತ್ತಾಗುವ ಹೊತ್ತಿಗೆ, ಮಾಜಿ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ನಿರ್ಧಾರಕ್ಕೆ ಬಂದಾಗಿತ್ತು..

ಅಸಲಿಗೆ ಕುಮರಾಸ್ವಾಮಿಯವರಿಗೆ ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಅಭ್ಯರ್ಥಿಯಾಗಿರುವಾಗ ಮಂಡ್ಯದಲ್ಲಿ ನನ್ನ ಮಗ ನಿಖಿಲ್‌ ಕುಮಾರಸ್ವಾಮಿಯವರೇ ಅಭ್ಯರ್ಥಿಯಾದರೆ ಚೆನ್ನಾಗಿರುತ್ತದೆ ಎಂಬ ಬಯಕೆಯಿತ್ತು.. ಆದರೆ ನಿಖಿಲ್‌ ಕುಮಾರಸ್ವಾಮಿ ಮಾತ್ರ ಲೋಕಸಭೆ ಚುನಾವಣೆ ಸ್ಪರ್ಧೆಗೆ ಅದರಲ್ಲೂ ಮಂಡ್ಯದಲ್ಲಿ ಮತ್ತೊಮ್ಮೆ ಸ್ಪರ್ಧಿಸೋದಿಕ್ಕೆ ಸುತಾರಾಂ ಒಪ್ಪಿರಲಿಲ್ಲ.. ಅವರಿಗೆ ಮಂಡ್ಯದಲ್ಲಿ ಕಳೆದ ಬಾರಿ ಆದ ಸೋಲನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.. ಮೇಲಾಗಿ ಕುಮಾರಸ್ವಾಮಿ ಒಬ್ಬರನ್ನು ಬಿಟ್ಟರೆ ಅವರ ಮನೆಯಲ್ಲಿ ಬೇರೆ ಯಾರೂ ಕೂಡ ನಿಖಿಲ್‌ ಸ್ಪರ್ಧೆಗೆ ಒಮ್ಮತ ಹೊಂದಿರಲಿಲ್ಲ ಎನ್ನುವ ಮಾಹಿತಿಯಿದೆ.. ಇದೇ ಕಾರಣದಿಂದ ಕುಮಾರಸ್ವಾಮಿ ಖುದ್ದು ತಾವೇ ಚುನಾವಣೆಗೆ ನಿಲ್ಲುವ ತೀರ್ಮಾನಕ್ಕೆ ಬಂದಿದ್ದಾರೆ.. ಈ ತೀರ್ಮಾನದ ಹಿಂದೆ ಕುಮಾರಸ್ವಾಮಿಯವರದ್ದು ಎರಡು ಮುಖ್ಯ ಲೆಕ್ಕಾಚಾರಗಳಿದ್ದವು..

ಕುಮಾರ ಲೆಕ್ಕ 1 – ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗಬಹುದು

ಕುಮಾರ ಲೆಕ್ಕ 2 – ಮಗನನ್ನು ಚನ್ನಪಟ್ಟಣದಲ್ಲಿ ಶಾಸಕ ಮಾಡಬಹುದು

ಇವೆರಡೇ ಸದ್ಯ ಕುಮಾರಸ್ವಾಮಿಯವರು ಹಾಕಿರುವ ಸ್ಪಷ್ಟ ಲೆಕ್ಕಾಚಾರ.. ಉಳಿದಂತೆ ಪಕ್ಷ ಉಳಿಸಲು ನಿಂತಿದ್ದೇನೆ.. ಈ ಪಕ್ಷ ಉಳೀಬೇಕು. ಪ್ರಾದೇಶಿಕ ಪಕ್ಷ ಉಳೀಬೇಕು. ಅದಕ್ಕಾಗಿ ಬಿಜೆಪಿಗೆ ಬೆಂಬಲಿಸಿದ್ದೇನೆ ಅಂತೆಲ್ಲಾ ಕುಮರಾಸ್ವಾಮಿಯವರು ಉದ್ದುದ್ದ ಭಾಷಣ ಮಾಡುತ್ತಿರಬಹುದು. ಆದರೆ ಅವೆಲ್ಲಾ ಲೆಕ್ಕಾಚಾರದ ಆಧಾರವೂ ಕೂಡ ಈ ಎರಡು ಲೆಕ್ಕಗಳೇ. ಹೇಗಂದ್ರೆ ಕುಮರಾಸ್ವಾಮಿ ಗೆದ್ದು ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾದರು ಅಂದರೆ ಸಹಜವಾಗಿಯೇ ಜೆಡಿಎಸ್‌ಗೊಂದು ಅಧಿಕಾರದ ಬಲ ಸಿಗುತ್ತದೆ. ಅದರಿಂದ ಜೆಡಿಎಸ್‌ಗೆ ಹೊಸ ಶಕ್ತಿ ತುಂಬಲು ಕುಮಾರಸ್ವಾಮಿಯವರಿಗೆ ಸಾಧ್ಯವಾಗಬಹುದು.. ಒಕ್ಕಲಿಗ ಸಮುದಾಯದಲ್ಲೂ ಕುಮಾರಸ್ವಾಮಿಯವರಿಗೆ ಮತ್ತೆ ಹಿಡಿತ ಸಿಗಬಹುದು.. ಯಾಕಂದ್ರೆ ಡಿ.ಕೆ.ಶಿವಕುಮಾರ್‌ ರಾಜ್ಯದಲ್ಲಿ ಉಪಮುಖ್ಯಮಂತ್ರಿಯಾದ್ಮೇಲೆ, ಒಕ್ಕಲಿಗ ಸಮುದಾಯ ಹೆಚ್‌ಡಿಕೆ ಮತ್ತು ಡಿಕೆಶಿ ನಾಯಕತ್ವದ ನಡುವಿನ ತುಲನೆ ಆರಂಭಿಸಿದೆ. ಈ ತಕ್ಕಡಿಯಲ್ಲಿ ತಾನು ಮೇಲಿರಬೇಕು ಅಂದ್ರೆ ತನಗೂ ಅಧಿಕಾರ ಇರಲೇ ಬೇಕು ಎನ್ನುವುದು ಕುಮಾರಸ್ವಾಮಿಯವರ ಲೆಕ್ಕಾಚಾರ. ಇದೇ ಕಾರಣಕ್ಕಾಗಿ ಈಗ ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಬೇಕು ಎನ್ನುವುದನ್ನು ಮೊದಲ ಲೆಕ್ಕವಾಗಿ ಇಟ್ಟುಕೊಂಡಿದ್ದಾರೆ.. ತಾವು ಮಂಡ್ಯದಲ್ಲಿ ಗೆದ್ದರೆ ತೆರವಾಗುವ ಚನ್ನಪಟ್ಟಣ ಮತಕ್ಷೇತ್ರದಲ್ಲಿ ತನ್ನ ಮಗನನ್ನೇ ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕು ಎನ್ನುವುದು ಎರಡನೇ ಲೆಕ್ಕಾಚಾರ ಕುಮಾರಸ್ವಾಮಿಯವರದ್ದು. ಒಂದು ವೇಳೆ ಮೊದಲ ಲೆಕ್ಕಾಚಾರ ಸರಿಯಾಗಿಬಿಟ್ಟರೆ, ಎರಡನೆಯದ್ದನ್ನು ಯಶಸ್ವಿಯಾಗಿ ದಡ ಸೇರಿಸಬಹುದು ಎಂದು ಕುಮಾರಸ್ವಾಮಿ ಯೋಚಿಸಿದ್ದಾರೆ. ಸದ್ಯ ಕುಮರಾಸ್ವಾಮಿಯವರಿಗೆ ತಾನು, ತನ್ನ ಮಗ ಬಿಟ್ಟರೆ ಪಕ್ಷದಲ್ಲಿ ಬೇರೆ ಯಾರೂ ಕಾಣಿಸುತ್ತಿಲ್ಲ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ.

ರಾಜಕೀಯದ ಓನಾಮ ಗೊತ್ತಿರುವವರಿಗೂ ಇಂತದ್ದೊಂದು ಸ್ಪಷ್ಟತೆ ಸಿಗಬಹುದು.. ಈ ಎರಡು ಲೆಕ್ಕಾಚಾರದಲ್ಲಿ ಮೊದಲದ್ದನ್ನು ಯಶಸ್ವಿಯಾಗಿ ಸಾಧಿಸಿದರೂ ಎರಡನೇಯದ್ದನ್ನು ಗುರಿ ಮುಟ್ಟಿಸುವುದು ಅಷ್ಟು ಸುಲಭವಿಲ್ಲ ಎನ್ನುವುದು ಕೂಡ ಅಷ್ಟೇ ಸ್ಪಷ್ಟವಿದೆ.. ಯಾಕಂದ್ರೆ ಚನ್ನಪಟ್ಟಣ ಅಷ್ಟು ಸುಲಭವಾಗಿ ಜೆಡಿಎಸ್‌ಗೆ ಒಲಿಯುವ ಕೋಟೆಯಂತೂ ಅಲ್ಲ.. ಬೊಂಬೆ ನಾಡಿನ ಜನರು ರಾಜಕೀಯ ಬೊಂಬೆಯಾಟವನ್ನು ಚೆನ್ನಾಗಿಯೇ ಆಡಬಲ್ಲರು.. ಹಾಗಾಗಿ ಕುಮಾರಸ್ವಾಮಿಯವರ ಎರಡನೇ ಲೆಕ್ಕಾಚಾರ ಗುರಿ ಮುಟ್ಟುವುದು ಕಷ್ಟದ ಕೆಲಸ ಅಂತ ಈಗಲೇ ಹೇಳಿದರೂ ಅತಿಶಯೋಕ್ತಿಯೇನಲ್ಲ..

ಕುಮಾರಸ್ವಾಮಿ ಕೇಂದ್ರ ಮಂತ್ರಿಯಾದರೆ ಡಾ.ಮಂಜುನಾಥ್‌ ಕತೆಯೇನು?

ಒಂದು ಕಡೆ ಪ್ರಧಾನಿ ಮೋದಿ ಕುಟುಂಬ ರಾಜಕೀಯದ ವಿರುದ್ಧ ಮಾತಾಡ್ತಾರೆ.. ಇತ್ತ ಕುಮಾರಸ್ವಾಮಿಯವರು ತಾವು ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ.. ಮತ್ತೊಂದೆಡೆ ಬಿಜೆಪಿ ನಾಯಕರು ಡಾ. ಮಂಜುನಾಥ್‌ಗೆ ಆಲ್‌ರೆಡಿ ಖಾತೆ ಹಂಚಿಕೆ ಮಾಡಿಯೇ ಮಂತ್ರಿಯಾಗ್ತಾರೆ ಎಂದು ಹೇಳಿಕೊಂಡು ಓಡಾಡ್ತಿದ್ದಾರೆ.. ಆದ್ರೆ ಒಂದು ವೇಳೆ ಕುಮಾರಸ್ವಾಮಿ ಮಂತ್ರಿಯಾದ್ರೆ ಆಗಲೂ ಡಾ.ಮಂಜುನಾಥ್‌ ಅವರು ಮಂತ್ರಿಯಾಗಲು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.. ಅಂತಹ ಸಂದರ್ಭ ಬಂದರೆ ಕುಮಾರಸ್ವಾಮಿಯವರಿಗಾಗಿ ಡಾ.ಮಂಜುನಾಥ್‌ ದಾರಿ ಮಾಡಿಕೊಡಬೇಕಾಬಹುದು ಎನ್ನುವ ಮಾತು ಆಲ್‌ರೆಡಿ ಜೆಡಿಎಸ್‌ನಲ್ಲೇ ಶುರುವಾಗಿದೆ.. ಆದರೆ ಇಲ್ಲಿ ಒಂದು ಮಾತು ಸ್ಪಷ್ಟಪಡಿಸಿಬಿಡುತ್ತೇವೆ.. ಅದೇನಂದ್ರೆ ಇವೆಲ್ಲಾ ರಾಜ್ಯ ರಾಜಕೀಯದಲ್ಲಿ ನಡೀತಿರುವ ಮಾತುಗಳಷ್ಟೇ.. ನಿಜಕ್ಕೂ ಮೋದಿ-ಅಮಿತ್‌ ಶಾ ಜೋಡಿ ಮಂತ್ರಿ ಪದವಿ, ಖಾತೆ ಹಂಚಿಕೆಯವರೆಗೂ ಯೋಚಿಸಿರುವ ಸಾಧ್ಯತೆ ಕಡಿಮೆಯಿದೆ.. ಆದರೆ ಕಮಲದಳ ನಾಯಕರು ಮಾತ್ರ ದಿನಕ್ಕೊಂದು ರೀತಿಯಲ್ಲಿ ಮೋದಿ ಸಂಪುಟ ರಚನೆಯ ಕಸರತ್ತನ್ನು ರಾಜ್ಯದಲ್ಲಿ ಮಾಡುತ್ತಲೇ ಜನರನ್ನು ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ..

 ಅಂದು ಬಿ.ಎಸ್‌.ಯಡಿಯೂರಪ್ಪಗೆ ತಪ್ಪಿತ್ತು ಮಂತ್ರಿಗಿರಿ!

ಇದೇ ನೋಡಿ ರಾಜಕೀಯ ಎನ್ನುವುದು.. ಈಗ ಕುಮಾರಸ್ವಾಮಿಯವರು ಎಲೆಕ್ಷನ್‌ಗೆ ನಿಲ್ಲುವಾಗ್ಲೇ ಕೇಂದ್ರದಲ್ಲಿ ಮಂತ್ರಿಯಾಗ್ತಾರೆ ಎಂಬ ಮಾತು ಶುರುವಾಗಿದೆ.. ಡಾ.ಮಂಜುನಾಥ್‌ ಹೆಸರಲ್ಲೂ ಇದೇ ಚರ್ಚೆ ನಡೀತಿದೆ.. ಆದ್ರೆ ಇಲ್ಲೊಂದು ಅಂಶ ನೆನಪು ಮಾಡಿಕೊಳ್ಳಬೇಕು.. 2014ರಲ್ಲಿ ಬಿ.ಎಸ್‌.ಯಡಿಯೂರಪ್ಪನವರು ಶಿವಮೊಗ್ಗದಿಂದ ಲೋಕಸಭೆಗೆ ಸ್ಪರ್ಧಿಸಿದಾಗ, ಬಿಜೆಪಿ ನಾಯಕರೆಲ್ಲಾ ಅವರು ಗೆಲ್ತಾರೆ.. ಕೇಂದ್ರದಲ್ಲಿ ಕೃಷಿ ಮಂತ್ರಿಯಾಗ್ತಾರೆ.. ಕೃಷಿಕರಿಗೆಲ್ಲಾ ಅನುಕೂಲ ಮಾಡಿಕೊಡ್ತಾರೆ ಎಂದೆಲ್ಲಾ ಪ್ರಚಾರ ಮಾಡಿದ್ದರು.. ಆದ್ರೆ ಪ್ರಧಾನಮಂತ್ರಿ ಮೋದಿ ಸಚಿವ ಸಂಪುಟ ರಚಿಸಿದಾಗ ಡಿ.ವಿ.ಸದಾನಂದಗೌಡ ಹಾಗೂ ಅನಂತಕುಮಾರ್ ಅವರಿಗೆ ಮಂತ್ರಿಗಿರಿ ಸಿಕ್ಕಿತ್ತೇ ಹೊರತು, ಯಡಿಯೂರಪ್ಪ ಕಡೆಗೆ ತಲೆಯೆತ್ತಿಯೂ ನೋಡಿರಲಿಲ್ಲ.. ಹಿರಿಯ ನಾಯಕ ಯಡಿಯೂರಪ್ಪಗೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗ ಕೂಡಿ ಬಂದಿರಲೇ ಇಲ್ಲ.. ಯಡಿಯೂರಪ್ಪನವರಿಗೇ ಅಂತಹ ಸ್ಥಿತಿ ಬಂದಿದ್ದಾಗ ಈಗ ಕುಮರಾಸ್ವಾಮಿಯವರು ಮಂತ್ರಿಯಾಗ್ತಾರೆ ಅಂತೆಲ್ಲಾ ಪ್ರಚಾರ ಮಾಡೋದು ಕೂಸು ಹುಟ್ಟೋಕು ಮೊದ್ಲೇ ಕುಲಾವಿ ಹೊಲಿಸಿದಂತಿದೆ.. ಯಾಕಂದ್ರೆ ಕೇಂದ್ರ ಸಚಿವ ಸಂಪುಟದ ರಚನೆ ವಿಚಾರದಲ್ಲಿ ಮೋದಿ-ಅಮಿತ್‌ ಶಾ ಜೋಡಿ ಎಂತಹ ನಿರ್ಧಾರಕ್ಕೆ ಬರುತ್ತದೆ ಎನ್ನುವುದು ಯಾರ ಕಲ್ಪನೆಗೂ ನಿಲುಕದ ವಿಚಾರ.. ಇಲ್ದೇ ಹೋದ್ರೆ ಯಡಿಯೂರಪ್ಪ ಅವರಿಗೆ ಸಿಗದ ಕೇಂದ್ರ ಕೃಷಿ ಮಂತ್ರಿ ಖಾತೆ, ಮುಂದೆ ಶೋಭಾ ಕರಂದ್ಲಾಜೆಗೆ ಸಿಗುತ್ತದೆ ಎಂದು ಯಾರಾದ್ರೂ ಯೋಚಿಸೋದಿಕ್ಕೆ ಸಾಧ್ಯವಿತ್ತಾ ಹೇಳಿ.. ಇರಲಿ.. ಈಗ ಲೋಕಸಭೆ ಚುನಾವಣೆ ನಡೀತಿರೋದ್ರಿಂದ ಪ್ರತಿಯೊಬ್ಬರೂ ಸಂಸದ.. ಮಂತ್ರಿಯ ಕನಸು ಕಾಣಬಹುದು.. ಆದರೆ ಅಂತಿಮವಾಗಿ ಯಾರನ್ನು ಲೋಕಸಭೆಗೆ ಕಳಿಸಬೇಕು.. ಯಾರನ್ನು ಮನೆಗೆ ಕಳಿಸಿ ವಿಶ್ರಾಂತಿ ಕೊಡಿಸಬೇಕು ಎನ್ನುವುದು ಜನರಿಗೆ ಬಿಟ್ಟಿರುವ ವಿಚಾರ.

Shwetha M