HDK ತೋರಿಸ್ತಿದ್ದ ಪೆನ್ ಡ್ರೈವ್ ಇದೇನಾ?| ಮಹಿಳೆಯರಿಗೆ ನಟಿ ಶ್ರುತಿ ಅವಮಾನ | ಧರ್ಮದ ಹೆಸರಲ್ಲಿ ಮತ ಮೋದಿಗೆ ಸಂಕಷ್ಟ | ಇಂದಿನ ಪ್ರಮುಖ ಸುದ್ದಿಗಳು

HDK ತೋರಿಸ್ತಿದ್ದ ಪೆನ್ ಡ್ರೈವ್ ಇದೇನಾ?| ಮಹಿಳೆಯರಿಗೆ ನಟಿ ಶ್ರುತಿ ಅವಮಾನ | ಧರ್ಮದ ಹೆಸರಲ್ಲಿ ಮತ ಮೋದಿಗೆ ಸಂಕಷ್ಟ | ಇಂದಿನ ಪ್ರಮುಖ ಸುದ್ದಿಗಳು

ಗ್ಯಾರಂಟಿ ಯೋಜನೆ ಟೀಕಿಸುವ ಭರದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ನಾಯಕಿ ಶ್ರುತಿ ಅವರಿಗೆ ರಾಜ್ಯ ಮಹಿಳಾ ಆಯೋಗದಿಂದ ನೋಟಿಸ್ ನೀಡಲಾಗಿದೆ. ಇತ್ತೀಚೆಗೆ ಚುನಾವಣಾ ಪ್ರಚಾರ ಭಾಷಣ ಮಾಡುವಾಗ, ಗ್ಯಾರಂಟಿ ಯೋಜನೆಗಳಿಂದ, ಅದರಲ್ಲೂ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಎಲ್ಲೆಲ್ಲಿಗೋ ಹೋಗುತ್ತಿದ್ದಾರೆ. ಇದು ಅವರ ಪತಿಯ ಚಿಂತೆ ಹೆಚ್ಚಿಸಿದೆ ಎಂಬರ್ಥದಲ್ಲಿ ನಟಿ ಶ್ರುತಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಮಹಿಳಾ ಆಯೋಗ, ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ನೋಟಿಸ್ ನೀಡಿದೆ.

ಬಿಜೆಪಿಗೆ ಬಿಗ್‌ ಶಾಕ್‌ ಕೊಟ್ಟ ವರುಣ್ ಗಾಂಧಿ!

ಉತ್ತರಪ್ರದೇಶದ ಏಕೈಕ ಕಾಂಗ್ರೆಸ್ ಭದ್ರಕೋಟೆಯನ್ನು ಕಬಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ, ಈ ಬಾರಿ ವರುಣ್ ಗಾಂಧಿಗೆ ಟಿಕೆಟ್ ಕೊಡಲು ಪ್ಲಾನ್ ಮಾಡಿತ್ತು. ಆದರೆ, ಇಂದಿರಾ ಗಾಂಧಿ ಮೊಮ್ಮಗನಾದ ವರುಣ್ ಗಾಂಧಿ ಈ ಟಿಕೆಟ್ ಆಫರ್ ತಿರಸ್ಕರಿಸಿದ್ದಾರೆ. ಸೋನಿಯಾ ಗಾಂಧಿ ಈ ಬಾರಿ ರಾಯ್ ಬರೇಲಿಯಲ್ಲಿ ಸ್ಪರ್ಧಿಸುತ್ತಿಲ್ಲ. ಪ್ರಿಯಾಂಕಾ ಗಾಂಧಿಯನ್ನು ಕಾಂಗ್ರೆಸ್ ಕಣಕ್ಕಿಳಿಸಬಹುದು ಎನ್ನಲಾಗುತ್ತಿದೆ. ಹೀಗಾಗಿ, ಪ್ರಿಯಾಂಕಗೆ ಪ್ರತಿಸ್ಪರ್ಧಿಯಾಗಿ ವರುಣ್ ಗಾಂಧಿ ಸೂಕ್ತ ಎಂಬುದುವುದು ಬಿಜೆಪಿ ಲೆಕ್ಕಾಚಾರ ಆಗಿತ್ತು. ಆದರೆ ಈಗ ವರುಣ್ ಸಹೋದರಿ ವಿರುದ್ಧ ಸ್ಪರ್ಧೆ ಮಾಡುವುದನ್ನು ತಿರಸ್ಕರಿಸಿದ್ದು, ಬಿಜೆಪಿ ಪ್ಲಾನ್ ಉಲ್ಟಾ ಆಗಿದೆ.

ಹೆಚ್‌ಡಿಕೆ ಪೆನ್ ಡ್ರೈವ್ ಸಿಕ್ರೇಟ್‌ ರಿವೀಲ್‌!

ಹಾಸನ ಪೆನ್ ಡ್ರೈವ್ ಪ್ರಕರಣ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಈ ಪ್ರಕರಣವನ್ನು ಎಸ್ಐಟಿ ಮೂಲಕ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಕೋರಿದ್ದಾರೆ. ಹಾಸನ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿರುವ ಅಸಭ್ಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ಮಹಿಳೆಯರ ಮುಖಗಳು ಕೂಡಾ ಕಾಣುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಮಹಿಳೆಯರ ಹಾಗೂ ಅವರ ಕುಟುಂಬದ ಘನತೆಗೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಮತ್ತೊಂದೆಡೆ ಪೆನ್ ಡ್ರೈವ್ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಹಲವು ಪ್ರಶ್ನೆಗಳನ್ನ ಮುಂದಿಟ್ಟಿದೆ. ಕುಮಾರಸ್ವಾಮಿಯವರೇ, ನೀವು ತೋರಿಸಿ, ತೋರಿಸಿ ಜೇಬೋಳಗೆ ಇಳಿಸಿಕೊಳ್ಳುತ್ತಿದ್ದ ಪೆನ್ ಡ್ರೈವ್‌ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ? ಹಾಸನದ ಬೀದಿ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ ಡ್ರೈವ್ ನಿಮ್ಮದೇನಾ? ದಾರಿ ತಪ್ಪಿ ನಡೆದವರು ಯಾರು ಎನ್ನುವ ಸಂಗತಿ ಬಟಾಬಯಲಾಗಿರುವಾಗ ರಾಜ್ಯದ ಜನರಿಗೆ ಮುಖ ತೋರಿಸಲಾಗುತ್ತಿಲ್ಲವೇ?? ಅಂತಾ ಕಾಂಗ್ರೆಸ್ ಪ್ರಶ್ನಿಸಿದೆ.

 ಬೆಂ.ಗ್ರಾದಲ್ಲಿ ಕಾಂಗ್ರೆಸ್ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ

ಬೆಂಗಳೂರು ಗ್ರಾಮಾಂತರದ ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರು ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯ ಕಾರ್ಡ್ ಹಂಚಿಕೆ ಮಾಡ್ತಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಐದು ಯೋಜನೆಯನ್ನ ಕಾರ್ಡ್ ನಲ್ಲಿ ಪ್ರಿಂಟ್ ಮಾಡಿಸಿ, ಬೆಳ್ಳಿ ಬಟ್ಟಲಿನ ಗಿಫ್ಟ್ ನ್ನು ಕಾಂಗ್ರೆಸ್ ಕಾರ್ಯಕರ್ತರು ಹಂಚಿಕೆ ಮಾಡ್ತಿದ್ರು ಅನ್ನೋದು ಜೆಡಿಎಸ್ ಕಾರ್ಯಕರ್ತರ ಆರೋಪ. ಬಟ್ಟಲು, ಕುಂಕುಮ ಹಾಗು ಅಕ್ಷತೆ ಗಿಫ್ಟ್ ಹಂಚಿಕೆ ಮಾಡ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡಿದ್ದಾರೆ. ರಾಮನಗರದ ನೆಲಮಲೆ ಗ್ರಾಮದಲ್ಲಿ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನ ಅಡ್ಡಹಾಕಿ ಜೆಡಿಎಸ್ ಕಾರ್ಯಕರ್ತರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಸಮರ್ಥನೆ ನೀಡಿರುವ ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಯೋಜನೆಯನ್ನು ನಾವು ಹೇಳುತ್ತಿದ್ದೇವೆ ಅಂತಾ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್ ಡಿ ಕುಮಾರಸ್ವಾಮಿ ಅವರು, ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಗಿಫ್ಟ್ ಕಾರ್ಡುಗಳನ್ನು ಹಂಚಿದೆ. ಪಾರದರ್ಶಕ , ಮುಕ್ತ ಚುನಾವಣೆ ನಡೆಸುವಲ್ಲಿ ಚುನಾವಣೆ ಆಯೋಗ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

 ಪ್ರಧಾನಿ ಮೋದಿಗೆ ಅನರ್ಹತೆ ಸಂಕಷ್ಟ!

ಹಿಂದೂ ಹಾಗೂ ಸಿಖ್ ದೇವತೆಗಳ ಹೆಸರಿನಲ್ಲಿ ಹಾಗೂ ಪೂಜಾ ಸ್ಥಳಗಳ ಹೆಸರಿನಲ್ಲಿ ಪ್ರಧಾನಿ ಮೋದಿ ಅವರು ಬಿಜೆಪಿಗೆ ಮತ ಹಾಕುವಂತೆ ಮತದಾರರಿಗೆ ಕೇಳಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ, ಸರ್ಕಾರದ ವಿಮಾನ, ಹೆಲಿಕಾಪ್ಟರ್‌ನಲ್ಲಿ ದೇಶಾದ್ಯಂತ ಸುತ್ತಾಡಿ ಪ್ರಧಾನಿ ಮೋದಿ ಅವರು ಮತ ಯಾಚಿಸುತ್ತಿದ್ಧಾರೆ ಎಂದು ಆರೋಪಿಸಿ ಅವರ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಆರೋಪದ ಮೇಲೆ ಪ್ರಧಾನಿ ಮೋದಿ ಅವರನ್ನು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೋರಿ ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಹೈಕೋರ್ಟ್ ಏಪ್ರಿಲ್ 29ರಂದು ಸೋಮವಾರ ಕೈಗೆತ್ತಿಕೊಳ್ಳಲಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ‌ – 189 ಕೇಸ್ ದಾಖಲು

ನೀತಿ ಸಂಹಿತೆ ಉಲ್ಲಂಘನೆ ಆರೋಪದ ಅಡಿಯಲ್ಲಿ ಬುಧವಾರದವರೆಗೂ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ 189 ಪ್ರಕರಣ ದಾಖಲಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇವುಗಳಲ್ಲಿ ದ್ವೇಷಪೂರಿತ ಭಾಷಣ 23, ಮತದಾರರನ್ನು ಪ್ರಚೋದಿಸಲು ಯತ್ನಿಸಿದ ಆರೋಪದಡಿ 28, ಧಾರ್ಮಿಕ ಸ್ಥಳಗಳ ದುರ್ಬಳಕೆ ಅಡಿಯಲ್ಲಿ 25 ಮತ್ತು ಮಕ್ಕಳನ್ನು ಪ್ರಚಾರಕ್ಕಾಗಿ ಬಳಸಿಕೊಂಡ ಆರೋಪದಡಿ 15 ಪ್ರಕರಣಗಳು ದಾಖಲಾಗಿವೆ.

Shwetha M

Leave a Reply

Your email address will not be published. Required fields are marked *