ನನಗೆ ಸೋಲಿನ ನೋವು.. ಕಾಂಗ್ರೆಸ್ ಗೆ ಗೆದ್ದ ಅಹಂ – ಪಕ್ಷ ವಿಸರ್ಜನೆ ಬಗ್ಗೆ ಕಾಲೆಳೆದವರಿಗೆ ಹೆಚ್​ಡಿಕೆ ತಿರುಗೇಟು!

ನನಗೆ ಸೋಲಿನ ನೋವು.. ಕಾಂಗ್ರೆಸ್ ಗೆ ಗೆದ್ದ ಅಹಂ – ಪಕ್ಷ ವಿಸರ್ಜನೆ ಬಗ್ಗೆ ಕಾಲೆಳೆದವರಿಗೆ ಹೆಚ್​ಡಿಕೆ ತಿರುಗೇಟು!

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಜೆಡಿಎಸ್ ಇನ್ನೂ ಕೂಡ ಆಘಾತದಿಂದ ಹೊರ ಬಂದಿಲ್ಲ. ಪಕ್ಷದ ಭವಿಷ್ಯ ನೆನೆದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚಿಂತೆಗೀಡಾಗಿದ್ದಾರೆ. ಇದರ ನಡುವೆ ವಿಪಕ್ಷಗಳ ನಾಯಕರು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರು ಕೇಳುತ್ತಿರುವ ಪ್ರಶ್ನೆಗಳು ಹೆಚ್​ಡಿಕೆಯನ್ನ ಕೆರಳುವಂತೆ ಮಾಡಿದೆ. ಹೀಗಾಗಿ ಟ್ವಿಟ್ಟರ್​ನಲ್ಲಿಯೇ ಖಡಕ್ ಉತ್ತರ ನೀಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಪಕ್ಷ ವಿಸರ್ಜನೆ ಬಗ್ಗೆ ಹೆಚ್​.ಡಿ ಕುಮಾರಸ್ವಾಮಿ ನೀಡಿದ್ದ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡು ಕೆಲ ಕಾಂಗ್ರೆಸ್ ನಾಯಕರು ಕಾಲೆಳೆಯುತ್ತಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ  ಹೆಚ್​ಡಿಕೆ, ಕೆಲವರ ವಿವೇಕರಹಿತ ಹೇಳಿಕೆಗಳಿಗೆ ಉತ್ತರಿಸುವುದು ಬೇಡ ಎಂದು ಭಾವಿಸಿದ್ದೆ. ನಾನು ಸೋತ ನೋವಿನಲ್ಲಿದ್ದೇನೆ. ಕಾಂಗ್ರೆಸ್ ನವರು ಗೆದ್ದ ಅಹಂನಲ್ಲಿ ಇದ್ದಾರೆ. ಅಹಂ ಅಳಿಯುತ್ತದೆ ಅನ್ನುವ ಕನಿಷ್ಠ ಅರಿವು ಅವರಿಗೆ ಇದ್ದಂತೆ ಇಲ್ಲ. ಆ ಅರಿವು ಬರುವ ಕಾಲವೂ ದೂರವಿಲ್ಲ. ಕಾಯುವ ತಾಳ್ಮೆ ನನಗಿದೆ. ಚುನಾವಣೆ ಫಲಿತಾಂಶ ಬಂದಿದೆ, ನನಗೆ ಜನರು 123 ಕ್ಷೇತ್ರ ಕೊಡಲಿಲ್ಲ. ಈಗ ಪಂಚರತ್ನ ಜಾರಿ ಹಾಗೂ ಪಕ್ಷ ವಿಸರ್ಜನೆ ಪ್ರಶ್ನೆ ಎಲ್ಲಿ? ಸಾಮಾನ್ಯಜ್ಞಾನವೇ ಇಲ್ಲದ ಸಚಿವರಿಗೆ ಈ ಪರಿ ಅಜ್ಞಾನವಿದೆ ಎಂದು ನಾನಂತೂ ಎಣಿಸಿರಲಿಲ್ಲ. ಇಷ್ಟು ಅವಿವೇಕವುಳ್ಳ ಇವರ ಮುಂದಿನ ಆಡಳಿತದ ಬಗ್ಗೆ ಈಗಲೇ ಆತಂಕವಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಸಿದ್ದು ಭೇಟಿಗೆ ವರುಣಾ ಕ್ಷೇತ್ರದ ಜನರಿಗೆ ಮುಕ್ತ ಅವಕಾಶ – ಐಡಿ ಚೆಕ್ ಮಾಡಿ ಬಿಡಲು ಪೊಲೀಸರಿಗೆ ಸೂಚನೆ!

ಹಾಗೇ ಪಕ್ಷ ವಿಸರ್ಜನೆ ಯಾವಾಗ? ಎಂದು ಪ್ರಶ್ನಿಸುವವರ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪಕ್ಷ ವಿಸರ್ಜನೆ, ಅಂತಿಮ ಸಂಸ್ಕಾರದ ಹೇಳಿಕೆ ಕೊಟ್ಟ ಸಂಸ್ಕಾರಹೀನರಿಗೆ ಹೇಳುವುದು ಇಷ್ಟೇ. ನನಗೆ 123 ಸೀಟು ಬಂದಿಲ್ಲ, ಪಂಚರತ್ನ ಜಾರಿಗೆ ಜನರು ಅವಕಾಶವನ್ನೂ ಕೊಟ್ಟಿಲ್ಲ, ಹಾಗಾಗಿ ಪಕ್ಷವನ್ನು ವಿಸರ್ಜನೆ ಮಾಡುವುದೂ ಇಲ್ಲ. ಇನ್ನೇನಾದರೂ ಅನುಮಾನ ಇದ್ದವರು ಬರಲಿ, ಅಂಥವರ ಅಜ್ಞಾನ ಹೋಗಲಾಡಿಸುತ್ತೇನೆ ಎಂದಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಉತ್ತರ ಕನ್ನಡ ಜಿಲ್ಲೆ ಹಳಿಯಾಳದಲ್ಲಿ ಪ್ರಚಾರದ ವೇಳೆ ಈ ಬಾರಿ ಸರ್ಕಾರ ರಚಿಸಲು ನಮಗೆ ಬಹುಮತ ಸಿಗದಿದ್ದರೆ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

suddiyaana