ಮಂಡ್ಯ ರಣಕಣಕ್ಕೆ ಧುಮುಕಿದ ಹೆಚ್‌ಡಿಕೆ – ಕಾಂಗ್ರೆಸ್ ಗೆ ಸುಮಲತಾ ಸಪೋರ್ಟ್​?

ಮಂಡ್ಯ ರಣಕಣಕ್ಕೆ ಧುಮುಕಿದ ಹೆಚ್‌ಡಿಕೆ – ಕಾಂಗ್ರೆಸ್ ಗೆ ಸುಮಲತಾ ಸಪೋರ್ಟ್​?

ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಅಖಾಡದಲ್ಲಿ ಮೈತ್ರಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಾವೇ ಅಭ್ಯರ್ಥಿ ಅನ್ನೋ ಬಗ್ಗೆ ಸುಳಿವು ನೀಡಿದ್ದಾರೆ. ಮಂಡ್ಯ ಕಾರ್ಯಕರ್ತರು ಮತ್ತು ಚನ್ನಪಟ್ಟಣ ಕಾರ್ಯಕರ್ತರ ನಡುವಿನ ಫೈಟ್ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಚನ್ನಪಟ್ಟಣದ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ಮಂಡ್ಯದಿಂದ ಕಣಕ್ಕಿಳಿಯಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಒಂದ್ಕಡೆ ಕುಮಾರಣ್ಣ ಮಂಡ್ಯದಿಂದ ಕಣಕ್ಕಿಳಿಯೋಕೆ ಸಜ್ಜಾಗ್ತಿದ್ರೆ ಅತ್ತ ಸಂಸದೆ ಸುಮಲತಾ ಅಂಬರೀಶ್ ಬೇರೆಯದ್ದೇ ಪ್ಲ್ಯಾನ್ ಮಾಡಿದ್ದಾರೆ. ಹೀಗಾಗಿ ಸುಮಲತಾರನ್ನ ಮನವೊಲಿಸಲು ಬಿಜೆಪಿ ಸರ್ಕಸ್ ಆರಂಭಿಸಿದೆ. ಅಷ್ಟಕ್ಕೂ ಹೆಚ್​ಡಿಕೆಯೇ ಮಂಡ್ಯ ಕಣಕ್ಕೆ ಇಳಿಯುತ್ತಿರೋದೇಕೆ..? ಸುಮಲತಾ ನಡೆ ಏನು..? ಬಿಜೆಪಿ ಮಾಸ್ಟರ್ ಪ್ಲ್ಯಾನ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ನಟ ಕಿಚ್ಚ ಸುದೀಪ್ vs ಎಮ್.ಎನ್.ಕುಮಾರ್ ಕೇಸ್ – ಸುದೀಪ್ ದಾಖಲಿಸಿದ್ದ ಕೇಸ್ ರದ್ದುಪಡಿಸಲು ಕೋರ್ಟ್ ನಕಾರ!

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫೈಕಿ ಮೂರು ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಮಂಡ್ಯ , ಹಾಸನ ಮತ್ತು ಕೋಲಾರ ಕ್ಷೇತ್ರಗಳು. ಇದೀಗ ಮಂಡ್ಯದಿಂದ ಖುದ್ದು ಹೆಚ್ ಡಿ ಕುಮಾರಸ್ವಾಮಿಯೇ ಸ್ಪರ್ಧಿಸೋಕೆ ಸಜ್ಜಾಗಿದ್ದಾರೆ. ಇದೇ ವೇಳೆ ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ತಲೆಕೊಡಲು ಸಿದ್ಧ ಎಂದು ಹೇಳುವ ಮೂಲಕ ಮತದಾರರ ಬುಟ್ಟಿಗೆ ಕೈ ಹಾಕಿದ್ದಾರೆ. ಅಭ್ಯರ್ಥಿ ಘೋಷಣೆ ವಿಚಾರವಾಗಿ ಸಭೆ ನಡೆಸಿದ ಹೆಚ್ ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೇಳಿದ್ದಾರೆ.

HDK ಮೈತ್ರಿ ಅಭ್ಯರ್ಥಿ! 

ಕರ್ನಾಟಕದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ 28 ಕ್ಷೇತ್ರಗಳನ್ನೂ ಗೆಲ್ಲಬೇಕೆಂಬುದು ನಮ್ಮ ಗುರಿ ಆಗಿದೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರ ತಿರ್ಮಾನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ. ರಾಮನಗರ ಬಿಟ್ಟು ನಾನು ಹೋಗುವುದಿಲ್ಲ, ಈ ಪಕ್ಷದ ಉಳಿವಿಗಾಗಿ ಒಂದು ತಿರ್ಮಾನ ಕೈಗೊಳ್ಳಬೇಕಾಗಿದೆ. ಮಂಡ್ಯದಲ್ಲಿ ನಿಖಲ್ ಸ್ಪರ್ಧೆ ಮಾಡುವುದಕ್ಕೆ ಆಗುತ್ತಿಲ್ಲ. ಮಂಡ್ಯಯ ಅಭಿವೃದ್ಧಿ ಆಗಬೇಕು ಈ ಹಿನ್ನೆಲೆಯಲ್ಲಿ ನಾನೇ ತಲೆ ಕೊಡ್ತಿನಿ ಎನ್ನುವ ಮೂಲಕ ಮಂಡ್ಯದಲ್ಲಿ ನಾನೇ ಸ್ಪರ್ಧೆ ಮಾಡ್ತಿನಿ ಎಂದು ಅಧಿಕೃತವಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆ ಅವರು. ನನ್ನ ಅಷ್ಟು ಸುಲಭವಾಗಿ ರಾಮನಗರ ಜಿಲ್ಲೆಯಿಂದ ಓಡಿಸಲು ಆಗುವುದಿಲ್ಲ. ನಾನು ಭೂಮಿಗೆ ಹೋಗುವವರೆಗೂ ನನ್ನ ಹೃದಯಲ್ಲಿ ರಾಮನಗರ ಇರುತ್ತದೆ. ಮಂಡ್ಯ , ಜೆಡಿಎಸ್ ನ ಹೃದಯ ಭಾಗ ಆಗಿದೆ ಎಂದಿದ್ದಾರೆ.

ಹೀಗೆ ಹೆಚ್​ಡಿಕೆ ಚುನಾವಣೆಗೆ ಸಿದ್ಧವಾಗ್ತಿದ್ರೆ ಅತ್ತ ಸುಮಲತಾ ಮಾತ್ರ ಇನ್ನೂ ಗೊಂದಲದಲ್ಲೇ ಇದ್ದಾರೆ. ಕಳೆದ ಬಾರಿ ಏಕಾಂಗಿಯಾಗಿ ಗೆದ್ದಿದ್ದ ಸುಮಲತಾ ಈ ಸಲ ಬಿಜೆಪಿಗೆ ಸಪೋರ್ಟ್ ಮಾಡಿದ್ದರು. ಜೊತೆಗೆ ಬಿಜೆಪಿ ಟಿಕೆಟ್ ಕೊಟ್ಟೇ ಕೊಡುತ್ತದೆ ಎಂದು ನಂಬಿದ್ರು. ಆದ್ರೆ ಅಂತಿಮವಾಗಿ ಟಿಕೆಟ್ ಕೈತಪ್ಪಿದೆ. ಹೀಗಾಗಿ ಎತ್ತ ಹೋಗಬೇಕು, ಏನು ಮಾಡಬೇಕು ಅನ್ನೋದು ಗೊತ್ತಾಗ್ದೇ ಗೊಂದಲದಲ್ಲಿದ್ದಾರೆ. ಅಲ್ದೇ ಸುಮಲತಾ ಮುಂದೆ  ಮೂರು ಆಯ್ಕೆಗಳಿವೆ.

ಸುಮಲತಾ ನಡೆ ಏನು?

ಮಂಡ್ಯದಲ್ಲಿ ಮಂಗಳವಾರ ನಡೆದ ಬಿಜೆಪಿ ಸಭೆಗೆ ಹಾಲಿ ಸಂಸದೆ ಸುಮಲತಾ ಅವರನ್ನೇ ಆಹ್ವಾನಿಸಿಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಅವರ ಬೆಂಬಲವನ್ನ ಬಿಜೆಪಿ ಪಡೆದಿತ್ತು. ಪ್ರಚಾರ ಸಭೆಗಳಲ್ಲಿ ಸುಮಲತಾ ಭಾಗಿ ಆಗಿದ್ದರು. ಆದರೆ ಈಗ ಅವರನ್ನು ಬಿಜೆಪಿ ದೂರ ಮಾಡಿದಂತೆ ಕಾಣ್ತಿದೆ. ಹೀಗಾಗಿ ಮಂಡ್ಯ ಕಾಂಗ್ರೆಸ್‌ ನಾಯಕರ ಪ್ರಕಾರ ಸುಮಲತಾ ಈ ಸಲ ಕಾಂಗ್ರೆಸ್‌‌ಗೆ ಬೆಂಬಲ ಕೊಡ್ತಾರೆ ಎನ್ನಲಾಗಿದೆ. ಕಳೆದ ಸಲ ಸಿಕ್ಕಿದ ಸ್ವಾಭಿಮಾನದ ಮತಗಳು ಈ ಸಲ ಸಿಗಲ್ಲ ಅಂತ ಗೊತ್ತು. ಜೊತೆಗೆ 2019ರಲ್ಲಿ ಕಾಂಗ್ರೆಸ್‌‌ನ ಅನೇಕರು ಒಳಗೊಳಗೇ ಸುಮಲತಾರನ್ನ ಬೆಂಬಲಿಸಿ ಗೆಲ್ಲಿಸಿದ್ದರು. ಸುಮಲತಾ ಕಾಂಗ್ರೆಸ್​​ ಪಕ್ಷಕ್ಕೆ ಬೆಂಬಲ ಯಾಕೆ ನೀಡ್ತಾರೆ ಅನ್ನೋ ಲೆಕ್ಕಾಚಾರ ನೋಡುವುದಾದರೆ, ಮಂಡ್ಯದಲ್ಲಿ ತಮ್ಮ ರಾಜಕೀಯ ಬದ್ಧವೈರಿ JDSಗೆ ಬಿಜೆಪಿ ಮಣೆ ಹಾಕಿದ ಕೋಪ ಸುಮಲತಾ ಅವರಿಗೆ ಇದೆ. JDSಗೆ ಬೆಂಬಲಿಸಿದರೆ ಭವಿಷ್ಯದ ರಾಜಕಾರಣಕ್ಕೆ ಪೆಟ್ಟು ಎಂಬ ಆತಂಕನೂ ಇದೆ.  ಕಾಂಗ್ರೆಸ್‌ಗೆ ಬೆಂಬಲಿಸಿದ್ರೆ ಪರಿಷತ್‌‌ನಲ್ಲಿ ಪರಿಗಣಿಸುವ ವಿಶ್ವಾಸವಿದೆ. ಜೊತೆಗೆ 2019ರಲ್ಲಿ ಕಾಂಗ್ರೆಸ್‌‌ ಬೆಂಬಲಕ್ಕೆ ಈಗ ಋಣ ತೀರಿಸಿದಂತಾಗುತ್ತೆ ಅನ್ನೋ ಲೆಕ್ಕನೂ ಇದೆ ಅನ್ನೋದು ಆಪ್ತರ ಮಾಹಿತಿ.

ಇಷ್ಟು ದಿನಗಳ ಕಾಲ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಆಗ್ತಾರಾ ಅಥವಾ ನಿಖಿಲ್ ಕುಮಾರಸ್ವಾಮಿ ಆಗುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೇ ಕಣಕ್ಕೆ ಇಳಿಯಲಿದ್ದಾರೆ.

Shwetha M