ಸಿಂ‘ಹಾಸನ’ ಗುದ್ದಾಟದಲ್ಲಿ ದೊಡ್ಡಗೌಡ್ರ ಗುಟುರು – ಹೆಚ್​ಡಿಕೆ, ಭವಾನಿ ಗಪ್​ಚುಪ್.. ಯಾರಿಗೆ ಟಿಕೆಟ್?

 ಸಿಂ‘ಹಾಸನ’ ಗುದ್ದಾಟದಲ್ಲಿ ದೊಡ್ಡಗೌಡ್ರ ಗುಟುರು – ಹೆಚ್​ಡಿಕೆ, ಭವಾನಿ ಗಪ್​ಚುಪ್.. ಯಾರಿಗೆ ಟಿಕೆಟ್?

ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ವಿಚಾರ ಜೆಡಿಎಸ್ ಕೋಟೆಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಕಳೆದೊಂದು ವಾರದಿಂದ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಹಲವು ಬೆಳವಣಿಗೆಗಳು ನಡೆದಿವೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಭವಾನಿ ರೇವಣ್ಣ ನಡುವೆ ಇದೇ ವಿಚಾರವಾಗಿ ಸಮರ ನಡೀತಿದೆ. ಆದ್ರೆ ಈ ಹಾದಿಬೀದಿ ಜಗಳಕ್ಕೆ ದೊಡ್ಡಗೌಡ್ರು ಬ್ರೇಕ್ ಹಾಕಿದ್ದಾರೆ.

ಟಿಕೆಟ್ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದ್ದರಿಂದ ಜೆಡಿಎಸ್ ವರಿಷ್ಠ ಹೆಚ್​. ಡಿ ದೇವೇಗೌಡರೇ ಖುದ್ದು ಅಖಾಡಕ್ಕೆ ಇಳಿದಿದ್ದಾರೆ. ‘ನಾನು ಹೇಳೋವರೆಗೂ ಯಾರೂ ಟಿಕೆಟ್ ವಿಚಾರ ಮಾತಾಡಬಾರದು, ಹಾಸನದಲ್ಲಿ ನಾನೇ ಎಲ್ಲಾ ನಿರ್ಧಾರ ಮಾಡ್ತೀನಿ’ ಎಂದು ಕುಟುಂಬದ ಎಲ್ಲರಿಗೂ ಬಹಿರಂಗವಾಗಿ ವಾರ್ನಿಂಗ್ ಕೊಟ್ಟಿದ್ದಾರೆ. ಆದ್ರೆ ದೇವೇಗೌಡ್ರ ಈ ಗರ್ಜನೆ ಹಿಂದೆ ಹಲವು ಲೆಕ್ಕಾಚಾರಗಳು ಇವೆ ಎನ್ನಲಾಗಿದೆ.

ಇದನ್ನೂ ಓದಿ : ವ್ಯಕ್ತಿಯ ಮೈತುಂಬಾ ಜೇನುನೊಣಗಳು! – ಮುಂದೆ ಏನಾಯ್ತು ಗೊತ್ತಾ?

ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಂಥಾ ಟೈಮಲ್ಲಿ ಕುಟುಂಬದವರೇ ಹೀಗೇ ಟಿಕೆಟ್​ಗಾಗಿ ಕಿತ್ತಾಡಿಕೊಂಡ್ರೆ ರಾಜ್ಯದ ಜನರಿಗೆ ತಪ್ಪು ಸಂದೇಶ ಹೋದಂತಾಗುತ್ತೆ. ಮನೆಯವರೇ ಹೀಗೆ ಜಗಳ ಮಾಡಿಕೊಳ್ತಿದ್ದಾರೆ. ಇನ್ನು ಹೇಗೆ ತಾನೇ ಆಡಳಿತ ನಡೆಸ್ತಾರೆ ಎಂಬ ಚರ್ಚೆಗಳು ಶುರುವಾಗುತ್ತೆ. ಹಾಗೇ ವಿಪಕ್ಷಗಳಿಗೆ ಚುನಾವಣೆ ಅಸ್ತ್ರ ಆಗುತ್ತೆ. ಪಕ್ಷದಲ್ಲೂ ಗೊಂದಲ ಉಂಟಾಗುವ ಸಾಧ್ಯತೆ ಇರೋದ್ರಿಂದ ಯಾರೂ ಬಹಿರಂಗವಾಗಿ ಮಾತನಾಡದಂತೆ ಸೂಚನೆ ಕೊಟ್ಟಿದ್ದಾರೆ.

ಭವಾನಿ ರೇವಣ್ಣ ಬಹಿರಂಗವಾಗಿ ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಹೇಳಿಕೆ ನೀಡುತ್ತಿರೋದ್ರಿಂದ ಹಾಸನ ಕ್ಷೇತ್ರದಲ್ಲಿ ಇತರೆ ಮುಖಂಡರ ವಿರೋಧ ಎದುರಾಗಬಹುದು. ಮುಂದಿನ ದಿನಗಳಲ್ಲಿ ಚುನಾವಣೆಗೆ ಅದರ ಪರಿಣಾಮ ತಟ್ಟಲಿದೆ. ಮತ್ತೊಂದೆಡೆ ಬಿಜೆಪಿಯವರು ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆ ಜೆಡಿಎಸ್ ಪ್ರಭಾವ ಇರುವ ಕ್ಷೇತ್ರಗಳಲ್ಲಿ ಅಪಪ್ರಚಾರ ಉಂಟು ಮಾಡಬಹುದು. ಈ ಎಲ್ಲಾ ಕಾರಣಗಳಿಂದ ದೊಡ್ಡಗೌಡ್ರು ಟಿಕೆಟ್ ವಿಚಾರವನ್ನ ಬಹಿರಂಗವಾಗಿ ಮಾತನಾಡದಂತೆ ತಾಕೀತು ಮಾಡಿದ್ದಾರೆ.

ಯಾರು ಏನೇ ಹೇಳಿದ್ರೂ ಹಾಸನ ಕ್ಷೇತ್ರದ ಟಿಕೆಟ್ ಸಿಕ್ಕೇ ಸಿಗುತ್ತೆ ಅನ್ನೋ ಭರವಸೆಯಲ್ಲಿರೋ ಭವಾನಿ ರೇವಣ್ಣ ಕ್ಷೇತ್ರದಲ್ಲಿ ಫುಲ್ ರೌಂಡ್ಸ್ ಹಾಕುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ಹಲವು ಜೆಡಿಎಸ್ ಮುಖಂಡರನ್ನೂ ಭೇಟಿಯಾಗ್ತಿದ್ದಾರೆ. ಸದ್ಯ ಟಿಕೆಟ್ ಫೈಟ್​ನಲ್ಲಿ ದೊಡ್ಡಗೌಡ್ರು ಎಂಟ್ರಿಯಾಗಿದ್ದು, ಯಾರಿಗೆ ಹಾಸನ ಟಿಕೆಟ್ ಫೈನಲ್ ಆಗುತ್ತೆ ಅನ್ನೋದೇ ಕುತೂಹಲ ಮೂಡಿಸಿದೆ.

 

suddiyaana