ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದ ರೇವಣ್ಣ – ಕಾರಣವೇನು ಗೊತ್ತಾ?
ಮಾಜಿ ಸಚಿವ ಎಚ್ಡಿ ರೇವಣ್ಣ ವಿರುದ್ಧ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿದೆ. ಇದರ ನಡುವೆಯೇ ಮಾಜಿ ಸಚಿವರು ನಿರೀಕ್ಷಣಾ ಜಾಮೀನು ಪಡೆದುಕೊಳ್ಳಲು ಕೋರ್ಟ್ ಮೊರೆ ಹೋಗಿದ್ದರು. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ರೇವಣ್ಣ ಅವರು ಮನೆಗೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದರು. ಈ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ವಿಚಾರಣೆ ನಡೆಯಿತು. ರೇವಣ್ಣ ಪರ ವಾದ ಮಂಡಿಸಿದ ವಕೀಲರು, ಬಲವಂತದ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದರು.
ಇದನ್ನೂ ಓದಿ: ಪ್ರಜ್ವಲ್ಗೆ ಎದುರಾಯ್ತು ಮತ್ತೊಂದು ಸಂಕಷ್ಟ – ದಾಖಲಾಯ್ತು ಅತ್ಯಾಚಾರ ಪ್ರಕರಣ
ಎಸ್ಐಟಿ ಪರವಾಗಿ ಎಸ್ಪಿಪಿ ಜಗದೀಶ್ ವಾದ ಮಂಡಿಸಿ, ಸೆಕ್ಷನ್ 376 ಸೇರ್ಪಡೆ ಮಾಡಿಲ್ಲ. 376 ಅಲ್ಲದೆ ಬೇರೆ ಯಾವುದು ನಾನ್ ಬೇಲೆಬಲ್ ಸೆಕ್ಷನ್ ಹಾಕಲ್ಲ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ರೇವಣ್ಣ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದರು.
ಮಹಿಳೆ ಅಪಹರಣ ಮಾಡಿರುವ ಆರೋಪ
ಇನ್ನು ಹೆಚ್ ಡಿ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಅಪಹರಿಸಿದ ಆರೋಪ ಹೊರಿಸಲಾಗಿದೆ. ಹೊಳೇನರಸಿಪುರದ ಚೆನ್ನಾಂಬಿಕ ಥಿಯೇಟರ್ ಪಕ್ಕ ಇರುವ ಮನೆಯಲ್ಲಿ ಮಹಿಳೆ ಸುಮಾರು 6 ವರ್ಷ ಕೆಲಸ ಮಾಡಿದ್ದರು. ನಂತರ ಕೆಲಸ ಬಿಟ್ಟು ಬಂದು ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈಗ ಲೋಕಸಭೆ ಚುನಾವಣೆ ವೇಳೆ ಸತೀಶ್ ಎಂಬುವವರು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಭವಾನಿ ಅಕ್ಕರವರು ಕರೆಯುತ್ತಿದ್ದಾರೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಶ್ಲೀಲ ವಿಡಿಯೋ ವಿವಾದದಲ್ಲಿ ನನ್ನ ತಾಯಿಯ ಚಿತ್ರವೂ ಇದೆ. ವಿಡಿಯೋಗಳು ಬಹಿರಂಗವಾದ ಬಳಿಕ ತಾಯಿ ದಿಢೀರ್ ನಾಪತ್ತೆಯಾಗಿದ್ದಾರೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ಈ ಮಧ್ಯೆ, ಮೈಸೂರು ಪೊಲೀಸ್ ಹೆಚ್ಚುವರಿ ಆಯುಕ್ತೆ ಕೆಆರ್ ನಗರ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ನನ್ನ ತಾಯಿರವರನ್ನು ಹೊಳೆನರಸಿಪುರಕ್ಕೆ ಕರೆದುಕೊಂಡು ಹೋದರು. ಚುನಾವಣೆಯ ದಿವಸ ಬೆಳಿಗ್ಗೆ ನನ್ನ ತಾಯಿಯನ್ನು ಸತೀಶ್ ವಾಪಸ್ಸು ಕರೆದುಕೊಂಡು ಬಂದು ಬಿಟ್ಟರು. ನನ್ನ ತಂದೆ ಮತ್ತು ತಾಯಿಗೆ, ‘ಪೊಲೀಸ್ ಬಂದರೆ ಏನು ಹೇಳಬೇಡಿ. ಅವರಿಗೆ ಸಿಗಬೇಡಿ, ನಿಮ್ಮ ಮೇಲೆ ಕೇಸ್ ಆಗುತ್ತದೆ. ಬಂದರೆ ನನಗೆ ತಿಳಿಸಿ ನಾನು ಬಂದು ಕರೆದುಕೊಂಡು ಹೋಗುತ್ತೇನೆ’ ಎಂದು ಹೇಳಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.