ರೇವಣ್ಣಗೆ ಜಾಮೀನು ಸಿಕ್ಕಿದ್ದು ನನಗೆ ಖುಷಿಯಾಗಿಲ್ಲ! – ಹೆಚ್ಡಿಕೆ ಹೀಗ್ಯಾಕೆ ಹೇಳಿದ್ರು?
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಸಂಬಂಧ ಹೆಚ್. ಡಿ ರೇವಣ್ಣ ಜೈಲು ಸೇರಿದ್ದರು. ಇದೀಗ ರೇವಣ್ಣಗೆ ಜಾಮೀನು ಸಿಕ್ಕಿದ್ದು, ಮಂಗಳವಾರ ಜೈಲಿನಿಂದ ರಿಲೀಸ್ ಆಗಲಿದ್ದಾರೆ. ಇದು ರೇವಣ್ಣ ಕುಟುಂಬಕ್ಕೆ ಕೊಂಚ ನಿರಾಳ ತಂದಿದೆ. ಆದರೆ ರೇವಣ್ಣಗೆ ಜಾಮೀನು ಸಿಕ್ಕಿರುವುದು ಖುಷಿಯ ವಿಚಾರ ಅಲ್ಲ ಅಂತಾ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ನಾಥ್ ಆಪರೇಷನ್ – ಹೈ ಅಲರ್ಟ್ ಆದ ಕಾಂಗ್ರೆಸ್ ಹೈಕಮಾಂಡ್!
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಡಿಕೆ, ರೇವಣ್ಣಗೆ ಜಾಮೀನು ದೊರೆತಿರುವುದರಿಂದ ನನಗೆ ಖುಷಿಯಾಗಿಲ್ಲ. ಇದು ಸಂತಸಪಡುವ ಸಮಯವೂ ಅಲ್ಲ. ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮ ಬೇಡ. ನಾನು ಸಂತೋಷ ಪಡುತ್ತೇನೆ ಎಂದು ಭಾವಿಸಬೇಡಿ. ಕಾರ್ಯಕರ್ತರು ಸಂಭ್ರಮಿಸುವ ಸಮಯ ಇದಲ್ಲ. ಇದು ರಾಜ್ಯವೇ ತಲೆ ತಗ್ಗಿಸುವ ಘಟನೆ. ನಿಮಗೆ ಜನ್ಮಕೊಟ್ಟ ತಂದೆ-ತಾಯಿ ಇದ್ದಾರೆ, ಒಡಹುಟ್ಟಿದವರಿದ್ದಾರೆ. ಪೆನ್ಡ್ರೈವ್ ಹಂಚಿದವರ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ ಎಂದು ಎಸ್ಐಟಿ ಅಧಿಕಾರಿಗಳಿಗೆ ಹೇಳಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಎಸ್ಐಟಿ ತನಿಖೆ ವರದಿ ಶಾಸಕರಿಗೆ ಸರಬರಾಜಾಗುತ್ತಿದೆಯಾ? ನಮ್ಮ ರಾಜ್ಯದಲ್ಲಿ ದೊಡ್ಡ ತಿಮಿಂಗಿಲ ಇದೆ. ಆ ತಿಮಿಂಗಲ ಯಾರೆಂದು ರಾಜ್ಯದ ಜನರಿಗೂ ಗೊತ್ತಿದೆ. ಏಪ್ರಿಲ್ 22ರಂದು ದಾಖಲಾದ ಎಫ್ಐಆರ್ಗೆ ಸಂಬಂಧಿಸಿ ಒಬ್ಬರನ್ನೂ ಬಂಧಿಸಿಲ್ಲ. ನವೀನ್ ಗೌಡ ನಮ್ಮ ಪಕ್ಷದವರಿಗೆ ಕೊಟ್ಟೆ ಅಂದಿದ್ದಾನೆ. ನಮ್ಮ ಪಕ್ಷದವರಿಗೆ ಪೆನ್ಡ್ರೈವ್ ಕೊಟ್ಟಿದ್ದೆ ಎಂದು ಹೇಳಿದ್ದಾನೆ. ಪ್ರಕರಣದ ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ನೋಡಿ. ನಾನು ಈಗಲೇ ಈ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ. ನನ್ನ ಬಳಿ ಎಲ್ಲ ದಾಖಲೆಗಳಿವೆ. ಈಗಲೇ ನಾನು ಏನೂ ಹೇಳಲ್ಲ ಎಂದು ಹೆಚ್ಡಿಕೆ ಹೇಳಿದ್ದಾರೆ.
ರೇವಣ್ಣ ಕುಟುಂಬ ಮುಗಿಸಲು ಪ್ಲ್ಯಾನ್ ಮಾಡ್ತಿದ್ದೇನಂತೆ. ಹಲವರು ಈ ಬಗ್ಗೆ ಮಾತನಾಡಿಕೊಳ್ತಿದ್ದಾರೆ. ನಾನು ನ್ಯಾಯದ ಪರವಾಗಿ ಇದ್ದೇನೆ. ಇಂತಹ ಘಟನೆ ಮತ್ತೆ ಪುನರಾವರ್ತನೆಯಾಗಬಾರದು. ಯಾವುದೇ ಮುಲಾಜಿಗೆ ಒಳಗಾಗದೇ ತನಿಖೆ ಆಗಬೇಕು. ಮಹಿಳಾ ಸಂತ್ರಸ್ತೆಯರ ಪರ ಹೋರಾಟ ಮಾಡುತ್ತೇನೆ. ಪೆನ್ಡ್ರೈವ್ ಪ್ರಕರಣ ದೊಡ್ಡಮಟ್ಟದಲ್ಲಿ ನಡೆದಿದೆ. ಇನ್ನೂ ಸಮಯ ಇದೆ, ನಾನು ದುಡುಕಲ್ಲ ಎಂದು ಅವರು ಹೇಳಿದ್ದಾರೆ.