ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ.. ಕಾರ್ಯಕರ್ತನಿಗೇ ಟಿಕೆಟ್ – ಮತ್ತೊಮ್ಮೆ ಹೆಚ್ ಡಿಕೆ ಸ್ಪಷ್ಟನೆ!

ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ.. ಕಾರ್ಯಕರ್ತನಿಗೇ ಟಿಕೆಟ್ – ಮತ್ತೊಮ್ಮೆ ಹೆಚ್ ಡಿಕೆ ಸ್ಪಷ್ಟನೆ!

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ಗೆ ಹಾಸನ ಕ್ಷೇತ್ರವೇ ಕಗ್ಗಂಟಾಗಿ ಹೋಗಿದೆ. ಭವಾನಿ ರೇವಣ್ಣ ನನಗೇ ಟಿಕೆಟ್ ಬೇಕು ಅಂತಾ ಪಟ್ಟು ಹಿಡಿದಿದ್ದಾರೆ. ಪತಿ ಹೆಚ್.ಡಿ ರೇವಣ್ಣ, ಪುತ್ರರಾದ ಪ್ರಜ್ವಲ್ ಹಾಗೂ ಸೂರಜ್ ರೇವಣ್ಣ ಕೂಡ ಭವಾನಿ ಪರ ಬ್ಯಾಟ್ ಬೀಸ್ತಿದ್ದಾರೆ. ಆದರೆ ಅತ್ತಿಗೆಗೆ ಟಿಕೆಟ್ ಕೊಡಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸುತಾರಾಂ ಒಪ್ಪುತ್ತಿಲ್ಲ.

ಹಾಸನದ ಟಿಕೆಟ್ ಪಕ್ಷದ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೇನೆ ಎನ್ನುತ್ತಿರುವ ಹೆಚ್.ಡಿ ಕುಮಾರಸ್ವಾಮಿ ಇದನ್ನ ಇವತ್ತು ಮತ್ತೆ ಪುನರುಚ್ಚರಿಸಿದ್ದಾರೆ. ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ. ಪಕ್ಷದ ಕಾರ್ಯಕರ್ತನಿಗೇ ಟಿಕೆಟ್ ಕೊಡುವ ಬಗ್ಗೆ ನಿರ್ಧಾರ ಆಗಿದೆ. ಹಾಗೇ ಅನಿತಾ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ಅಭ್ಯರ್ಥಿ ಇಲ್ಲ ಅನ್ನೋ ಕಾರಣಕ್ಕೆ 2 ಬಾರಿ ಚುನಾವಣೆಗೆ ಸ್ಪರ್ಧಿಸಿದ್ರು. ಅಗತ್ಯ ಬಿದ್ದರೆ ಪಕ್ಷ ಸಂಘಟನೆಗೆ ಓಡಾಡುತ್ತಾರೆ ಅಷ್ಟೇ ಎಂದಿದ್ದಾರೆ. ಭವಾನಿಗೆ ಟಿಕೆಟ್ ಕೊಡುವ ವಿಚಾರವಾಗಿ ಈಗಾಗ್ಲೇ ದೊಡ್ಡಗೌಡ್ರ ಮನೆಯಲ್ಲಿ ಸಾಕಷ್ಟು ಸಭೆಗಳನ್ನ ಮಾಡ್ಲಾಗಿದೆ. ಆದ್ರೆ ಕುಮಾರಸ್ವಾಮಿ ಮಾತ್ರ ಪಟ್ಟು ಕದಲಿಸುತ್ತಿಲ್ಲ. ಭವಾನಿಗೆ ಟಿಕೆಟ್ ನೀಡಿದ್ರೆ ಮತ್ತೆ ಕುಟುಂಬ ರಾಜಕಾರಣದ ಸಂದೇಶ ನೀಡಿದಂತಾಗುತ್ತೆ ಅನ್ನೋದು ಹೆಚ್​ಡಿಕೆ ವಾದ.

ಇದನ್ನೂ ಓದಿ : ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ – 42 ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಈಗಾಗಲೇ ಜೆಡಿಎಸ್ ಮೇಲೆ ಕುಟುಂಬ ರಾಜಕಾರಣ ಎಂಬ ಅಪಖ್ಯಾತಿ ಇದೆ. ಹೆಚ್.ಡಿ ದೇವೇಗೌಡರ ಕುಟುಂಬದ ಹಲವರು ಶಾಸಕರು, ಸಂಸದರಾಗಿದ್ದಾರೆ. ಇದೀಗ ಗೌಡರ ಫ್ಯಾಮಿಲಿಯ ಮತ್ತೊಬ್ಬ ವ್ಯಕ್ತಿಗೆ ಟಿಕೆಟ್ ಕೊಟ್ಟರೆ ಫ್ಯಾಮಿಲಿ ಪಾಲಿಟಿಕ್ಸ್ ಮತ್ತಷ್ಟು ವಿಸ್ತಾರವಾಗಲಿದೆ. ಈಗಾಗಲೇ ಜೆಡಿಎಸ್‌ನ ಕುಟುಂಬ ರಾಜಕಾರಣವನ್ನ ವಿರೋಧ ಮಾಡ್ತಿರುವ ರಾಜಕೀಯ ವಿರೋಧಿಗಳಿಗೆ ಮತ್ತಷ್ಟು ಅಸ್ತ್ರ ಸಿಕ್ಕಂತಾಗುತ್ತೆ. ಜೊತೆಗೆ ಭವಾನಿ ಅವರಿಗೆ ಟಿಕೆಟ್ ಕೊಟ್ಟರೆ ಹಾಸನ ಕ್ಷೇತ್ರದಲ್ಲಿ ಮತ್ತೊಂದು ಪವರ್ ಸೆಂಟರ್ ಸೃಷ್ಟಿಯಾಗಬಹುದು ಅನ್ನೋದು ಕುಮಾರಸ್ವಾಮಿ ನಿಲುವು. ಇದಲ್ಲದೆ ಸ್ವರೂಪ್ ಪ್ರಕಾಶ್ ಜೆಡಿಎಸ್‌ನ ಕಟ್ಟಾಳು. ಪಕ್ಷಕ್ಕಾಗಿ ದುಡಿದಿದ್ದಾರೆ. ಅವರ ತಂದೆ ಕೂಡಾ ಶಾಸಕರಾಗಿದ್ದವರು. ಹೀಗಾಗಿ, ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೆ ಒಳ್ಳೆಯ ಸಂದೇಶ ರವಾನೆ ಮಾಡಿದಂತೆ ಆಗುತ್ತೆ ಅನ್ನೋದು ಕುಮಾರಸ್ವಾಮಿ ನಿಲುವು.

suddiyaana