ಮಂಡ್ಯ ಕ್ಷೇತ್ರ ನಮಗೆ ಎಂದ ಹೆಚ್.ಡಿ ಕುಮಾರಸ್ವಾಮಿ – ಬಿಜೆಪಿ ಟಿಕೆಟ್‌ಗಾಗಿ ಸುಮಲತಾ ಬಿಗಿ ಪಟ್ಟು

ಮಂಡ್ಯ ಕ್ಷೇತ್ರ ನಮಗೆ ಎಂದ ಹೆಚ್.ಡಿ ಕುಮಾರಸ್ವಾಮಿ – ಬಿಜೆಪಿ ಟಿಕೆಟ್‌ಗಾಗಿ ಸುಮಲತಾ ಬಿಗಿ ಪಟ್ಟು

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಲೋಕಸಭೆಗೆ ಮೈತ್ರಿ ಮಾಡಿಕೊಂಡ ಮರುಕ್ಷಣದಿಂದಲೇ ಇಡೀ ರಾಜ್ಯದ ಜನ್ರ ಚಿತ್ತ ಮಂಡ್ಯ ಕ್ಷೇತ್ರದತ್ತಲೇ ನೆಟ್ಟಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ದಳಪತಿಗಳಿಗೆ ಸಿಗುತ್ತಾ..? ಅಥವಾ ಸ್ವಾಭಿಮಾನದ ಕಹಳೆ ಮೊಳಗಿಸಿ ಗೆದ್ದಿದ್ದ ಸುಮಲತಾ ಅಂಬರೀಶ್ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ತಾರಾ ಅನ್ನೋದು. ಆದ್ರೆ ಮೈತ್ರಿಯಾಗಿ ವಾರಗಳೇ ಕಳೆದ್ರೂ ಕ್ಷೇತ್ರದ ಕ್ಲೈಮ್ಯಾಕ್ಸ್ ಪಿಕ್ಚರ್ ಮಾತ್ರ ಗೊತ್ತಾಗ್ತಿಲ್ಲ. ಒಂದ್ಕಡೆ ಹೆಚ್.ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರ ನಮಗೇ.. ಸಿದ್ಧತೆ ಮಾಡಿಕೊಳ್ಳಿ ಅಂತಾ ಜೆಡಿಎಸ್ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ ಹೇಳ್ತಿದ್ದಾರೆ. ಮತ್ತೊಂದೆಡೆ ಸುಮಲತಾ ಅಂಬರೀಶ್ ನಾನು ಮಂಡ್ಯ ಬಿಟ್ಟುಕೊಡೋ ಮಾತೇ ಇಲ್ಲ. ನಾನೇ ಬಿಜೆಪಿ ಅಭ್ಯರ್ಥಿ ಎಂದಿದ್ದಾರೆ. ಹಾಗಾದ್ರೆ ಮೈತ್ರಿ ಟಿಕೆಟ್ ಯಾರಿಗೆ? ಹೆಚ್ ಡಿಕೆ ಪ್ಲ್ಯಾನ್ ಏನು? ಸುಮಲತಾ ನಡೆ ಏನು? ಅಸಲಿ ಅಭ್ಯರ್ಥಿ ಯಾರು..? ಈ ಬಗೆಗಿನ ಕಂಪ್ಲೀಟ್ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಸುಮಲತಾಗೆ ಬಿಜೆಪಿ ಟಿಕೆಟ್ ಮಿಸ್ ಆಯ್ತಾ..?- ಮಂಡ್ಯದಲ್ಲಿ ಸ್ಪರ್ಧೆ ಖಂಡಿತಾ ಎಂದು ಹಠ ಮಾಡಿದ್ಯಾಕೆ ಸಂಸದೆ

2019ರ ಲೋಕಸಭಾ ಚುನಾವಣೆಯಂತೆಯೇ ಈ ಬಾರಿಯೂ ಕೂಡ ಮಂಡ್ಯ ಕ್ಷೇತ್ರ ಚುನಾವಣೆ ಘೋಷಣೆಗೂ ಮುನ್ನವೇ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಜೊತೆ ಗುರುತಿಸಿಕೊಂಡಿರುವ ಸಂಸದೆ ಸುಮಲತಾ ಅಂಬರೀಶ್  ಮಂಡ್ಯ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಜೆಡಿಎಸ್ ನಾಯಕರ ಜೊತೆ ಸಭೆ ನಡೆಸಿರುವ ಹೆಚ್​ಡಿಕೆ ಈಗಾಗ್ಲೇ ಕ್ಷೇತ್ರ ಗೆಲ್ಲುವ ಬಗ್ಗೆ ತಯಾರಿ ಮಾಡಿಕೊಳ್ತಿದ್ದಾರೆ.

ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಈಗಾಗಲೇ ಕ್ಷೇತ್ರದಲ್ಲಿ ತಂತ್ರಗಾರಿಕೆ ಶುರು ಮಾಡಿದ್ದಾರೆ. ತಮ್ಮ ತೋಟದ ಮನೆಯಲ್ಲಿ ಮಂಡ್ಯ ಜೆಡಿಎಸ್ ನಾಯಕರ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ. ನಿಮ್ಮೆಲ್ಲರ ಒತ್ತಾಸೆಯಂತೆಯೇ ಜೆಡಿಎಸ್‌ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ. ಮಂಡ್ಯ ಕ್ಷೇತ್ರದ ಟಿಕೆಟ್ ಬಗ್ಗೆ ಯಾರಿಗೂ ಗೊಂದಲ ಬೇಡ. ಚುನಾವಣೆಗೆ ಸಿದ್ಧರಾಗಿ ಎಂಬ ಸಂದೇಶ ರವಾನಿಸಿದ್ದಾರೆ. ಹಾಗೇ ಬಿಜೆಪಿ ಮುಖಂಡರ ಜೊತೆ ಉತ್ತಮ ಒಡನಾಟ ಇಟ್ಟಕೊಳ್ಳಿ ಎಂದಿರುವ ಹೆಚ್​ಡಿಕೆ, ಅಭ್ಯರ್ಥಿ ಯಾರೆಂದು ಶೀಘ್ರದಲ್ಲೇ ಪ್ರಕಟ ಆಗಲಿದೆ. ನಿಮ್ಮೆಲ್ಲರ ಇಚ್ಛೆಯಂತೆ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ ಎಂದು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ತಮ್ಮ ನಾಯಕರಿಗೆ ಕಿವಿಮಾತೊಂದನ್ನ ಹೇಳಿದ್ದಾರೆ. ಅದೇನಂದ್ರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಆದ ಹಾಗೆ ಈ ಬಾರಿ ಆಗಬಾರದು. ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ. ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಸೋಲಬಾರದು ಎಂದು ಸೂಚನೆ ನೀಡಿದ್ದಾರೆ.

ಮಂಡ್ಯ ಟಿಕೆಟ್ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿಲ್ಲವಾದ್ರೂ ಟಿಕೆಟ್ ನಮಗೇ ಎನ್ನುವ ದೃಢ ವಿಶ್ವಾಸದಲ್ಲಿ ದಳಪತಿಗಳಿದ್ದಾರೆ. ಜೆಡಿಎಸ್ ನಾಯಕ ಜಿ‌.ಟಿ. ದೇವೇಗೌಡ ಮಾತನಾಡಿ, ಮಂಡ್ಯ ಟಿಕೆಟ್ ಜೆಡಿಎಸ್‌ಗೆ ಕನ್ಫರ್ಮ್ ಆಗಿದೆ. ಸುಮಲತಾ ಅವರು ಅಧಿಕೃತ ಬಿಜೆಪಿ ಮೆಂಬರ್ ಅಲ್ಲ. ಆದರೂ ಅವರು ಟಿಕೆಟ್ ಕೇಳೋದ್ರಲ್ಲಿ ತಪ್ಪಿಲ್ಲ. ಸುಮಲತಾ ಮಂಡ್ಯ ಕೇಳಿದರೆ ಬೆಂಗಳೂರು ನಾರ್ತ್ ಕೊಡಬಹುದು ಎಂದಿದ್ದಾರೆ. ಕೆ.ಆರ್. ಪೇಟೆ ಜೆಡಿಎಸ್ ಶಾಸಕ ಮಂಜುನಾಥ್ ಕೂಡ ಇದೇ ವಿಶ್ವಾಸದಲ್ಲಿದ್ದಾರೆ. ಆದ್ರೆ ಸುಮಲತಾ ಮಾತ್ರ ತಮ್ಮದೇ ದಾಟಿಯಲ್ಲಿ ಮಂಡ್ಯ ಚುನಾವಣೆಗೆ ಗೇಮ್ ಪ್ಲ್ಯಾನ್ ರೆಡಿ ಮಾಡಿಕೊಳ್ತಿದ್ದಾರೆ.

ಮಂಡ್ಯ ಬಿಜೆಪಿ ಟಿಕೆಟ್‌ಗಾಗಿ ಪಟ್ಟು ಹಿಡಿದಿರುವ ಸಂಸದೆ ಸುಮಲತಾ ಅಂಬರೀಶ್, ತಮ್ಮ ನಿವಾಸದಲ್ಲಿ ಆಪ್ತರ ಜೊತೆ ಸಭೆ ನಡೆಸಿದ್ದಾರೆ. ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ರು. ಈ ವೇಳೆ ಸುಮಲತಾ ನಾನು ಅಷ್ಟು ಸುಲಭವಾಗಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡುವುದಿಲ್ಲ.   ಮಂಡ್ಯ ಅಂಬರೀಶ್ ನಾಡು, ಅವರು ಮಂಡ್ಯದ ಗಂಡು. ಹಾಗಾಗಿ ನಾನು ಮಂಡ್ಯದಲ್ಲೇ ಸ್ಪರ್ಧೆ ಮಾಡ್ತೀನಿ, ಅದು ಬಿಜೆಪಿ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡ್ತೀನಿ. ಕಳೆದ ಬಾರಿ ಬಿಜೆಪಿ ನಾನು ಸಪೋರ್ಟ್ ಕೊಟ್ಟಿದ್ದೇನೆ, ಇದೀಗ ಬಿಜೆಪಿ ಪಕ್ಷಕ್ಕೆ ಪೂರಕವಾದ ವಾತಾವರಣ ಮಂಡ್ಯದಲ್ಲಿದೆ. ಬಹುತೇಕ ಎಲ್ಲರೂ ಬಿಜೆಪಿಯಿಂದ ಸ್ಪರ್ಧೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆ ಬಗ್ಗೆ ಯಾವುದೇ ಯೋಚನೆ ಯಂತೂ ಇದುವರೆಗೂ ಮಾಡಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ಹೆಚ್ ಡಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಈ ಬಾರಿ ಮಂಡ್ಯದಲ್ಲಿ ಜೆಡಿಎಸ್ ಗೆಲ್ಲುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಇದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 5.5 ಲಕ್ಷ ಮತಗಳು ಜೆಡಿಎಸ್ ಪರ ಇವೆ. ಹಾಗಾಗಿ ಮಂಡ್ಯ ಉಳಿಸಿಕೊಳ್ಳಬೇಕೆಂಬುದು ಮುಖಂಡರ ಒತ್ತಾಯ. ಆದ್ರೆ ಸುಮಲತಾ ಮಾತ್ರ ನಾನೇ ಬಿಜೆಪಿ ಅಭ್ಯರ್ಥಿ ಅಂತಿದ್ದಾರೆ.  ನಟ ದರ್ಶನ್ ಮತ್ತೊಮ್ಮೆ ಸುಮಲತಾ ಪರ ಪ್ರಚಾರಕ್ಕೆ ಒಪ್ಪಿಗೆಯನ್ನೂ ನೀಡಿಯಾಗಿದೆ. ಹೀಗಾಗಿ ಮಂಡ್ಯ ಕಣದಲ್ಲಿ ಅಂತಿಮವಾಗಿ ಉಳಿಯೋದ್ಯಾರು ಅನ್ನೋದೇ ತೀವ್ರ ಕುತೂಹಲ ಮೂಡಿಸಿದೆ.

Sulekha