ಹಿಂದುತ್ವ ಹೋರಾಟದ ಮೂಲಕ ರಣಕಹಳೆ ಮೊಳಗಿಸಿದ ಮಾಜಿ ಸಿಎಂ -ಚುನಾವಣೆಗೆ ಸಿದ್ಧರಾದ ಕುಮಾರಣ್ಣ!

ಹಿಂದುತ್ವ ಹೋರಾಟದ ಮೂಲಕ ರಣಕಹಳೆ ಮೊಳಗಿಸಿದ ಮಾಜಿ ಸಿಎಂ -ಚುನಾವಣೆಗೆ ಸಿದ್ಧರಾದ ಕುಮಾರಣ್ಣ!

ರಾಜ್ಯ ರಾಜಕೀಯದಲ್ಲಿ ಹನುಮಧ್ವಜ ತೆರವು ವಿವಾದ ಕೋಲಾಹಲ ಎಬ್ಬಿಸಿದೆ. ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಗ್ಯುದ್ಧವೇ ನಡೆಯುತ್ತಿದೆ. ಮೈತ್ರಿ ನಾಯಕರು ಇದ್ದನ್ನೇ ಅಸ್ತ್ರವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಆದ್ರೆ ಈ ಹಗ್ಗಾಜಗ್ಗಾಟದ ಹಿಂದೆ ರಾಜಕೀಯ ರಣತಂತ್ರವೂ ಅಡಗಿದೆ. ಮಂಡ್ಯದಲ್ಲಿ ಲೋಕಸಭಾ ಸಮರರಕ್ಕೆ ಸದ್ದಿಲ್ಲದೆ ತಂತ್ರಗಾರಿಕೆ ನಡೆಯುತ್ತಿದೆ. ಅದ್ರಲ್ಲೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಸಿರು ಶಾಲು ಬಿಟ್ಟು ಕೇಸರಿ ಶಾಲು ಹಾಕಿ ಫೀಲ್ಡಿಗಿಳಿದಿದ್ದಾರೆ. ಮಾಜಿ ಮುಖ್ಯಮಂತ್ರಿಗಳ ಈ ನಡೆಗೆ ಟೀಕೆ ವ್ಯಕ್ತವಾಗಿದ್ರೂ ಈ ಬದಲಾವಣೆ ಹಿಂದೆ ಬೇರೆಯದ್ದೇ ಪ್ಲ್ಯಾನ್ ಇದೆ. ಹಾಗಾದ್ರೆ ಹೆಚ್​ಡಿಕೆ ಪ್ಲ್ಯಾನ್ ಏನು..? ಮಂಡ್ಯದಲ್ಲಿ ಏನೆಲ್ಲಾ ರಾಜಕೀಯ ನಡೀತಿದೆ..? ಲೋಕಸಭಾ ಚುನಾವಣೆಗೆ ಈಗಿಂದ್ಲೇ ಅಖಾಡ ರೆಡಿಯಾಗ್ತಿದ್ಯಾ..? ಈ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ‘ಕೈ’ ಸೈಲೆಂಟ್ ಗೇಮ್ – ಮತ್ತೊಮ್ಮೆ ಚುನಾವಣೆಗೆ ಧುಮುಕಲು ಮೋಹಕ ತಾರೆ ರಮ್ಯಾ ಪ್ಲ್ಯಾನ್

ಲೋಕಸಭಾ ಚುನಾವಣಾ ಹೊಸ್ತಿಲಲ್ಲೇ ಹನುಮಧ್ವಜ ಗಲಾಟೆ ಭುಗಿಲೆದ್ದಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಾಯಕರು ಈ ವಿವಾದವನ್ನ ರಾಜಕೀಯಕ್ಕೆ ಬಳಸಿಕೊಳ್ತಿದ್ದಾರೆ. ಸೋಮವಾರ ಮಂಡ್ಯದಲ್ಲಿ ಜಂಟಿ ಹೋರಾಟ ನಡೆಸಿ ಮೈತ್ರಿಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಒಕ್ಕಲಿಗರ ಕೋಟೆಯಲ್ಲಿ ಮೈತ್ರಿ ನಾಯಕರು ಮೊದಲ ಬಾರಿಗೆ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬಿಜೆಪಿ ನಾಯಕರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಹೆಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹನುಮ ಧ್ವಜ ಗಲಾಟೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ದೋಸ್ತಿಯನ್ನು ಗಟ್ಟಿ ಮಾಡಿದೆ. ಇದರ ನಡುವೆ ಹೆಚ್ ಡಿ ಕುಮಾರಸ್ವಾಮಿ ಕೇಸರಿ ಶಾಲು ಹಾಕುವ ಮೂಲಕ ಹಿಂದೂ ಮತಬುಟ್ಟಿಗೆ ಕೈ ಹಾಕಿದ್ದಾರೆ. ಹಿಂದುತ್ವ ಎಲ್ಲಾ ಬರಲ್ಲ, ಜನರಿಗೆ ಅಭಿವೃದ್ಧಿ ಬೇಕು ಎನ್ನುತ್ತಿದ್ದ ಕುಮಾರಸ್ವಾಮಿ ಅದರ ನೆರಳಿನಲ್ಲಿಯೇ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವ್ರ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿ ಗೆದ್ದು ಬೀಗಿದ್ರು. ಆದ್ರೆ ಈ ಸಲ ಬದಲಾದ ರಾಜಕಾರಣದಲ್ಲಿ ಮಂಡ್ಯದಲ್ಲಿಯೂ ಹಲವು ವ್ಯತ್ಯಾಸಗಳಾಗಿವೆ. ಸುಮಲತಾ ಅಂಬರೀಶ್​ಗೆ ಮತ್ತೊಮ್ಮೆ ಗೆಲುವು ಅಷ್ಟು ಸುಲಭವಾಗಿಲ್ಲ. ಯಾಕಂದ್ರೆ ಸುಮಲತಾ ಚುನಾವಣೆಗೆ ಸ್ಪರ್ಧಿಸಲೇಬೇಕು ಅನ್ನೋ ನಿಲುವು ಹೊಂದಿದ್ರೂ ಬಿಜೆಪಿ ಪಕ್ಷದಿಂದಲೋ ಅಥವಾ ಸ್ವತಂತ್ರ್ಯವಾಗಿಯೋ ಅನ್ನೋದು ಕನ್ಫರ್ಮ್ ಆಗಿಲ್ಲ. ತಮ್ಮ ನಿರ್ಧಾರದಲ್ಲೇ ಗೊಂದಲ ಹೊಂದಿದ್ದಾರೆ. ಮತ್ತೊಂದೆಡೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್​ಗೆ ಮಂಡ್ಯ ಕ್ಷೇತ್ರ ಸಿಗೋದು ಬಹುತೇಕ ಖಚಿತ ಆಗಿದೆ. ಹೀಗಾಗಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಹಿಂದುತ್ವದ  ಹೋರಾಟದ ಮೂಲಕವೇ ಚುನಾವಣೆಯ ರಣಕಹಳೆ ಮೊಳಗಿಸಿದ್ದಾರೆ.

ಮೈತ್ರಿ ನಾಯಕರ ಧ್ವಜ ಗಲಾಟೆಗೆ ತಿರುಗೇಟು ನೀಡಲು ಕಾಂಗ್ರೆಸ್ ಕೂಡ ಪ್ರತಿತಂತ್ರ ಹೆಣೆಯುತ್ತಿದೆ. ಭಗವಾಧ್ವಜ ಅಸ್ತ್ರಕ್ಕೆ ದಲಿತಾಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ. ನಮಗೂ ಅಂಬೇಡ್ಕರ್ ಪೋಟೋ ಇರೋ ಧ್ವಜಸ್ತಂಭಕ್ಕೆ ಅವಕಾಶ ನೀಡಿ ಎಂದು ದಲಿತ ಸಂಘಟನೆಗಳ ಹೋರಾಟಕ್ಕೆ ಕರೆ ಕೊಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಆದ್ರೆ ಇದ್ಯಾವುದಕ್ಕೂ ಆಸ್ಪದ ಕೊಡದೆ ಮೈತ್ರಿ ನಾಯಕರು ತಮ್ಮ ಗೇಮ್ ಮುಂದುವರಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಆದ್ರೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕೊರತೆ ಜೊತೆಗೆ ಯಾರನ್ನ ಕಣಕ್ಕಿಳಿಸಬಹುದು ಅನ್ನೋದ್ರ ಬಗ್ಗೆ ಸ್ಪಷ್ಟತೆ ಇಲ್ಲ. ಮಾತ್ರವಲ್ಲದೆ ಕಾಂಗ್ರೆಸ್ ನಲ್ಲಿ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಹೇಗಾದ್ರೂ ಮಾಡಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಲವನ್ನು ಕುಗ್ಗಿಸಬೇಕು ಅನ್ನೋದು ಕುಮಾರಣ್ಣನ ಪ್ಲ್ಯಾನ್. ಅದಕ್ಕಾಗಿಯೇ ಮಂಡ್ಯದಲ್ಲಿ ಕಾಂಗ್ರೆಸ್ ಒಕ್ಕಲಿಗರ ಶಕ್ತಿ ಕುಗ್ಗಿಸಲು ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಹಿಂದುತ್ವ ಎಲ್ಲಾ ಬರಲ್ಲ, ಜನರಿಗೆ ಅಭಿವೃದ್ಧಿ ಬೇಕು ಎನ್ನುತ್ತಿದ್ದ ಕುಮಾರಸ್ವಾಮಿ ತಾವೇ ಕೇಸರಿ ಶಾಲು ಕೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಮೊದಲ ಬಾರಿ ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಹೋರಾಟ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಮಟ್ಟದಲ್ಲಿಯೂ ಸಮುದಾಯದ ನಾಯಕರ ಸೆಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.

ಹನುಮಧ್ವಜ ವಿವಾದದ ನಡುವೆ ಸುಮಲತಾ ಕೂಡ ತಮ್ಮದೇ ಆದ ಶೈಲಿಯಲ್ಲಿ ದಾಳ ಉರುಳಿಸಿದ್ದಾರೆ. ಹನುಮ ಧ್ವಜ ತೆರವುಗೊಳಿಸಿದ್ದು ಬಹಳ ಸೂಕ್ಷ್ಮ ವಿಷಯವಾಗಿತ್ತು. ಸೂಕ್ತವಾಗಿ ನಿರ್ವಹಿಸುವಲ್ಲಿ ರಾಜ್ಯಸರ್ಕಾರ ತಪ್ಪು ಮಾಡಿದೆ. ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡದ ಹನುಮ ಧ್ವಜ ಮಾತ್ರ ಕಣ್ಣಿಗೆ ಬಿತ್ತೇ? ಮಂಡ್ಯ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ, ಅನೇಕ ಕೆರೆಗಳ ಒತ್ತುವರಿಯಾಗಿದೆ, ಇಂಥ ಪ್ರಕರಣಗಳಲ್ಲಿ ಕಾನೂನು ಯಾಕೆ ಸುಮ್ಮನಿದೆ ಅಂತ ಸುಮಮತಾ ಪ್ರಶ್ನಿಸಿದ್ದಾರೆ. ಹಾಗೇ  6 ದಿನಗಳ ನಂತರ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಸರ್ಕಾರ ಪ್ರಕರಣಕ್ಕೆ ವಿನಾಕಾರಣ ರಾಜಕೀಯ ಬಣ್ಣವನ್ನು ಲೇಪಿಸಿತು ಎಂದು ಆರೋಪಿಸಿದ್ದಾರೆ. ಒಟ್ಟಾರೆ ಹನುಮಧ್ವಜ ಗಲಾಟೆ ವಿವಾದ ತಾರಕಕ್ಕೇರಿದೆ. ಈ ವಿವಾದದ ಹಿಂದೆ ಮಂಡ್ಯ ರಾಜಕೀಯ ಲೆಕ್ಕಾಚಾರವೂ ಶುರುವಾಗಿದೆ.

Sulekha