ಸುಮಲತಾ ಹೆಚ್ ಡಿಕೆ ಮುನಿಸು ದೂರ | ನಾನವನಲ್ಲ ಎಂದ ಪ್ರಜ್ವಲ್ ರೇವಣ್ಣ | ಡಿಸಿಎಂ ಸ್ಥಾನಕ್ಕೆ ಪವನ್ ಕಲ್ಯಾಣ್ ಪಟ್ಟು | ಇವತ್ತಿನ ಪ್ರಮುಖ ಸುದ್ದಿಗಳು

ಸುಮಲತಾ ಹೆಚ್ ಡಿಕೆ ಮುನಿಸು ದೂರ | ನಾನವನಲ್ಲ ಎಂದ ಪ್ರಜ್ವಲ್ ರೇವಣ್ಣ | ಡಿಸಿಎಂ ಸ್ಥಾನಕ್ಕೆ ಪವನ್ ಕಲ್ಯಾಣ್ ಪಟ್ಟು | ಇವತ್ತಿನ ಪ್ರಮುಖ ಸುದ್ದಿಗಳು

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸುಮಲತಾ ಹಾಗೂ ಹೆಚ್ಡಿಕೆ ದುಷ್ಮನ್ಗಳಾಗಿದ್ರು.. ಒಂದೇ ಕಡೆಯಿದ್ದರೂ ಒಬ್ಬರಿಗೊಬ್ಬರು ಮುಖ ನೋಡೋದು ಬಿಡಿ, ಸುಮಲತಾ ಪ್ರಚಾರಕ್ಕೂ ಬಂದಿರಲಿಲ್ಲ. ಆದ್ರೀಗ ದೆಹಲಿಯಲ್ಲಿ ಬದ್ಧ ವೈರಿಗಳು ಮುಖಾಮುಖಿಯಾಗಿದ್ದಾರೆ. ಸುಮಲತಾ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ. ದೆಹಲಿಯಲ್ಲಿ ಭೇಟಿ ಮಾಡಿದ ಸುಮಕ್ಕ ಕುಮಾರಣ್ಣಂಗೆ ಶುಭಾಶಯ ತಿಳಿಸಿದ್ದಾರೆ. ಸುಮಲತಾ ಕುಮಾರಸ್ವಾಮಿಯವರನ್ನು ಖುದ್ದು ಭೇಟಿ ಮಾಡಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

 ದರ್ಶನ್‌ ಅರೆಸ್ಟ್‌ – ಗೃಹ ಸಚಿವರು ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಸ್ಯಾಂಡಲ್ವುಡ್ ನಟ ದರ್ಶನ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕಣದ ಕುರಿತು ಇನ್ನಷ್ಟು ತನಿಖೆ ನಡೆಯಬೇಕಿದೆ. ಈ ಕೇಸ್ನಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿದ್ದಾರಾ ಇಲ್ವಾ? ಯಾವ ಕಾರಣ ಕೊಲೆ ನಡೆದಿದೆ ಎಂದು ಇನ್ನೂ ತನಿಖೆ ಬಳಿಕ ತಿಳಿಯಬೇಕಿದೆ. ಈ ಸಂದರ್ಭದಲ್ಲಿ ಹೆಚ್ಚೇನು ಹೇಳಲು ಸಾಧ್ಯವಿಲ್ಲ ಅಂತ ಪರಮೇಶ್ವರ್ ಹೇಳಿದ್ದಾರೆ.

 ಬೆಂಗಳೂರಿಗೆ ಬರಲಿದ್ದಾರೆ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ  ಮತ್ತು ಪ್ರಿಯಾಂಕಾ ಗಾಂಧಿ ಇವತ್ತು  ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾತ್ರಿ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ರಾಹುಲ್, ಪ್ರಿಯಾಂಕಾರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬರಮಾಡಿಕೊಳ್ಳಲಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಖಾಸಗಿ ಹೋಟೆಲ್ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿರುವ ಉಭಯ ನಾಯಕರು ನಾಳೆ ಬೆಳಗ್ಗೆ ಕೇರಳದ ವಯನಾಡ್ಗೆ ತೆರಳಲಿದ್ದಾರೆ.  ಬೆಂಗಳೂರಿನಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಾಹಿತಿ ಇಲ್ಲ. ಮತದಾರರಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ವಯನಾಡ್ಗೆ ತೆರಳಲಿರುವ ಅವರು ಮಾರ್ಗ ಮಧ್ಯೆ ಬೆಂಗಳೂರು ವಿಮಾನ ನಿಲ್ದಾಣ ಬಳಿ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಹೆಚ್‌ಡಿ ದೇವೇಗೌಡಗೆ ಕರೆ ಮಾಡಿದ ಪ್ರಧಾನಿ

ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅನಾರೋಗ್ಯ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ  ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಲಿಲ್ಲ ಅಂತ ಹೆಚ್ಡಿ ದೇವೇಗೌಡ ಟ್ವೀಟ್ ಮಾಡಿದ್ದರು. ಈ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಹೊಸ ಸರ್ಕಾರದ ಬಗ್ಗೆ ತಮಗೆ ಇರುವ ಆಲೋಚನೆಗಳನ್ನು ನನ್ನೊಂದಿಗೆ ಹಂಚಿಕೊಂಡರು. ಹಾಗೆ ನನ್ನ ಆರೋಗ್ಯವನ್ನೂ ವಿಚಾರಿಸಿದರು. ಅವರ ಕಾಳಜಿಗೆ ನಾನು ಆಭಾರಿಯಾಗಿದ್ದೇನೆ. ಅವರ ಈ ಕಾಳಜಿ ನನ್ನನ್ನು ಭಾವುಕರನ್ನಾಗಿಸಿತು ಅಂತಾ ದೇವೆಗೌಡರು ಟ್ವೀಟ್ ಮಾಡಿದ್ದಾರೆ.

 ಅಧಿಕಾರ ಸ್ವೀಕಾರಕ್ಕೆ ಮುನ್ನವೇ ಕೆಲಸ ಶುರುಮಾಡಿದ ಹೆಚ್‌ಡಿಕೆ!

ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವಾಲಯಗಳ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡುವ ಮುನ್ನವೇ ಸಚಿವ ಎಚ್ಡಿ ಕುಮಾರಸ್ವಾಮಿ ತಮ್ಮ ಕೆಲಸ ಶುರು ಮಾಡಿದ್ದಾರೆ. ಅಧಿಕಾರ ಸ್ವೀಕಾರಕ್ಕೆ ಮುನ್ನವೇ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ನವದೆಹಲಿಯ ನಿವಾಸದಲ್ಲಿ ಸಭೆ ನಡೆಸಿದ್ದಾರೆ ಕುಮಾರಸ್ವಾಮಿ. ಸಭೆಯಲ್ಲಿ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನದ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ವೇಳೆ ಪಶ್ಚಿಮ ಘಟ್ಟದ ಸೂಕ್ಷ್ಮ ಕೂಡ ಹೆಚ್ಡಿಕೆ ಮಾತನಾಡಿದ್ದಾರೆ. ಇನ್ನು  ಕಬ್ಬಿಣ ಮತ್ತು ಉಕ್ಕಿನ ಸಾಧ್ಯಾಸಾಧ್ಯತೆಗಳು, ಅವಕಾಶಗಳ ಬಗ್ಗೆ ಶೀಘ್ರವೇ ಸಮಗ್ರ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

 ಡಿಸಿಎಂ ಸ್ಥಾನಕ್ಕೆ ಪವನ್ ಕಲ್ಯಾಣ್‌ ಪಟ್ಟು!

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ – ಟಿಡಿಪಿ ಹಾಗೂ ಜನಸೇನಾ ಪಾರ್ಟಿಯ ಮೈತ್ರಿ 164 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದಿದೆ. ಜೂ.13ರಂದು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸರ್ಕಾರ ರಚನೆ ಹಿನ್ನೆಲೆಯಲ್ಲಿ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ನಡುವೆ ಖಾತೆ ಹಂಚಿಕೆ ಜೋರಾಗಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಜನಸೇನಾದ ಶಾಸಕಾಂಗ ಪಕ್ಷದ ನಾಯಕನಾಗಿ ಪವನ್ ಕಲ್ಯಾಣ್ ಅವರನ್ನು ಆರಿಸಲಾಗಿದೆ. ಆದ್ರೆ  ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಸ್ಥಾನ ಬೇಕು ಅಂತಾ ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ, ಅವರು ಐದು ಸಚಿವ ಸ್ತಾನಕ್ಕೂ ಬೇಡಿಕೆಯಿಟ್ಟಿದ್ದಾರೆ ಎಂದು ಹೇಳಲಾಗಿದೆ.

ರೈತರ ಸಮಾವೇಶದಲ್ಲಿ ಭಾಗಿಯಾಗ್ತಾರಾ ಪ್ರಧಾನಿ?

ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಾರಣಾಸಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೂನ್ 18ರಂದು ವಾರಾಣಸಿಯಲ್ಲಿ ರೈತರ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇನ್ನು ಪ್ರಧಾನಿ ವಾರಾಣಸಿಗೆ ಭೇಟಿ ನೀಡುವ ಸಂದರ್ಭದಲ್ಲಿ ದಶಾಶ್ವಮೇಧ ಘಾಟ್ನಲ್ಲಿ ಗಂಗಾ ಆರತಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಮತ್ತು ಅದಕ್ಕಾಗಿ ಸಿದ್ಧತೆಗಳು ಪ್ರಾರಂಭವಾಗಿವೆ ಎಂದು ಹೇಳಲಾಗುತ್ತಿದೆ.

 ನಾನವನಲ್ಲ ಎಂದ ಪ್ರಜ್ವಲ್‌ ರೇವಣ್ಣ!

ಹಾಸನ ಪೆನ್ಟ್ರೈವ್ ಕೇಸ್ ಆರೋಪಿ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗಿದ್ದಾರೆ.  ಸೆಂಟ್ರಲ್ ಜೈಲಿನಲ್ಲಿ ಕಳೆದ ರಾತ್ರಿ ನಿದ್ದೆ ಮಾಡದೇ ಒದ್ದಾಡಿದ್ದಾರೆ, ಈ ಪ್ರಕರಣದಿಂದ ಕುಟುಂಬದ ಜೊತೆಗೆ ತನಗಾದ ಸಮಸ್ಯೆ ಹಾಗೂ ಸೋಲಿನಿಂದ ಹತಾಶೆಗೊಳಗಾಗಿರೋ ಪ್ರಜ್ವಲ್ ಕಂಗೆಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಎಚ್ಡಿ ರೇವಣ್ಣ ಇದ್ದ ಕ್ವಾರಂಟೈನ್ ಸೆಲ್ನಲ್ಲೇ ಪ್ರಜ್ವಲ್ ರೇವಣ್ಣನಿಗೂ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. ವಿಚಾರಣಾಧೀನಾ ಕೈದಿ ನಂಬರ್ 5664 ಅನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ರಾತ್ರಿ ಜೈಲೂಟ ಚಪಾತಿ ಅನ್ನ ಸಾಂಬರ್ ತಿಂದಿದ್ದಾರೆ. ಆದರೆ ರಾತ್ರಿ ನಿದ್ರೆ ಮಾಡದೆ ಬ್ಯಾರಕ್ನಲ್ಲಿ ಪ್ರಜ್ವಲ್ ಓಡಾಟ ನಡೆಸಿದ್ದಾರೆ. ಸದ್ಯ ಯಾವ ಸಿಬ್ಬಂದಿ ಅಧಿಕಾರಿಗಳ ಜೊತೆ ಮಾತನಾಡದೆ ತನ್ನಷ್ಟಕ್ಕೇ ತಾನೇ ಇದ್ದಾರೆ ಎಂದು ತಿಳಿದು ಬಂದಿದೆ.

ಪೆನ್ಡ್ರೈವ್ ಪ್ರಕರಣದ ಆರೋಪಿ, ಪ್ರಜ್ವಲ್ ರೇವಣ್ಣ ಎನ್ಐಟಿ ವಿಚಾರಣೆಗೆ ಸಹಕರಿಸುತ್ತಿಲ್ಲ. ಪ್ರಕರಣದ ಬಗ್ಗೆ ಸರಿಯಾದ ಮಾಹಿತಿ ನೀಡದೇ ಸತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.  ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಎಸ್ಐಟಿ ಅಧಿಕಾರಿಗಳು ಪ್ರಶ್ನಿಸಿದರೆ, ತನ್ನ ಬಳಿ ಯಾವುದೇ ಸ್ವಂತ ಮೊಬೈಲ್ ಇಲ್ಲ. ನನ್ನ ಮೊಬೈಲ್ ಕಳೆದುಹೋಗಿದೆ. ವಿಡಿಯೋ ಮಾರ್ಫ್ ಮಾಡಲಾಗಿದೆ. ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಅಂತಾ ಹೇಳುತ್ತಿದ್ದಾರೆ.   ವಿಡಿಯೋದಲ್ಲಿ ಇರುವುದು ನಾನಲ್ಲ ಅಂತಾ ಹೇಳಿದ್ದಾರೆ ಎನ್ನಲಾಗಿದೆ.ಎಂದು ಹೇಳಲಾಗುತ್ತಿದೆ.

 ವಿರೋಧ ಪಕ್ಷದ ನಾಯಕನಿಗೆ ಇನ್ನೂ ಸಿಕ್ಕಲ್ಲ ಸರ್ಕಾರಿ ನಿವಾಸ!

ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಗೆ ಸರ್ಕಾರಿ ನಿವಾಸ ಇನ್ನೂ ಸಿಕ್ಕಿಲ್ಲ. ಸರ್ಕಾರಿ ನಿವಾಸಕ್ಕೆ ಆರ್.ಅಶೋಕ್ ಮನವಿ ಮಾಡಿದರೂ ಸರ್ಕಾರ ಮಾತ್ರ ಈವರೆಗೂ ಯಾವುದೇ ಸ್ಪಂದನೆ ನೀಡಿಲ್ಲ. ಈ ಬಗ್ಗೆ ಮೂರು ಬಾರಿ ಪತ್ರ ಬರೆದರೂ ಸರ್ಕಾರಿ ನಿವಾಸವನ್ನು ಮಾತ್ರ ಸರ್ಕಾರ ನೀಡದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.. ಅಶೋಕ್ ಮೂರು ನಿವಾಸದಲ್ಲಿ ಯಾವುದಾದ್ರೂ ಒಂದು ನೀಡಿ ಎಂದು ಅಶೋಕ್ ಮನವಿ ಮಾಡಿದ್ದರು. ಆದರೆ ಅಶೋಕ್ಗೆ ನೀಡಲು ಸರ್ಕಾರಿ ನಿವಾಸ ಖಾಲಿ ಇಲ್ಲದೆ ಇರುವುದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೂ ದೊಡ್ಡ ತಲೆ ನೋವಾಗಿದೆ. ಸಚಿವರನ್ನ ಖಾಲಿ ಮಾಡಿಸಿ ಕೊಡಲು ಸಾಧ್ಯವಾಗುತ್ತಿಲ್ಲ.

Shwetha M