ಹಾದಿ ತಪ್ಪಿದ ಮಾತಾಡಿ ಕೆಟ್ಟ ಹೆಚ್‌ಡಿಕೆ – ಮೈತ್ರಿ ಮನೆ ಕೆಡಿಸಿತಾ ನಾರಿ ಸಿಟ್ಟು?

ಹಾದಿ ತಪ್ಪಿದ ಮಾತಾಡಿ ಕೆಟ್ಟ ಹೆಚ್‌ಡಿಕೆ – ಮೈತ್ರಿ ಮನೆ ಕೆಡಿಸಿತಾ ನಾರಿ ಸಿಟ್ಟು?

ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನೇ ಮುಂದಿಟ್ಟು ಚುನಾವಣೆಗೆ ಜನರ ಬಳಿ ವೋಟ್ ಕೇಳ್ತಿದೆ. ಆದ್ರೆ ಅದೇ ಗ್ಯಾರಂಟಿಗಳನ್ನ ಟೀಕಿಸೋ ಭರದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೊಡ್ಡ ಎಡವಟ್ಟನ್ನೇ ಮಾಡಿಕೊಂಡಿದ್ದಾರೆ. ಗ್ಯಾರಂಟಿಗಳಿಂದ ಹಳ್ಳಿ ಹೆಣ್ಮಕ್ಕಳು ಸ್ವಲ್ಪ ದಾರಿ ತಪ್ಪಿದ್ದಾರೆ ಎಂದಿದ್ದಾರೆ. ಹೆಚ್​ಡಿಕೆ ಆಡಿದ್ದೇ ಇದೇ ಮಾತು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್ ನಾಯಕರಿಗೆ ಬ್ರಹ್ಮಾಸ್ತ್ರವಾಗಿ ಸಿಕ್ಕಿದ್ರೆ ಮಹಿಳಾ ಕಾರ್ಯಕರ್ತೆಯರು ರೊಚ್ಚಿಗೆದ್ದಿದ್ದಾರೆ. ಮತ್ತೊಂದೆಡೆ ಕುಮಾರಸ್ವಾಮಿ ಹೇಳಿಕೆಯನ್ನಾಧರಿಸಿ ರಾಜ್ಯ ಮಹಿಳಾ ಆಯೋಗದಿಂದ ಸುಮೋಟೋ‌ ದೂರು ದಾಖಲಿಸಿಕೊಂಡಿದೆ. ಆದ್ರೆ ಕುಮಾರಣ್ಣ ಆಡಿರುವ ಮಾತು ಮೈತ್ರಿ ಪಕ್ಷಕ್ಕೆ ಭಾರೀ ಡ್ಯಾಮೇಜ್ ಉಂಟು ಮಾಡಲಿದೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌! ನಿಲ್ದಾಣಗಳಲ್ಲಿ ತಿನಿಸು ಮಾರಾಟ.. – ಏನೆಲ್ಲಾ ಸಿಗುತ್ತೆ?

ಗ್ಯಾರಂಟಿಯಿಂದ ತಪ್ಪು ದಾರಿ!

ತುರುವೇಕೆರೆಯಲ್ಲಿ ವಿ.ಸೋಮಣ್ಣ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ ಹೆಚ್​ಡಿಕೆ, ಇವತ್ತಿನ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಅವರ ಬದುಕು ಏನಾಗಬೇಕು ಎಂದು ಯೋಚನೆ ಮಾಡಬೇಕಿದೆ. ಈ ಹಿಂದೆ ನಾವು ಬಿಎಸ್​ವೈ ಸರ್ಕಾರ ರಚನೆ ಮಾಡಿದ್ದಾಗ, ಇನ್ನು 20 ತಿಂಗಳ ಮುಂದುವರೆದಿದ್ರೆ, ಆವತ್ತೆ ಕಾಂಗ್ರೆಸ್ ಬಾಗಿಲು‌ ಮುಚ್ಚಬೇಕಿತ್ತು. ಆಗ ಸರ್ಕಾರ ಬಿಳುವುದಕ್ಕೆ ಅನೇಕ ಕಾರಣಗಳು‌ ಇದೆ. ನಾನು ಸಿಎಂ ಸ್ಥಾನ ಬಿಟ್ಟುಕೊಡದ್ದಕ್ಕೆ ಒಂದು ರೀತಿ ವನವಾಸ ಅನುಭವಿಸಿದ್ದೇನೆ. ಅವತ್ತಿನ ಸರ್ಕಾರದ ಕೆಲಸಗಳ ಬಗ್ಗೆ ಅನೇಕ‌ ಚರ್ಚೆಗಳಾಗಿದೆ‌. ಬಿಜೆಪಿಯ ಬಿ  ಟೀಂ ಎನ್ನುವ ಅಪಪ್ರಚಾರದ ಮೂಲಕ ಜೆಡಿಎಸ್​ನ ಮುಗಿಸೋಕೆ ಪ್ರಯತ್ನ ಮಾಡಿದ್ದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಹೆಚ್ ಡಿಕೆ ನೀಡಿದ್ದ ಇದೇ ಹೇಳಿಕೆಯೇ ಈಗ ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಲಾಗಿದೆ. ಕಾಂಗ್ರೆಸ್ ನಾಯಕರು ಕೂಡ ಕಿಡಿ ಕಾರಿದ್ದಾರೆ.

ಸಿದ್ದು, ಡಿಕೆಶಿ ವಾಗ್ದಾಳಿ!

ನಮ್ಮ 5 ಗ್ಯಾರಂಟಿಯಿಂದ ಹೆಣ್ಣು ಮಕ್ಕಳು ದಾರಿತಪ್ಪುತ್ತಿದ್ದಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನಮ್ಮ ಅಕ್ಕ ತಂಗಿಯರಿಗೆ, ಹೆಣ್ಣು ಕುಲಕ್ಕೆ ಅಷ್ಟೇ ಅಲ್ಲ, ಇಡೀ ಮಾನವ ಕುಲಕ್ಕೆ ಅಪಮಾನವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಹಾಗೇ ಮಿಸ್ಟರ್ ಕುಮಾರಸ್ವಾಮಿ ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯಾ. ನೀನು ಗೆಲ್ಲುವುದಿಲ್ಲ. ನೀನು ಎಂತ ಸುಳ್ಳುಗಾರ ಮೋಸಗಾರ ಎಂದು ಗೊತ್ತಾಗುತ್ತದೆ.  ನಾನು ಕಲ್ಲು ಲೂಟಿ ಮಾಡಿದ್ನೋ ಮೋಸಮಾಡಿದ್ನೋ ಬಹಿರಂಗ ಚರ್ಚೆಗೆ ಬರಲಿ. ದಾಖಲೆ ಸಮೇತ ಸಾಬೀತುಪಡಿಸಲಿ ಎಂದು ಡಿಕೆಶಿ ಏಕವಚನದಲ್ಲೇ ಸವಾಲು ಹಾಕಿದರು.  ಇನ್ನು ಸಿಎಂ ಸಿದ್ದರಾಮಯ್ಯ ಮಾತನಾಡಿ,. ಕುಮಾರಸ್ವಾಮಿ ಹೇಳಿರುವ ಮಾತಿನಿಂದ ಅವರ ಮನಸ್ಥಿತಿ ಅರ್ಥಮಾಡಿಕೊಳ್ಳಬೇಕು. ದಾರಿತಪ್ಪಿದ್ದಾರೆ ಎಂದರೇನು? ಅವರ ಹೇಳಿಕೆಯಿಂದ ಹೆಣ್ಣುಮಕ್ಕಳ ಬಗ್ಗೆ ಅವರಿಗಿರುವ ಭಾವನೆ ಏನು ಎಂದು ಅರ್ಥವಾಗುತ್ತದೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು ಈ ರೀತಿ ಮಾತನಾಡಿದರೆ ಜನ ಸಹಿಸುತ್ತಾರೆಯೇ ಎಂದಿದ್ದಾರೆ.

ತಾವು ಹೇಳಿದ್ದ ಮಾತು ಇಷ್ಟೆಲ್ಲಾ ವಿವಾದ ಹುಟ್ಟು ಹಾಕಿದ ಮೇಲೆ ಕುಮಾರಣ್ಣ ಎಚ್ಚೆತ್ತುಕೊಂಡಿದ್ದಾರೆ. ತಾನು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿಲ್ಲ, ಅದರೆ ಕಾಂಗ್ರೆಸ್ ನಾಯಕರು ನಾನು ಬಳಸಿದ ಪದಗಳನ್ನು ತಿರುಚಿ ಅಪಪ್ರಚಾರ ನಡೆಸುತ್ತಿದ್ದಾರೆ ಮತ್ತು ತನ್ನ ವಿರುದ್ಧ ಗೋ ಬ್ಯಾಕ್ ಪ್ರತಿಭಟನೆಗಳನ್ನು ಮಾಡಿಸುತ್ತಿದ್ದಾರೆ ಎಂದರು. ತಮ್ಮಿಂದ ಹಿಂದೆ ಆಗಿರಬಹುದಾದ ತಪ್ಪಗಳನ್ನು ವಿಧಾನಸಭಾ ಅಧಿವೇಶನಲ್ಲೇ ಅಂಗೀಕರಿಸಿದ್ದು ತಪ್ಪು ಮಾಡಿದಾಗೆಲ್ಲ ಸರಿದಾರಿಗೆ ತರುವ ಕೆಲಸವನ್ನು ತಮ್ಮ ಧರ್ಮಪತ್ನಿ ಮಾಡಿದ್ದಾರೆಂದು ಹೆಚ್​ಡಿಕೆ ಹೇಳಿದ್ದಾರೆ. ಹಾಗೇ ರಾಜ್ಯದ ಮಹಿಳೆಯರಿಗೆ ಅಪಮಾನಕರವಾಗುವ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೂ ತಾಯಂದಿರಿಗೆ ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಮತ್ತೊಂದೆಡೆ ಮಹಿಳಾ ಆಯೋಗ ಇದನ್ನ ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕುಮಾರಸ್ವಾಮಿಗೆ ನೋಟಿಸ್ ಜಾರಿ ಮಾಡಿದೆ. ಚುನಾವಣೆ ಹೊತ್ತಲ್ಲಿ ನಾಯಕರು ಆಡುವ ಒಂದೊಂದು ಮಾತಿನ ಮೇಲೂ ನಿಗಾ ಇರಬೇಕಾಗುತ್ತೆ. ಇಲ್ಲದಿದ್ರೆ ವಿಪಕ್ಷಗಳಿಗೆ ಆಹಾರವಾಗೋದಂತೂ ಗ್ಯಾರಂಟಿ.

Shwetha M