ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್‌ ಅಧಿಕೃತವಾಗಿ ಸೇರ್ಪಡೆ! – ಸೀಟು ಹಂಚಿಕೆ ವಿಚಾರವಾಗಿ ಹೆಚ್‌ಡಿಕೆ ಹೇಳಿದ್ದೇನು?

ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್‌ ಅಧಿಕೃತವಾಗಿ ಸೇರ್ಪಡೆ! – ಸೀಟು ಹಂಚಿಕೆ ವಿಚಾರವಾಗಿ ಹೆಚ್‌ಡಿಕೆ ಹೇಳಿದ್ದೇನು?

ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದ ಬಿಜೆಪಿ – ಜೆಡಿಎಸ್‌ ಮೈತ್ರಿ ವಿಚಾರಕ್ಕೆ ಕೊನೆಗೂ ತೆರೆಬಿದ್ದಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಜೆಡಿಎಸ್‌ ಅಧಿಕೃತವಾಗಿ ಸೇರ್ಪಡೆಯಾಗಿದೆ.

ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಶುಕ್ರವಾರ ಗೃಹ ಸಚಿವ ಅಮಿತ್‌ ಶಾ ನಿವಾಸಕ್ಕೆ ತೆರಳಿ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆ ಬಿಜೆಪಿ, ಜೆಡಿಎಸ್ ಮೈತ್ರಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಕಾವೇರಿ ಪ್ರತಿಭಟನೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಿದ್ರೆ ಕಠಿಣ ಕ್ರಮ – ಹೋರಾಟಗಾರರಿಗೆ ಗೃಹ ಸಚಿವರ ಎಚ್ಚರಿಕೆ!

ಇನ್ನು ಮೈತ್ರಿ ಬಗ್ಗೆ ಮಾಜಿ ಸಿಎಂ ಹೆಚ್‌. ಡಿ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಮೈತ್ರಿ ಬಗ್ಗೆ ಎಲ್ಲಾ ರೀತಿಯಲ್ಲೂ ಸುಗಮವಾಗಿ ಚರ್ಚೆ ನಡೆಯುತ್ತಿದೆ. ಎಷ್ಟು ಸೀಟ್‌ ನಮಗೆ ಕೊಡುತ್ತಾರೆಂಬುದು ಮುಖ್ಯವಲ್ಲ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್ ಪಕ್ಷಗಳು ಗೆಲ್ಲುವುದೇ ನಮ್ಮ ಗುರಿ. ಬಿಜೆಪಿ, ಜೆಡಿಎಸ್‌ ಮೈತ್ರಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದೆ ಯಾವುದೇ ರೀತಿಯಲ್ಲೂ ಗೊಂದಲ ಇಲ್ಲದೆ ಮೈತ್ರಿಯಾಗಲಿದೆ ಎಂದು ಹೇಳಿದ್ದಾರೆ.

ಮೈತ್ರಿ ವಿಚಾರವಷ್ಟೇ ಅಲ್ಲದೆ ಕರ್ನಾಟಕಕ್ಕೆ ಸಂಬಂಧಿಸಿದ ಇತರ ಅನೇಕ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಗೃಹ ಸಚಿವ ಅಮಿತ್ ಶಾ ಜತೆ ಚರ್ಚಿಸಿದ್ದೇವೆ. ಕಾವೇರಿ ವಿಚಾರದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತೋರಿದೆ. ರಾಜ್ಯದ ರೈತರಿಗೆ ಮಾರಕವಾಗುವ ರೀತಿ ಸರ್ಕಾರದ ನಡವಳಿಕೆ ಇದೆ. ನಿವೃತ್ತ ನ್ಯಾಯಮೂರ್ತಿಗಳ ಜೊತೆ ಸಭೆ ಮಾಡುವ ಕನಿಷ್ಠ ತಿಳವಳಿಕೆ ಇಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ 6 ಕ್ಷೇತ್ರಗಳನ್ನು ಕೇಳಿದ್ದು, ಬಿಜೆಪಿ 4 ಕ್ಷೇತ್ರಗಳನ್ನು ನೀಡಲು ಸಿದ್ಧವಿದೆ ಎನ್ನಲಾಗುತ್ತಿದೆ. ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರದ ಜೊತೆ ಮೈಸೂರಿನ ಮೇಲೂ ಜೆಡಿಎಸ್‌ ಕಣ್ಣಿಟ್ಟಿದೆ ಎಂದು ಹೇಳಲಾಗುತ್ತಿದೆ.

Shwetha M