ಕೊಬ್ಬರಿ ಬೆಲೆ ಏರಿಕೆಗೆ ಆಗ್ರಹಿಸಿ ಪಾದಯಾತ್ರೆಗೆ ಸಜ್ಜಾದ ಹೆಚ್.ಡಿಕೆ – ಕುಮಾರಣ್ಣದ ಯಾತ್ರೆ ಹಿಂದಿರುವ ಗಿಮಿಕ್ ಏನು?

ಕೊಬ್ಬರಿ ಬೆಲೆ ಏರಿಕೆಗೆ ಆಗ್ರಹಿಸಿ ಪಾದಯಾತ್ರೆಗೆ ಸಜ್ಜಾದ ಹೆಚ್.ಡಿಕೆ – ಕುಮಾರಣ್ಣದ ಯಾತ್ರೆ ಹಿಂದಿರುವ ಗಿಮಿಕ್ ಏನು?

ಮಳೆ ಇಲ್ಲ. ಬೆಳೆ ಇಲ್ಲ. ಬೋರ್ ವೆಲ್ ನೀರು ನಂಬಿಕೊಂಡು ಬೆಳೆ ಬೆಳೆದ್ರೂ ಸೂಕ್ತ ಬೆಲೆ ಸಿಗ್ತಿಲ್ಲ. ರಾಜ್ಯದ ರೈತರ ಪರಿಸ್ಥಿತಿಯಂತೂ ಅತ್ಯಂತ ದಯನೀಯ ಸ್ಥಿತಿಯಲ್ಲಿದೆ. ಇದರ ನಡುವೆ ತೆಂಗು ಬೆಳೆಗಾರರ ಗೋಳು ಹೇಳತೀರದಾಗಿದೆ. ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ದಿಕ್ಕೇ ತೋಚದಂತಾಗಿದೆ. ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೂ ಕೊಬ್ಬರಿ ಬೆಲೆ ಕುಸಿತ ವಿಚಾರ ಭಾರೀ ಸದ್ದು ಮಾಡ್ತಿದೆ. ವಿಪಕ್ಷ ನಾಯಕರು ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಕೂಡ ಬೆಂಬಲ ಬೆಲೆಗೆ ಆಗ್ರಹಿಸಿದ್ದಾರೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತೆಂಗಿನ ಬೆಳೆಗಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ಅಪ್‌ಡೇಟ್ ಮಾಡಿಸಲು ಮತ್ತೊಂದು ಅವಕಾಶ – ಗಡುವು ವಿಸ್ತರಿಸಿದ ಯುಐಡಿಎಐ

ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದೆನಿಸಿರುವ ತೆಂಗು ರೈತರ ಪಾಲಿನ ಆದಾಯ ತಂದುಕೊಡುವ ಬೆಳೆ. ಕಲ್ಪವೃಕ್ಷ ಎಂದೇ ಖ್ಯಾತಿ ಪಡೆದಿರುವ ತೆಂಗಿನಿಂದ ಕಾಯಿ, ಗರಿ ಸೇರಿ ಎಲ್ಲವೂ ಉಪಯೋಗಕ್ಕೆ ಬರುತ್ತೆ. ದೇಶ, ವಿದೇಶಗಳಲ್ಲೂ ಸದ್ದು ಮಾಡುತ್ತಿರುವ ತೆಂಗಿನಿಂದ ಹತ್ತಾರು ಉಪಯೋಗಗಳಿವೆ. ಯುವಜನರು ಕೂಡ ತೆಂಗು ಉತ್ಪನ್ನಗಳ ಮೂಲಕ ಸ್ವ ಉದ್ಯೋಗ ಕಂಡುಕೊಂಡಿದ್ದಾರೆ. ಆದ್ರೀಗ ಅದೇ ತೆಂಗಿನ ತೋಟ ಹೊಂದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಮತ್ತೊಂದೆಡೆ ವಾಣಿಜ್ಯ ಬೆಳೆಯಾದ ಕೊಬ್ಬರಿಗೂ ಸೂಕ್ತ ಬೆಲೆ ಸಿಗುತ್ತಿಲ್ಲ. ತೆಂಗು ಬೆಳೆಯಲ್ಲಿ ತುಮಕೂರು ಜಿಲ್ಲೆ ನಂ 1 ಸ್ಥಾನದಲ್ಲಿದ್ದು ರಾಜ್ಯದ ಒಟ್ಟು ಉತ್ಪಾದನೆಯ ಶೇ. 85 ರಷ್ಟು ಇಲ್ಲೇ ಉತ್ಪಾದನೆಯಾಗುತ್ತೆ. ಹಾಸನ, ದಕ್ಷಿಣಕನ್ನಡ, ಚಿಕ್ಕಮಗಳೂರು, ಮಂಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳೂ ಸಹ ತೆಂಗು ಬೆಳೆಯುವ ಪ್ರಮುಖ ಜಿಲ್ಲೆಗಳು ಎನಿಸಿಕೊಂಡಿವೆ. ಆದ್ರೀಗ ಕೊಬ್ಬರಿಗೆ ಸೂಕ್ತ ಬೆಲೆ ಇಲ್ಲದ ಪರಿಣಾಮ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಕೊಬ್ಬರಿ ಖರೀದಿಗೆ ಬೆಂಬಲ ಬೆಲೆ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ. ರೈತರ ಪರ ನಿಂತಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪಾದಯಾತ್ರೆ ಮಾಡೋದಾಗಿ ಘೋಷಣೆ ಮಾಡಿದ್ದಾರೆ.

ಬೆಳಗಾವಿ ಅಧಿವೇಶನ ಮುಗಿದ ಮೇಲೆ ಅರಸೀಕರೆಯಿಂದ ತುಮಕೂರುವರೆಗೆ ಪಾದಯಾತ್ರೆ ನಡೆಸೋದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ. ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಹಾಸನ, ತುಮಕೂರು ಸೇರಿ 12ರಿಂದ 13 ಜಿಲ್ಲೆಗಳಲ್ಲಿ ಬೆಳೆಯುವ ಕೊಬರಿ ಬೆಲೆ ಶೇ.50ರಷ್ಟು ಕುಸಿದಿದೆ. ಕಳೆದ ಒಂದು ವರ್ಷದಿಂದ ಏಳೂವರೆ, ಎಂಟೂವರೆ ಸಾವಿರ ರೂಪಾಯಿಗೆ ಕೊಬ್ಬರಿ ಮಾರಾಟವಾಗುತ್ತಿದೆ. ಕಳೆದ ಒಂದು ವರ್ಷದಿಂದ ತೆಂಗು ಬೆಳೆಗಾರರ ಖರ್ಚು ವೆಚ್ಚ ಏನಿದೆ, ಅದಕ್ಕೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಣ್ಣು ತೆರೆಸಲು ಅರಸೀಕೆರೆಯಿಂದ ತುಮಕೂರುವರೆಗೆ ಪಾದಯಾತ್ರೆ ಮಾಡುತ್ತೇನೆ. ನನಗೆ ಆರೋಗ್ಯ ಸಮಸ್ಯೆಯಿದೆ, ಅದಕ್ಕೆ ಹೆದರಿ ಕೂರಲ್ಲ. ಅಧಿವೇಶನ ಮುಗಿದ ಮೇಲೆ ಪಾದಯಾತ್ರೆ ಕೈಗೊಳ್ಳುತ್ತೇನೆ. ಎನ್‌ ಡಿಎ ಜತೆ ಮೈತ್ರಿ ಆಗಿದೆ ಎಂದು ಮೃದುಧೋರಣೆ ತೋರಲ್ಲ. ನಾನೇ ಸಿಎಂ ಆಗಿ ಅಧಿಕಾರದಲ್ಲಿ ಇದ್ದಿದ್ದರೆ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂಪಾಯಿ ಘೋಷಣೆ ಮಾಡುತ್ತಿದ್ದೆ. ರಾಜ್ಯ ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ಮೂಲಕ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಬೆಳಗಾವಿ ಅಧಿವೇಶನ ಮುಗಿದ ಬಳಿಕ ಅರಸೀಕರೆಯಿಂದ ತುಮಕೂರುವರೆಗೆ ಪಾದಯಾತ್ರೆ ನಡೆಸುತ್ತೇನೆ ಎಂದಿದ್ದಾರೆ.

Shantha Kumari