“ಪೆನ್ ಡ್ರೈವ್ ಬ್ರದರ್” ಹೆಸರಿನಲ್ಲಿ ಸಿನಿಮಾ ಪೋಸ್ಟರ್.. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರ – ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದ್ಯಾರು?
ಬೆಂಗಳೂರು: ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ಪೋಸ್ಟರ್ ವಾರ್ ತಾರಕಕ್ಕೇರಿದೆ. ಇದರ ನಡುವೆಯೇ ಬೆಂಗಳೂರಿನ ಹಲವೆಡೆ, “ಪೆನ್ ಡ್ರೈವ್ ಬ್ರದರ್”ಎಂದು ಕುಮಾರಸ್ವಾಮಿ ಅವರನ್ನು ಗೇಲಿ ಮಾಡುವ ವ್ಯಂಗ್ಯ ಚಿತ್ರಗಳೊಂದಿಗೆ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಚಿತ್ರ ನಿರ್ಮಾಪಕರೂ ಆಗಿರುವ ಕುಮಾರಸ್ವಾಮಿ ಅವರನ್ನು ಸಿನಿಮಾ ಪೋಸ್ಟರ್ ಮಾದರಿಯ ಪೋಸ್ಟರ್‌ಗಳ ಮೂಲಕ ಗೇಲಿ ಮಾಡಲಾಗಿದೆ.
ಇದನ್ನೂ ಓದಿ: ಕೈಯ್ಯಲ್ಲೊಂದು.. ಕುತ್ತಿಗೆಯಲ್ಲಿ ಇನ್ನೆರಡು ಹಾವು! – ಇದು ಶಾರುಖ್‌ಖಾನ್ ಹೊಸ ಅವತಾರ!
ಪೋಸ್ಟರ್‌ನಲ್ಲಿ ಏನಿದೆ?
ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಕರೆಂಟ್ ಕಳ್ಳ ಖ್ಯಾತಿಯ ಎಚ್ಚಡಿಡಿಕೆ ನಿರ್ಮಾಣದ ಚಿತ್ರ “ಪೆನ್ ಡ್ರೈವ್ ಬ್ರದರ್”ಎಂದು ಈ ಪೋಸ್ಟರ್‌ಗಳಲ್ಲಿ ಲೇವಡಿ ಮಾಡಲಾಗಿದೆ. ಇನ್ನು ನಿರ್ದೇಶನ ಪ್ರಾಮಾಣಿಕ ಖ್ಯಾತಿಯ ಕರೆಂಟ್ ಕಳ್ಳ ಎಂದು ಬರೆದಿದ್ದು, ಚಿತ್ರದ ನಿರ್ಮಾಣದ ವೆಚ್ಚ 68,000 ರೂಪಾಯಿ ಎಂದು ಪೋಸ್ಟರ್‌ನಲ್ಲಿ ವ್ಯಂಗ್ಯವಾಡಲಾಗಿದೆ.
ದೀಪಾವಳಿ ಹಬ್ಬದ ವೇಳೆ ಕರೆಂಟ್ ಕಳ್ಳತನ ಆರೋಪದಡಿ ಕುಮಾರಸ್ವಾಮಿ ಅವರಿಗೆ ಸುಮಾರು 68,000 ರೂಪಾಯಿ ದಂಡ ಹಾಕಲಾಗಿತ್ತು. ಇದನ್ನೇ ಅಸ್ತ್ರವಾಗಿಟ್ಟುಕೊಂಡಿರುವ ಕುಮಾರಸ್ವಾಮಿ ವಿರೋಧಿಗಳು ಬರೀ ಟೀಸರ್ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ ಸಿನಿಮಾ ಇನ್ನೂ ಬಾಕಿಯಿದೆ ಎಂದು ಪೋಸ್ಟರ್‌ನಲ್ಲಿ ಬರೆದುಕೊಂಡಿರುವುದು ಕುತೂಹಲ ಮೂಡಿಸಿದೆ.
ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಪೋಸ್ಟರ್ ಅಂಟಿಸಿ ಕುಮಾರಸ್ವಾಮಿ ವಿರೋಧಿಗಳು ಆಕ್ರೋಶ ಹೊರ ಹಾಕಿದ್ದಾರೆ. ಗೋಡೆಗಳ ಮೇಲೆ ಅಂಟಿಸಲಾಗಿದ್ದ ಪೋಸ್ಟರ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು ಮಾಹಿತಿ ಬಂದ ಕೂಡಲೇ ಪೊಲೀಸರು ಹುಡುಕಾಟ ನಡೆಸಿದ್ದು ಎಲ್ಲೂ ಕೂಡ ಪೋಸ್ಟರ್ ಗಳು ಪತ್ತೆಯಾಗಿಲ್ಲ ಎನ್ನಲಾಗುತ್ತಿದೆ.