ಲಾಟರಿ ಪ್ರಧಾನಿ, ಎಟಿಎಂ ಫ್ಯಾಮಿಲಿ, ಲೂಟಿ ಎಂದವರಿಗೆ ಚಾಟಿ – ಹೆಚ್​ಡಿಕೆ ಸಿಟ್ಟಿಗೆ ಸದನದಲ್ಲಿ ಕೋಲಾಹಲ!

ಲಾಟರಿ ಪ್ರಧಾನಿ, ಎಟಿಎಂ ಫ್ಯಾಮಿಲಿ, ಲೂಟಿ ಎಂದವರಿಗೆ ಚಾಟಿ – ಹೆಚ್​ಡಿಕೆ ಸಿಟ್ಟಿಗೆ ಸದನದಲ್ಲಿ ಕೋಲಾಹಲ!

ವಿಧಾನಸಭೆ ಕಲಾಪದಲ್ಲಿ ಇವತ್ತು ಭಾರೀ ಹೈಡ್ರಾಮಾವೇ ನಡೆಯಿತು. ರಾಜ್ಯಪಾಲರ ವಂದನಾ ನಿರ್ಣಯದ ಭಾಷಣದ ವೇಳೆ ಗಲಾಟೆ, ಗದ್ಧಲ ಉಂಟಾಗಿತ್ತು. ಅದ್ರಲ್ಲೂ ಇವತ್ತು ಸದನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ರು. ದೇವೇಗೌಡರ ಕುಟುಂಬದ ಮೇಲಿನ ಟೀಕೆಗಳ ಸಂಬಂಧ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

ಮೊನ್ನೆಯಷ್ಟೇ ಸದನದಲ್ಲಿ ಹೆಚ್​.ಡಿ ದೇವೇಗೌಡರನ್ನ ಲಾಟರಿ ಪ್ರಧಾನಮಂತ್ರಿ ಎಂದಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಹೆಚ್​ಡಿಕೆ ತಿರುಗೇಟು ನೀಡಿದ್ರು. ಹೌದು ದೇವೇಗೌಡರು ಲಾಟರಿ ಪ್ರಧಾನ ಮಂತ್ರಿಯೇ. 300 ಸಂಸದರನ್ನ ಗೆಲ್ಲಿಸಿ ಹೆಚ್​ಡಿಡಿ ಪ್ರಧಾನಿ ಆಗಿಲ್ಲ. ಪಿಎಂ ಆಗಲು ಅರ್ಜಿ ಹಿಡ್ಕೊಂಡು ಹೋಗಿರಲಿಲ್ಲ. ದೇವರ ದಯೆಯಿಂದ ಹೆಚ್​ಡಿಡಿ ಪ್ರಧಾನಿ ಆದರು. ನಮ್ಮ ಕುಟುಂಬ ಚುನಾವಣೆಯಲ್ಲಿ ಸೋಲನ್ನೂ ಕಂಡಿದೆ, ಗೆಲುವನ್ನೂ ಕಂಡಿದೆ ಎಂದು ವಾಗ್ದಾಳಿ ನಡೆದಿದ್ರು.

ಇದನ್ನೂ ಓದಿ : ‘ಕಾಂಗ್ರೆಸ್‌ನಲ್ಲಿ 10 ಮಂದಿಗೆ ಸಿಎಂ ಆಗುವ ಆಸೆ, ಅದರಲ್ಲಿ ನಾನೂ ಒಬ್ಬ..!’- ಡಾ. ಜಿ ಪರಮೇಶ್ವರ್

ಇದೇ ವೇಳೆ ಮಾತನಾಡಿದ ಹೆಚ್​ಡಿಕೆ, ದೇವೇಗೌಡರ ಫ್ಯಾಮಿಲಿಯನ್ನ ಎಟಿಎಂ ಅಂತಾ ಕರೆಯುತ್ತಾರೆ.  ದೇವೇಗೌಡರ ಕುಟುಂಬದಲ್ಲಿ ಸೊಸೆ, ಮಕ್ಕಳು ಎಲ್ಲಾ ಸೇರ್ಕೊಂಡು ಲೂಟಿ ಮಾಡ್ತಿದ್ದಾರೆ ಅಂದ್ರು. ಆದ್ರೆ ಜನ ಹೇಳ್ತಾರೆ ಯಾರು ಲೂಟಿ ಮಾಡಿದ್ರು ಅಂತಾ. 2023ಕ್ಕೆ ತೀರ್ಪು ಕೊಡ್ತಾರೆ. ನಾವು ಅಧಿಕಾರ ಬಂದಾಗ ಮೆರೆದಿಲ್ಲ. ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇವೆ ಅಂದ್ರು.

ಹಾಗೇ ರಾಜ್ಯಪಾಲರ ವಂದನಾ ನಿರ್ಣಯದ ಭಾಷಣದ ವೇಳೆ ನಿಯಮಿತವಾಗಿ ಮಾತಾಡಬೇಕಿತ್ತು. ಅದನ್ನ ಬಿಟ್ಟು ತುರ್ತು ಪರಿಸ್ಥಿತಿಯ ಬಗ್ಗೆ ಯಾಕೆ ಮಾತಾಡಬೇಕಿತ್ತು. 75ನೇ ಇಸವಿಯ ವಿಚಾರ ಯಾಕೆ ತೆಗೆಯಬೇಕಿತ್ತು. ಇಲ್ಲಿ ರಾಜ್ಯಪಾಲರ ಭಾಷಣವೇ ಇಲ್ಲ. ಸಿದ್ಧಾಂತದ ಬಗ್ಗೆ ಮಾತಾಡುವ ಬದಲು ರಾಜ್ಯಪಾಲರ ಭಾಷಣದ ಬಗ್ಗೆ ಮಾತಾಡಬೇಕಿತ್ತು. ಸಿ.ಟಿ ರವಿಗೆ ಅಷ್ಟೆಲ್ಲಾ ಮಾತನಾಡಲು ಸದನದಲ್ಲಿ ಯಾಕೆ ಬಿಡಬೇಕಿತ್ತು ಎಂದು ಪ್ರಶ್ನಿಸಿದ್ರು.

ಈಗಿರುವ ಬಿಜೆಪಿ ಬಿ.ಎಸ್ ಯಡಿಯೂರಪ್ಪನವರ ಬಿಜೆಪಿ ಅಲ್ಲ. ಈಗ ಅಲ್ಲಿಂದ (ಹೈಕಮಾಂಡ್) ನಿರ್ದೇಶನ ಬರಬೇಕು ನಿಮಗೆಲ್ಲಾ. ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ. ನಮ್ಮದು ಡಬಲ್ ಇಂಜಿನ್ ಸರ್ಕಾರ. ಡಬಲ್ ಇಂಜಿನ್ ಸರ್ಕಾರದಿಂದ ಪ್ರಗತಿಯಲ್ಲಿ ಏರಿಕೆಯಾಗಿದೆ ಅಂತೀರಲ್ಲ. ಅಸಲಿಗೆ ಇಂಜಿನ್ ಕರ್ನಾಟಕದಲ್ಲಿದೆ. ಬೋಗಿಗಳು ಉತ್ತರಪ್ರದೇಶದಲ್ಲಿದೆ ಎಂದು ಬಿಜೆಪಿ ನಾಯಕರ ಕಾಲೆಳೆದ್ರು.

ಮುಂದುವರಿದು ಮಾತನಾಡಿದ ಹೆಚ್​ಡಿಕೆ ನಮ್ಮನ್ನ ಬೇಕಾದಾಗ ಉಪಯೋಗ ಮಾಡ್ಕೊಂಡು ಬೇಡವಾದಾಗ ಬಿಸಾಡಿದ್ದೀರಾ. ನಮ್ಮನ್ನ ಗೆದ್ದೆತ್ತಿನ ಬಾಲ ಹಿಡ್ಕೊಂಡು ಹೋಗ್ತೀರಾ ಅಂತಾ ಹೇಳಿದ್ದೀರ. ಹೌದು ನೀವು ಸೋತೆತ್ತಿನ ಬಾಲ ಹಿಡ್ಕೊಂಡು ಬಂದಿದ್ದೀರ. ಉತ್ತರ ಕರ್ನಾಟಕಕ್ಕೆ ಹೋಗಿ ನೋಡಿ. ನಿಮ್ಮ ಅಭಿವೃದ್ಧಿ ಎತ್ತ ಸಾಗುತ್ತಿದೆ. ನಿಮ್ಮ ದುಡ್ಡೆಲ್ಲಾ ಎಲ್ಲಿ ಹೋಯ್ತು ಅನ್ನೋದು ಗೊತ್ತಾಗುತ್ತೆ. ಉತ್ತರ ಕರ್ನಾಟಕಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ನೋಡಿದ್ರೆ ಭಯ ಆಗುತ್ತೆ. ಹಾಗಾದ್ರೆ ನಿಮ್ಮ ಅಭಿವೃದ್ಧಿಯ ದುಡ್ಡೆಲ್ಲಾ ಎಲ್ಲಿ ಹೋಯ್ತು. ಇದನ್ನೆಲ್ಲಾ ರಾಜ್ಯದ ಮತದಾರನೇ ಅಂತಿಮವಾಗಿ ನಿರ್ಧಾರ ಮಾಡಬೇಕು ಎಂದು ಬಿಜೆಪಿ ಮೇಲೆ ಮುಗಿಬಿದ್ದಿದ್ರು.

ಹೆಚ್.ಡಿ ಕುಮಾರಸ್ವಾಮಿ ಮಾತಿನ ಬಳಿಕ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ಮಾತನಾಡಿದ್ರು. ಚುನಾವಣೆ ಸಂದರ್ಭದಲ್ಲಿ ಈ ರೀತಿ ಒಬ್ಬರ ಮೇಲೊಬ್ಬರು ಕೆಟ್ಟದಾಗಿ ಕೆಸರೆರಚಿಕೊಂಡು ಹೋದ್ರೆ ಜನರಿಗೆ ಕೆಟ್ಟ ಅಭಿಪ್ರಾಯ ಬರುತ್ತೆ. ರಾಜಕಾರಣಿಗಳ ಮೇಲೂ ಕೆಟ್ಟ ಅಭಿಪ್ರಾಯ ಬರುತ್ತೆ ಅಂದ್ರು.

 

suddiyaana