ಬಹುಭಾಷಾ ನಟಿ ಜಯಪ್ರದಾಗೆ ಮದ್ರಾಸ್ ಹೈಕೋರ್ಟ್ ನಿಂದ ಬಿಗ್ ಶಾಕ್ – ಜೈಲು ಶಿಕ್ಷೆ ಎತ್ತಿ ಹಿಡಿದ ನ್ಯಾಯಾಲಯ

ಬಹುಭಾಷಾ ನಟಿ ಜಯಪ್ರದಾಗೆ ಮದ್ರಾಸ್ ಹೈಕೋರ್ಟ್ ನಿಂದ ಬಿಗ್ ಶಾಕ್ – ಜೈಲು ಶಿಕ್ಷೆ ಎತ್ತಿ ಹಿಡಿದ ನ್ಯಾಯಾಲಯ

ಭಾರತೀಯ ಭಾಷೆಗಳಲ್ಲಿನ ಪ್ರಖ್ಯಾತ ನಟಿ ಜಯಪ್ರದಾ. 1980 ರ ದಶಕದಲ್ಲಿ ಭಾರತೀಯ ಭಾಷೆಗಳಲ್ಲಿ ಬಹು ಬಹುಬೇಡಿಕೆಯಲ್ಲಿದ್ದ ಜಯಪ್ರದಾ ಸಿನಿಮಾದೊಂದಿಗೆ ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ರಾಜಕಾರಣಿ ಕೂಡ. ಇದೀಗ ಜಯಪ್ರದಾ ಅವರಿಗೆ ಕೆಳ ಹಂತದ ನ್ಯಾಯಾಲಯ ವಿಧಿಸಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಮದ್ರಾಸ್​ ಹೈಕೋರ್ಟ್ ​ಖಚಿತ ಪಡಿಸಿದೆ.

ನಟಿ, ರಾಜ್ಯಸಭಾ ಮಾಜಿ ಸದಸ್ಯೆ ಜಯಪ್ರದಾಗೆ ಮದ್ರಾಸ್​ ಹೈಕೋರ್ಟ್​ ಶಾಕ್​ ನೀಡಿದೆ. ಥಿಯೇಟರ್ ಕಾಂಪ್ಲೆಕ್ಸ್‌ನ ಕಾರ್ಮಿಕರಿಂದ ಹಣ ವಸೂಲಿ ಮಾಡಿದರೂ ನೌಕರರ ರಾಜ್ಯ ವಿಮೆ ನಿಧಿಯ ಪಾಲನ್ನು ಪಾವತಿಸದ ನಟಿಗೆ ಈ ಹಿಂದೆ ನೀಡಲಾಗಿದ್ದ ಆರು ತಿಂಗಳ ಶಿಕ್ಷೆಯನ್ನು ರದ್ದುಗೊಳಿಸಲು ಮದ್ರಾಸ್​ ಹೈಕೋರ್ಟ್​ ನಿರಾಕರಿಸಿದ್ದು, ಈ ಹಿನ್ನೆಲೆಯಲ್ಲಿ ನಟಿಗೆ ಸಂಕಷ್ಟ ಎದುರಾಗಿದೆ. ಚೆನ್ನೈನ ಜನರಲ್ ಪ್ಯಾಟರ್ಸ್ ರಸ್ತೆಯಲ್ಲಿ ಜಯಪ್ರದಾ ತಮ್ಮದೇ ಹೆಸರಿನ ಚಿತ್ರಮಂದಿರವನ್ನು ಹೊಂದಿದ್ದರು. ಇದನ್ನು ಚೆನ್ನೈಗೆ ಸೇರಿದ ರಾಮ್ ಕುಮಾರ್ ಮತ್ತು ರಾಜಾ ಬಾಬು ನಡೆಸುತ್ತಿದ್ದರು. ಆ ಚಿತ್ರಮಂದಿರ ಕಾಲಾಂತರದಲ್ಲಿ ಬಾಗಿಲು ಹಾಕಿತು. ಆದರೆ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಇಎಸ್​ಐ ಅನ್ನು ನಿಯಮದಂತೆ ವರ್ಗಾವಣೆ ಮಾಡಿರಲಿಲ್ಲ. ರಂಗಭೂಮಿ ನೌಕರರ ಇಎಸ್‌ಐ ಪಾವತಿಸಲು ಆಡಳಿತ ಮಂಡಳಿ ವಿಫಲವಾಗಿದ್ದರಿಂದ ಸಮಸ್ಯೆ ಆರಂಭವಾಗಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದರು. ಅದರನ್ವಯ ಎಂಪ್ಲಾಯಿಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಷನ್ ಸಂಸ್ಥೆಯು, ಜಯಪ್ರದಾ ಹಾಗೂ ಅವರ ಪಾಲುದಾರರಾಗಿದ್ದ ರಾಮ್ ಕುಮಾರ್ ಹಾಗೂ ರಾಜಾ ಬಾಬು ವಿರುದ್ಧ ಪ್ರಕರಣ ಹೂಡಿತ್ತು.

ಇದನ್ನೂ ಓದಿ : ಬಿಗ್‌ಬಾಸ್ ಮನೆಯಲ್ಲಿ ಕಾರ್ತಿಕ್ ಮೇಲೆ ಸಂಗೀತಾ ಪ್ರಭಾವ – ಟಾಸ್ಕ್‌ನಲ್ಲಿ ಕಾರ್ತಿಕ್‌ಗೆ ಸ್ನೇಹವೇ ಉರುಳು?

ಕೆಳ ಹಂತದ ನ್ಯಾಯಾಲಯದಲ್ಲಿ ಜಯಪ್ರದಾ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದರಲ್ಲದೆ, ನೌಕರರಿಗೆ ಸೇರಬೇಕಾದ ಹಣವನ್ನು ಪಾವತಿ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಬದಲಾಗಿ ಪ್ರಕರಣವನ್ನು ಕೈಬಿಡುವಂತೆ   ಮನವಿ ಮಾಡಿದ್ದರು. ಆದರೆ ಕೋರ್ಟ್​ ನಟಿಯ ಮನವಿಯನ್ನು ಪುರಸ್ಕರಿಸಿರಲಿಲ್ಲ. ಜಯಪ್ರದಾ ಹಾಗೂ ಅವರ ಸಹವರ್ತಿಗಳಿಗೆ ಆರು ತಿಂಗಳ ಜೈಲು ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿ ಆಗಸ್ಟ್ 10ರಂದು ಆದೇಶ ಹೊರಡಿಸಿತ್ತು. ಜೈಲು ಶಿಕ್ಷೆ ರದ್ದಿಗೆ ಕೋರಿ ಜಯಪ್ರದಾ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು, ಇದೀಗ ಅಲ್ಲಿಯೂ ಜಯಪ್ರದಾಗೆ ಹಿನ್ನಡೆ ಆಗಿದೆ.

ಹೈಕೋರ್ಟ್ ನ್ಯಾಯಮೂರ್ತಿ ಜಿ.ಜಯಚಂದ್ರನ್ ಅವರು 15 ದಿನಗಳೊಳಗೆ ಎಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಶರಣಾಗುವಂತೆ ನಟಿಗೆ ಸೂಚಿಸಿದ್ದಾರೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸಿದರೆ ಜಯಪ್ರದಾ ಅವರಿಗೆ ಜಾಮೀನು ನೀಡುವಂತೆ ನ್ಯಾಯಾಧೀಶರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದಾರೆ.  ಅಲ್ಲದೆ ಮುಂದಿನ 15 ದಿನದ ಒಳಗೆ ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನಿಗಾಗಿ 20 ಲಕ್ಷ ರೂಪಾಯಿ ಬಾಂಡ್‌ಅನ್ನು ಪಾವತಿಸುವಂತೆ ಸೂಚಿಸಿದೆ.

Shantha Kumari