ಸೋತ ಮೇಲೆ ಗಂಭೀರ್ ಗೆ ಬುದ್ಧಿ ಬಂತಾ? – ಕಾಯ್ತಿದ್ದಾರೆ ಮಯಾಂಕ್, ಕರಣ್!
ಆಸಿಸ್ ಸರಣಿ ಬಳಿಕ ಭಾರತ ತಂಡ ಮುಂದಿನ 6 ತಿಂಗಳ ತನಕ ಯಾವುದೇ ಟೆಸ್ಟ್ ಪಂದ್ಯವನ್ನು ಆಡುವುದಿಲ್ಲ. ಸದ್ಯ ಕಳಪೆ ಫಾರ್ಮ್‌ಲ್ಲಿದ್ದರೂ ಇಬ್ಬರೂ ರಣಜಿ ಆಡದೇ ಇರೋ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡ್ತಿದ್ದಾರೆ. ಅಲ್ದೇ ಕೊಹ್ಲಿ ಮತ್ತು ರೋಹಿತ್ ದೇಶೀಯ ಕ್ರಿಕೆಟ್ ಆಡಿ ವರ್ಷಗಳೇ ಕಳೆದಿವೆ. ಭಾರತ ತಂಡದಲ್ಲಿ ಖಾಯಂ ಸ್ಥಾನ ಪಡೆದ ನಂತರ ಇಬ್ಬರು ರಣಜಿ ಕ್ರಿಕೆಟ್ ಆಡಿಯೇ ಇಲ್ಲ. ಇದೀಗ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಗಂಭೀರ್ ಸ್ಪಷ್ಟ ಸಂದೇಶ ರವಾನಿಸಿದ್ದು, ಡೊಮೆಸ್ಟಿಕ್ ಕ್ರಿಕೆಟ್ ಆಡುವಂತೆ ಎಚ್ಚರಿಕೆಯ ಸಂದೇಶ ಸೂಚಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿರುವ ರಣಜಿ ಟ್ರೋಫಿಯಲ್ಲಿ ಪ್ರತಿಯೊಬ್ಬರೂ ಟೀಂ ಇಂಡಿಯಾದ ಪ್ರತಿಯೊಬ್ಬರೂ ದೇಶೀಯ ಕ್ರಿಕೆಟ್ ಆಡಬೇಕೆಂದು ನಾನು ಬಯಸುತ್ತೇನೆ. ನಿಮಗೆ ಕಂಪು ಚೆಂಡಿನ ಕ್ರಿಕೆಟ್ ಆಡುವ ಬದ್ಧತೆ ಇದ್ದರೆ ದೇಶೀಯ ಪಂದ್ಯಗಳನ್ನು ಆಡಿ ಎಂದು ಸೂಚಿಸಿದ್ದಾರೆ. ಕಳಪೆ ಫಾರ್ಮ್‌ನಿಂದಾಗಿ ಆಸಿಸ್ ಸರಣಿಯ ಕೊನೇ ಪಂದ್ಯದಿಂದ ಹೊರಗುಳಿದಿದ್ದ ರೋಹಿತ್, ಸೆಪ್ಟೆಂಬರ್‌ನಿಂದ 15 ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದು 10.93 ಸರಾಸರಿಯಲ್ಲಿ 164 ರನ್ ಮಾತ್ರ ಗಳಿಸಿದ್ದಾರೆ. ಬಿಜಿಟಿ ಸರಣಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 6.20 ಮಾತ್ರ. ಗಳಿಸಿದ ರನ್ 31 ಮಾತ್ರ. ಇನ್ನು ಕೊಹ್ಲಿ 19 ಇನ್ನಿಂಗ್ಸ್‌ಗಳಲ್ಲಿ 22.47 ಸರಾಸರಿಯಲ್ಲಿ 382 ರನ್ ಗಳಿಸಿದ್ದಾರೆ.
ಇದನ್ನೂ ಓದಿ : ಬಾರ್ಡರ್ ಗೆ ಆಹ್ವಾನ ಗವಾಸ್ಕರ್ ಗೆ ಅವಮಾನ – ಟ್ರೋಫಿ ಹೆಸರಿಗೂ ಮರ್ಯಾದೆ ಕೊಟ್ಟಿಲ್ವಾ ಆಸ್ಟ್ರೇಲಿಯಾ?
ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕಂಡ ಯಶಸ್ವೀ ಆಟಗಾರ, ನಾಯಕ ಹಾಗೇ ಕೋಚ್. ನೋಡೋಕೆ ಸಿಂಪಲ್ಲಾಗಿ ಕಂಡ್ರೂ ಆಟದಲ್ಲಿ ಅವ್ರಿಗಿದ್ಧ ಬಧ್ಧತೆಯನ್ನ ಯಾರೂ ಮರೆಯೋಕೆ ಸಾಧ್ಯನೇ ಇಲ್ಲ. ಟೀಂ ಇಂಡಿಯಾ ಪರ ಆಡುವಾಗಲೂ ಕೂಡ ರಣಜಿಯಲ್ಲಿ ಆಡ್ತಿದ್ರು. ಹಿಂದೊಮ್ಮೆ ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ತ್ರಿಸ್ಟಾರ್ ಹೋಟೆಲ್ ಕೂಡ ಇಲ್ಲದ ಮೀರತ್ಗೆ ತೆರಳಿ ಆಡಿದ್ದರು. ಹಾಗೇ ಬ್ಯಾಟಿಂಗ್ಗೆ ಅವಕಾಶ ಸಿಗದೇ ಇದ್ರೂ ಕೂಡ ಫೀಲ್ಡಿಂಗ್ ಮಾಡ್ತಿದ್ರು. ಬೇರೆಯವ್ರ ಥರ ಬ್ಯಾಟಿಂಗ್ ಮಾತ್ರ ಮಾಡಿ ಫೀಲ್ಡಿಂಗ್ ವೇಳೆ ಕೂರುತ್ತಿರಲಿಲ್ಲ. ಯಾಕಂದ್ರೆ ಆಟದ ಮೇಲೆ ಅವ್ರಿಗಿದ್ಧ ಶಿಸ್ತು, ಬದ್ಧತೆಯೇ ಕಾರಣ. ಇದೇ ಕಾರಣಕ್ಕೆ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವ ಬ್ಯಾಟ್ಸ್‌ಮನ್ ಮಾಡದಂತಹ ಅಪರೂಪದ ಸಾಧನೆ ಮಾಡಿದ್ದಾರೆ. ಕ್ರೀಡಾಂಗಣದಲ್ಲಿ ನಿಂತು ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ಹೊಂದಿದ್ದಾರೆ. 31,258 ಎಸೆತಗಳನ್ನು ಎದುರಿಸಿರುವ ರಾಹುಲ್ ದ್ರಾವಿಡ್ 44,152 ನಿಮಿಷಗಳ ಕಾಲ ಕ್ರೀಡಾಂಗಣದಲ್ಲಿ ನಿಂತಿದ್ದಾರೆ. ರಾಹುಲ್ ದ್ರಾವಿಡ್ ಕ್ರಿಕೆಟ್‌ಗೆ ನೀಡಿದ ಸಾಧನೆಯನ್ನು ಗಮನಿಸಿ 2018ರಲ್ಲಿ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿ ಗೌರವಿಸಿದೆ.
ಸದ್ಯ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಮಿಂಚುತ್ತಿರೋ ಆಟಗಾರರೇ ದೇಶೀ ಟೂರ್ನಿಗಳು ಎಷ್ಟು ಇಂಪಾರ್ಟೆಂಟ್ ಅಂತಾ ಹೇಳೋದಕ್ಕೆ ಸಾಕ್ಷಿ. ಐಪಿಎಲ್ನಲ್ಲಿ ಅನ್ಸೋಲ್ಡ್ ಆಗಿರೋ ಮಯಾಂಕ್ ಅಗರ್ವಾಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನಿಡ್ತಿದ್ದಾರೆ. ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ 47, 18 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದ ಮಯಾಂಕ್ ನಂತರ, ಸತತ 5 ಪಂದ್ಯಗಳಲ್ಲಿ 50 + ಸ್ಕೋರ್ ಮಾಡಿದ್ದಾರೆ. ಇದರಲ್ಲಿ 4 ಶತಕಗಳಿವೆ. ಪಂಜಾಬ್ ವಿರುದ್ಧ ಅಜೇಯ 139, ಅರುಣಾಚಲ ಪ್ರದೇಶ ವಿರುದ್ಧ ಅಜೇಯ 100, ಹೈದರಾಬಾದ್ ವಿರುದ್ಧ 124, ಸೌರಾಷ್ಟ್ರ ವಿರುದ್ಧ 69 ಹಾಗೂ ನಾಗಲ್ಯಾಂಡ್ ವಿರುದ್ಧ ಅಜೇಯ 116 ರನ್ ರನ್ ಗಳಿಸಿದ್ದಾರೆ. ಈ ಮೂಲಕ 7 ಪಂದ್ಯಗಳಲ್ಲಿ 613 ರನ್ ಬಾರಿಸಿದ್ದಾರೆ. ಹಾಗೇ ವಿದರ್ಭ ತಂಡದ ಪರ ಆಡ್ತಿರುವ ಕನ್ನಡಿಗ ಕರಣ್ ನಾಯರ್ ಕೂಡ ಅದ್ಭುತ ಫಾರ್ಮ್ನಲ್ಲಿದ್ದಾರೆ. 6 ಪಂದ್ಯಗಳನ್ನ ಆಡಿದ್ದು 542 ರನ್ ಸ್ಕೋರ್ ಮಾಡಿದ್ದಾರೆ. ಅಲ್ದೇ ಕರಣ್ ನಾಯರ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 2015ರ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ತ್ರಿಶತಕ ಬಾರಿಸಿದ್ದನ್ನ ಯಾರೂ ಮರೆಯೋಕೆ ಸಾಧ್ಯನೇ ಇಲ್ಲ. ಇಂಥ ಪ್ರತಿಭೆಗಳಿದ್ರೂ ಟೀಂ ಇಂಡಿಯಾ ಕಡೆಗಣಿಸ್ತಿರೋದು ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.