ಹಣಕ್ಕಾಗಿ ಕಾರ್ಮಿಕರು ಸತ್ತಿದ್ದಾರೆಂದು ದಾಖಲೆ ಸೃಷ್ಟಿ – ಪರಿಹಾರ ರೂಪದಲ್ಲಿ ಸಿಕ್ಕ ಕೋಟಿ ರೂಪಾಯಿಯಲ್ಲಿ ಮೋಜು ಮಸ್ತಿ..!
ಹಣ ಅಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನೋ ಮಾತಿದೆ. ಆದರೆ ಇಲ್ಲಿ, ಅದೇ ಹಣಕ್ಕಾಗಿ ಮಾನಗೇಡಿ ಅಧಿಕಾರಿಗಳು ದಾಖಲೆಗಳಲ್ಲಿ ಕಾರ್ಮಿಕರನ್ನೇ ಸಾಯಿಸಿ ಬಂದ ದುಡ್ಡಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಅಷ್ಟಕ್ಕೂ ಅಲ್ಲಾಗಿದ್ದು ಏನೆಂದರೆ, ಮಧ್ಯಪ್ರದೇಶದ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರು ನಿಧನರಾದಾಗ ಅವರ ಅಂತ್ಯಕ್ರಿಯೆಯ ಉದ್ದೇಶಕ್ಕಾಗಿ ಹಣಕಾಸಿನ ನೆರವು ನೀಡುತ್ತದೆ. ಆದ್ರೆ ಶಿವಪುರಿಯ ಜನಪದ್ ಪಂಚಾಯತ್‌ನ ಅಧಿಕಾರಿಗಳು ಇದನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: 5 ಸ್ಟಾರ್ ಹೋಟೆಲ್‌ನಲ್ಲಿ 2 ವರ್ಷ ವಾಸ್ತವ್ಯ – ಹಣ ಕೊಡದೇ ಚೆಕ್ಔಟ್ ಮಾಡಿ ಪಂಗನಾಮ..!
ಶಿವಪುರಿಯ ಜನಪದ್ ಪಂಚಾಯತ್‌ನ ಅಧಿಕಾರಿಗಳು ಬರೋಬ್ಬರಿ 26 ಕಾರ್ಮಿಕರು ಸತ್ತಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅವರ ಅಂತ್ಯಕ್ರಿಯೆಯ ಖರ್ಚಿಗಾಗಿ ಅಂದಾಜು 1 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ಪಡೆದಿದ್ದಾರೆ. ಕೈಗೆ ದುಡ್ಡು ಸಿಕ್ಕಮೇಲೆ ಮೋಜುಮಸ್ತಿ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿವಪುರಿ ಜನಪದ್ ಪಂಚಾಯತ್‌ನ ಐವರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಮಧ್ಯಪ್ರದೇಶದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ನೀಡುವ ಅಂತ್ಯಕ್ರಿಯೆ ಹಣಕಾಸಿನ ನೆರವಿನಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಪ್ರಕರಣ ಸಂಬಂಧ ಕಂಪ್ಯೂಟರ್ ಆಪರೇಟರ್, ಇಬ್ಬರು ಜಿಲ್ಲಾ ಸಿಇಒಗಳು ಮತ್ತು ಇಬ್ಬರು ಮಹಿಳಾ ಗುಮಾಸ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿಯ ತನಿಖಾ ವರದಿಯಲ್ಲಿ ಅಧಿಕಾರಿಗಳು 26 ಫಲಾನುಭವಿಗಳ ಹೆಸರುಗಳ ಪಟ್ಟಿಯನ್ನು ಇದರಲ್ಲಿ ಬಳಸಿಕೊಂಡಿರುವುದು ಬಯಲಾಗಿದೆ. ಜಿಲ್ಲೆಯ ಇಬ್ಬರು ಸಿಇಒಗಳ ಡಿಜಿಟಲ್ ಸಹಿ ಬಳಸಿ ಮೊತ್ತವನ್ನು ಸರ್ಕಾರದಿಂದ ಪಡೆಯಲಾಗಿದೆ. ಸಂಬಂಧಪಟ್ಟ ಶಾಖೆಯ ಇಬ್ಬರು ಮಹಿಳಾ ಗುಮಾಸ್ತರು ಸಹ ಈ ವಿಷಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.