ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು -ಬೌಲಿಂಗ್ ಸಮಸ್ಯೆಯಿಂದ ಟೀಮ್ ಕ್ಯಾಪ್ಟನ್ ಕಂಗಾಲು

ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್‌ಸಿಬಿಗೆ ಇದೀಗ ಟೂರ್ನಿಯಿಂದಲೇ ಹೊರಬೀಳುವ ಆತಂಕದಲ್ಲಿದೆ. ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್‌ಸಿಬಿ ತಂಡ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದೆ. ಅಭಿಮಾನಿಗಳ ನಿರೀಕ್ಷೆಗಳು ಕೂಡಾ ಹುಸಿಯಾಗಿದೆ. ಆರ್‌ಸಿಬಿ ಮಹಿಳಾ ತಂಡ ಬೌಲಿಂಗ್ ಸಮಸ್ಯೆಯಿಂದಾಗಿ ಸೋಲುತ್ತಿದೆ ಅನ್ನೋದನ್ನು ಟೀಮ್ ಕ್ಯಾಪ್ಟನ್ ಸ್ಮೃತಿ ಮಂಧಾನ (Smriti Mandhana) ಹೇಳುತ್ತಿದ್ದಾರೆ.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾಗೆ ಯಶಸ್ವಿ ಶಸ್ತ್ರಚಿಕಿತ್ಸೆ- ಈ ಬಾರಿ ಐಪಿಎಲ್‌ಗೆ ಇರಲ್ಲ ಟೀಮ್ ಇಂಡಿಯಾ ವೇಗಿ
ಹ್ಯಾಟ್ರಿಕ್ ಸೋಲಿನ ಬಳಿಕ ಮಾತನಾಡಿದ ಸ್ಮೃತಿ ಮಂಧಾನ (Smriti Mandhana) ತಮ್ಮ ಬೌಲಿಂಗ್ ವಿಭಾಗದ ವೈಫಲ್ಯದ ಬಗ್ಗೆ ಹತಾಶರಾಗಿ ಮಾತನಾಡಿದ್ದಾರೆ. ‘ಬೌಲಿಂಗ್ ವಿಭಾಗದಲ್ಲಿ ಸ್ವಲ್ಪ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯದಲ್ಲಿ ನಾವು ನಿರೀಕ್ಷೆಗಿಂತ ಕನಿಷ್ಠ 10-15 ರನ್ ಹೆಚ್ಚು ನೀಡಿದ್ದೇವೆ. 2-3 ಓವರ್‌ಗಳಲ್ಲಿ ನಾವು ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟೇವು. ಒಂದು ವೇಳೆ ಈ ಎರಡು ಮೂರು ಓವರ್‌ಗಳಲ್ಲಿ ರನ್ ಕಡಿಮೆ ನೀಡಿದ್ದರೆ ಬಹುಶಃ ಫಲಿತಾಂಶವು ವಿಭಿನ್ನವಾಗಿರಬಹುದಾಗಿತ್ತು’ ಎಂದಿದ್ದಾರೆ. ನಿನ್ನೆ ನಡೆದ ಮ್ಯಾಚ್ನಲ್ಲಿ ಪಿಚ್ ಬ್ಯಾಟಿಂಗ್ ಸಹಕಾರಿಯಾಗಿದ್ದರೂ 200+ ರನ್ ಚೇಸ್ ಮಾಡಿ ಗೆಲ್ಲುವುದು ಸುಲಭವಾಗಿರಲಿಲ್ಲ. ಆದರೂ ಕೊನೆಯವರೆಗೂ ಹೋರಾಟ ನಡೆಸಿದ ಆರ್‌ಸಿಬಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ ಬ್ಯಾಟಿಂಗ್ ವಿಭಾಗದಲ್ಲಿ ಜೊತೆಯಾಟ ಬರಲಿಲ್ಲ. ವಿಶೇಷವಾಗಿ ಸೋಫಿ ಡಿವೈನ್ ಹಾಗೂ ಆಲಿಸ್ ಪೆರ್ರಿ ಅವರಿಗೆ ಯಾರು ಸಾಥ್ ನೀಡಲಿಲ್ಲ. ಕೊನೆಯಲ್ಲಿ ಹೀದರ್ ನೈಟ್ ಅಬ್ಬರಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲಾಗಲಿಲ್ಲ. ಇನ್ನ ಸಿಕ್ಕ ಅವಕಾಶವನ್ನು ಬಳಸಿಕೊಂಡ ಶ್ರೇಯಾಂಕಾ ಪಾಟೀಲ್ ಕೆಳಕ್ರಮಾಂಕದಲ್ಲಿ ಕೊಂಚ ಹೋರಾಟ ನೀಡಿದರಾದರೂ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಲಾಗಲಿಲ್ಲ. ಅಂತಿಮವಾಗಿ 190 ರನ್ಗಳಿಗೆ ಸುಸ್ತಾದ ಆರ್‌ಸಿಬಿ 11 ರನ್ಗಳಿಂದ ಸೋಲೊಪ್ಪಿಕೊಂಡಿತು.
ಆಟಗಾರ್ತಿಯರ ಮನೋಬಲ ಹೆಚ್ಚಿಸುವ ಸಲುವಾಗಿ ಟೆನಿಸ್ ಸ್ಟಾರ್ ಸಾನಿಯಾ ಮಿರ್ಜಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಆಗಿ ನೇಮಿಸಿಕೊಳ್ಳಲಾಗಿದೆ. ಆದರೆ ಹ್ಯಾಟ್ರಿಕ್ ಸೋಲಿನ ನಂತರ ಮೆಂಟರ್ ಸಾನಿಯಾ ಮುಖದಲ್ಲಿಯೂ ನಿರಾಸೆ ಎದ್ದು ಕಾಣುತ್ತಿತ್ತು.