ಪ್ರಚೋದನಕಾರಿ ಭಾಷಣ: ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಎಫ್‌ಐಆರ್

ಪ್ರಚೋದನಕಾರಿ ಭಾಷಣ: ಸಾಧ್ವಿ ಪ್ರಗ್ಯಾ ಸಿಂಗ್ ವಿರುದ್ಧ ಎಫ್‌ಐಆರ್

ಶಿವಮೊಗ್ಗ: ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಮ್ಮ ಮನೆಗಳಲ್ಲಿ ಆಯುಧಗಳನ್ನು ಹರಿತ ಮಾಡಿಟ್ಟುಕೊಳ್ಳಬೇಕು ಎಂದು ಭೋಪಾಲದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಕಾಂಗ್ರೆಸ್ ಮುಖಂಡರ ದೂರಿನ ಮೇರೆಗೆ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಕಳೆದ ಭಾನುವಾರ ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯದ ತ್ರೈವಾರ್ಷಿಕ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿರುವ ವೇಳೆ ಪ್ರಗ್ಯಾ, ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ: ‘ಹಿಂದೂಗಳ ರಕ್ಷಣೆಗೆ ಚೂರಿಗಳನ್ನು ಹರಿತ ಮಾಡಿಕೊಳ್ಳಿ’ – ಪ್ರಗ್ಯಾ ಸಿಂಗ್ ಠಾಕೂರ್

ಮಾಧ್ಯಮಗಳ ವರದಿ ಆಧರಿಸಿ ಎಐಸಿಸಿ ಮುಖಂಡ ತೆಹಸೀನ್ ಪೂನಾವಾಲಾ ಅವರು ಶಿವಮೊಗ್ಗ ಎಸ್ ಪಿ, ಜಿ.ಕೆ ಮಿಥುನ್ ಕುಮಾರ್ ಅವರಿಗೆ ಟ್ವಿಟರ್ ಮೂಲಕ ದೂರು ನೀಡಿದ್ದರು. ಟ್ವಿಟರ್ ಮೂಲಕ ದೂರು ನೀಡಿದರೆ ಅದನ್ನು, ನಿಯಮಾವಳಿ ಅನ್ವಯ ಪರಿಗಣಿಸಲಾಗುವುದಿಲ್ಲ. ಖುದ್ದಾಗಿ ಬಂದು ದಾಖಲಿಸಬೇಕು ಎಂದು ಜಿ.ಕೆ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದರು.

ಇದೀಗ ಪೂನಾವಾಲಾ ಅವರು ಶಿವಮೊಗ್ಗಕ್ಕೆ ಬರಲು ಸಾಧ್ಯವಿಲ್ಲ. ಅವರ ಪರವಾಗಿ ನಾವೇ ದೂರು ದಾಖಲಿಸಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಎಸ್ ಸುಂದರೇಶ್ ತಿಳಿಸಿದ್ದಾರೆ.

ಮುಂದೆ ಎಂತಹ ಸಂದರ್ಭ ಬರುತ್ತದೋ ಗೊತ್ತಿಲ್ಲ. ಆತ್ಮ ರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ. ನಮ್ಮ ಹೆಣ್ಣು ಮಕ್ಕಳ ರಕ್ಷಣೆಗಾಗಿ ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿ ಇಟ್ಟುಕೊಳ್ಳಬೇಕು. ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬ್ ಗಳಂತೆ ಸಿದ್ಧಪಡಿಸಬೇಕು. ನಮ್ಮ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಗೀತೋಪದೇಶ, ರಾಮಾಯಣ, ಹನುಮಾನ್ ಚಾಲಿಸಾ ಕಲಿಸಬೇಕು. ದೇಶದ, ಸಮಾಜದ ರಕ್ಷಣೆಗೆ ನಾವೆಲ್ಲಾ ಸದಾ ಬದ್ಧರಾಗಬೇಕು. ನಾನು ಇಂದು ನಾರಿಶಕ್ತಿಯಾಗಿ ಮಾತನಾಡುತ್ತಿದ್ದೇನೆ. ಸರ್ಕಾರಗಳ ಮೇಲೆ ನಂಬಿಕೆ ಇಡಬೇಡಿ. ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರ ಬರುತ್ತದೆ ಹೋಗುತ್ತದೆ. ಆದರೆ ಸಾಧು-ಸಂತರು ಬದಲಾಗುವುದಿಲ್ಲ. ಅವರನ್ನು ಕೊಲೆ ಮಾಡಲಾಗುವುದಿಲ್ಲ. ಏಕೆಂದರೆ ಅವರು ಸತ್ತ ಮೇಲೆ ಸಾಧುಗಳಾಗುತ್ತಾರೆ ಎಂದು ಪ್ರಚೋದಾತ್ಮಕ ಹೇಳಿಕೆ ನೀಡಿದ್ದರು.

suddiyaana