ಮಾವನ ಮಗನೇ ಶಿಕ್ಷಕಿ ಅಪಹರಣದ ಮಾಸ್ಟರ್ ಮೈಂಡ್! – ಘಟನೆ ನಡೆದ ಏಳು ಗಂಟೆಯಲ್ಲೇ ಆರೋಪಿ ಬಂಧನ
ಖಾಸಗಿ ಶಾಲಾ ಶಿಕ್ಷಕಿಯ ಕಿಡ್ನ್ಯಾಪ್ ಕೇಸ್ ಕೊನೆಗೂ ಸುಖಾಂತ್ಯ ಕಂಡಿದೆ. ಪ್ರಕರಣದ ನಡೆದ ಏಳು ಗಂಟೆಯಲ್ಲಿ ಪೊಲೀಸರು ಅಪಹರಣಕಾರರನ್ನು ಬಂಧಿಸಿ ಪೊಲೀಸರು ಶಿಕ್ಷಕಿ ಅರ್ಪಿತಳನ್ನು ರಕ್ಷಿಸಿದ್ದಾರೆ.
ಗುರುವಾರ ಹಾಸನದ ಈ ಘಟನೆ ನಡೆದಿತ್ತು. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಶಿಕ್ಷಕಿ ಅರ್ಪಿತಾ ಮದುವೆಗೆ ಒಪ್ಪದ್ದಕ್ಕೆ ಆಕೆಯನ್ನು ಆಕೆಯ ಮಾವನ ಮಗ ಅಪಹರಿಸಿದ್ದರು. ಅಪಹರಣದ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಗುರುವಾರ ಬೆಳಗ್ಗೆ ಸುಮಾರು 8 ಗಂಟೆ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾರ್ನಲ್ಲಿ ಬಂದು ಬಲವಂತವಾಗಿ ಎಳೆದೊಯ್ದಿದ್ದರು. ಘಟನೆ ನಡೆದ ಏಳು ಗಂಟೆಯಲ್ಲಿ ಶಿಕ್ಷಕಿಯನ್ನ ರಕ್ಷಣೆ ಮಾಡಿ, ಅಪಹರಣ ಮಾಡಿದ್ದ ಅರೋಪಿ ರಾಮು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕಿ ಅರ್ಪಿತಾಳನ್ನು ರಕ್ಷಣೆ ಮಾಡಿದ ಬಳಿಕ ಪೊಲೀಸರು ಆಕೆಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಮದುವೆ ಒಪ್ಪಂದಕ್ಕೆ ಒಪ್ಪದ ಶಿಕ್ಷಕಿ – ಕಿಡ್ನ್ಯಾಪ್ ಮಾಡಿದ ಕಿಡಿಗೇಡಿಗಳು!
ಶಿಕ್ಷಕಿ ಅರ್ಪಿತಾ ಶಾಲೆಗೆ ಹೋಗುವ ಸಮಯ ಹೊಂಚು ಹಾಕಿ ಆಕೆಯನ್ನು ಅಪಹರಿಸಲಾಗಿತ್ತು. ಆಕೆಯ ಅತ್ತೆ ಮಗ ರಾಮು ತನ್ನ ಸಹಚರರೊಂದಿಗೆ ಇನ್ನೋವಾ ಕಾರಿನಲ್ಲಿ ಬಂದು ಕಿಡ್ನ್ಯಾಪ್ ಮಾಡಿದ್ದರು. ಘಟನೆ ಬಳಿಕ ಮಿಂಚಿನ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮದುವೆಯಾಗಲು ಕರೆದೊಯ್ಯುವ ವೇಳೆಯೇ ಮಾರ್ಗಮಧ್ಯೆ ಆರೋಪಿಯನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡದ ನೆಲ್ಯಾಡಿ ಬಳಿ ರಾಮು ಹಾಗೂ ಆತನ ಸಹಚರರು ಸಿಕ್ಕಿಬಿದ್ದಿದ್ದರು. ಪೊಲೀಸರು ಕಾರಿನ ಬಳಿ ಆಗಮಿಸುತ್ತಿದ್ದಂತೆ ರಾಮು ಮಾತ್ರ ಬಿಟ್ಟು ಉಳಿದವರು ಎಸ್ಕೇಪ್ ಆಗಿದ್ದಾರೆ. ಕಾರಿನೊಳಗೆ ಇದ್ದ ಶಿಕ್ಷಕಿ ಅರ್ಪಿತಾರನ್ನು ರಕ್ಷಣೆ ಮಾಡಿ ಪೊಲೀಸರು ಕರೆತಂದಿದ್ದಾರೆ. ಗುರುವಾರ ತಡರಾತ್ರಿ ಶಿಕ್ಷಕಿಯನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.