ಹಾಸನ ಪೆನ್‌ಡ್ರೈವ್ ಪ್ರಕರಣ – ಪ್ರಜ್ವಲ್ ರೇವಣ್ಣ ಮೇ 15 ಕ್ಕೆ ಭಾರತಕ್ಕೆ?
ಪ್ರಜ್ವಲ್ ರೇವಣ್ಣ ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಡಿ ರೇವಣ್ಣ ಈಗಾಗಲೇ ಎಸ್‌ಐಟಿ ವಶದಲ್ಲಿದ್ದಾರೆ. ಆದ್ರೆ ಪ್ರಜ್ವಲ್ ರೇವಣ್ಣ ಮಾತ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಇವತ್ತು ಬರುತ್ತಾರೆ.. ನಾಳೆ ಬರುತ್ತಾರೆ ಅಂತಾ ಎಸ್‌ಐಟಿ ಅಧಿಕಾರಿಗಳು ಕಾದಿದ್ದೇ ಬಂತು. ಆದ್ರೆ ಪ್ರಜ್ವಲ್ ರೇವಣ್ಣ ಮಾತ್ರ ಇನ್ನೂ ಭಾರತಕ್ಕೆ ಬಂದಿಲ್ಲ. ಇದೀಗ ಪ್ರಜ್ವಲ್ ರೇವಣ್ಣ ಮೇ 15 ರಂದು ಭಾರತಕ್ಕೆ ಬರಲಿದ್ದಾರೆ ಅಂತಾ ಮೂಲಗಳು ಹೇಳುತ್ತಿವೆ.
ಲೋಕಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ಸಂದರ್ಭ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಮತದಾನ ಮುಗಿಯುತ್ತಿದ್ದಂತೆ ಪ್ರಜ್ವಲ್ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಬೆಂಗಳೂರು ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಪ್ರಜ್ವಲ್ ಹಾರಿದ್ದರು. ಇತ್ತ ಅತ್ಯಾಚಾರ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಎಸ್‌ಐಟಿ ಅಧಿಕಾರಿಗಳು ಅವರ ಚಲನವಲನದ ಬಗ್ಗೆ ನಿರಂತರವಾಗಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಬಿಐ ಮನವಿ ಮೇರೆಗೆ ಈಗಾಗಲೇ ಇಂಟರ್‌ಪೋಲ್ ‘ಬ್ಲೂ ಕಾರ್ನರ್’ ನೋಟಿಸ್ ಹೊರಡಿಸಿದೆ. ಆರೋಪಿಯ ಇರುವಿಕೆ, ಚಲನವಲನ, ಪ್ರಯಾಣದ ಬಗ್ಗೆ ಇಂಟರ್‌ಪೋಲ್‌ನಿಂದ ಸಿಬಿಐ ಮಾಹಿತಿ ಸಂಗ್ರಹಿಸುತ್ತಿದೆ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ಯುರೋಪಿನ ಬೇರೆ ಬೇರೆ ನಗರಗಳ ನಡುವೆ ಪ್ರಯಾಣಿಸುತ್ತಿರುವ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ನಡುವೆ ಪ್ರಜ್ವಲ್ ಮೇ 15ಕ್ಕೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಸಜ್ಜಾಗಿರುವ ಎಸ್‌ಐಟಿಯ ತಂಡಗಳು, ಬೆಂಗಳೂರು ಸೇರಿದಂತೆ ದೇಶದ ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆಗಮನಕ್ಕಾಗಿ ಕಾಯುತ್ತಿವೆ.