ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ಎಸ್‌ಐಟಿ ತನಿಖೆಗೆ ಸಂತ್ರಸ್ತೆಯರು ಹಿಂದೇಟು!

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ – ಎಸ್‌ಐಟಿ ತನಿಖೆಗೆ ಸಂತ್ರಸ್ತೆಯರು ಹಿಂದೇಟು!

ಹಾಸನ ಪೆನ್‌ಡ್ರೈವ್‌ ಕೇಸ್‌ ಪ್ರಕರಣ ಈಗ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಎಸ್‌ಐಟಿಗೆ ಒಪ್ಪಿಸಿದ್ದು, ತನಿಖೆ ಚುರುಕುಗೊಂಡಿದೆ. ಈ ಪ್ರಕರಣದಲ್ಲಿ ಭಾಗಿಯಾದವರು, ಸಂತ್ರಸ್ತರ ಮಾಹಿತಿ ಕಲೆಹಾಕುತ್ತಿದೆ. ಇದೀಗ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾಗಿದೆ. ದೂರುದಾರರು ಹೊರತುಪಡಿಸಿ, ಉಳಿದ ಸಂತ್ರಸ್ತೆಯರು ಈ ವಿಡಿಯೋ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೆ.ಎಲ್ ರಾಹುಲ್‌ಗೆ ಚಾನ್ಸ್ ಮಿಸ್ಸಾಗಿದ್ದೇಕೆ? – ಟಿ20 ಬೌಲಿಂಗ್ ಯುನಿಟ್ ವೀಕಾಯ್ತಾ?

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧ ತನಿಖೆ ಮುಂದುವರಿದಿದೆ. ಈಗಾಗಲೇ ಪ್ರಕರಣದ ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ಎಚ್​ಡಿ ರೇವಣ್ಣ ಅವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಬರುವಂತೆ ಸೂಚಿಸಿದೆ. ಆದ್ರೆ, ಇತ್ತ ವಿಡಿಯೋಗಳ ಬಗ್ಗೆ ಮಾಹಿತಿ ನೀಡಲು ಸಂತ್ರಸ್ತೆಯರು ಹಿಂದೇಟು ಹಾಕುತ್ತಿದ್ದಾರೆ. ನನಗೆ ತೊಂದರೆ ಕೊಟ್ಟರೆ ಸೂಸೈಡ್ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ವಿಚಾರ ಬಯಲಾಗಿದೆ.

ಈ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಸಂತ್ರಸ್ತೆಯರನ್ನು ಪತ್ತೆ ಹಚ್ಚಿ, ಅವರನ್ನು ಭೇಟಿ ಮಾಡಿ ಹೇಳಿಕೆ ಪಡೆಯಲು ಹೋದರೆ ಮೊದಲೇ ನೊಂದಿರುವ ನಮ್ಮನ್ನು ಮತ್ತಷ್ಟು ನೋಯಿಸಬೇಡಿ. ಈ ಬಗ್ಗೆ ನಮ್ಮ ಬಳಿ ಏನನ್ನೂ ಕೇಳಬೇಡಿ. ಇದು ನಮ್ಮ ಜೀವನದ ಪ್ರಶ್ನೆಯಾಗಿದೆ. ಅಷ್ಟಕ್ಕೂ ನೀವು ಒತ್ತಾಯ ಮಾಡಿದ್ದೇ ಆದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೋದಲ್ಲಿರುವ ಸಂತ್ರಸ್ತ ಮಹಿಳೆಯರನ್ನು ಸಂಪರ್ಕಿಸಲು ಎಸ್‌ಐಟಿ ತಂಡವು ಸಾಕಷ್ಟು ಪ್ರಯತ್ನಪಟ್ಟಿದೆ. ಎಷ್ಟೇ ಪ್ರಯತ್ನ ಪಟ್ಟರೂ ಸಂತ್ರಸ್ತೆಯರು ಮಾತ್ರ ಇವರಿಗೆ ಸ್ಪಂದಿಸುತ್ತಿಲ್ಲ. ನಾವು ಏನೂ ಹೇಳಲ್ಲ, ಏನನ್ನೂ ಕೇಳಬೇಡಿ ಎಂದು ಸಂತ್ರಸ್ತೆಯರು ಹೇಳುತ್ತಿದ್ದಾರೆ. ನಾವೇನು ದೂರು ಕೊಟ್ಟಿಲ್ಲ, ನಮ್ಮನ್ನು ಯಾಕೆ ಎಳೆದು ತರುತ್ತೀರಿ? ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ ಎಂದು ಹೇಳುತ್ತಿದ್ದಾರಂತೆ. ಇದರಿಂದ ಎಸ್‌ಐಟಿ ತನಿಖೆಗೆ ಸ್ವಲ್ಪ ಹಿನ್ನಡೆಯಾಗಿದೆ. ಹೀಗಾಗಿ ಎಸ್​ಐಟಿ ಅಧಿಕಾರಿಗಳು ಸದ್ಯಕ್ಕೆ ದೂರು ಕೊಟ್ಟಿರುವ ಓರ್ವ ಸಂತ್ರಸ್ತೆಯ ಮಾಹಿತಿ ಆಧರಿಸಿ ತನಿಖೆ ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.

Shwetha M

Leave a Reply

Your email address will not be published. Required fields are marked *