ಹಾಸನದ ‘ದಳ’ಪತಿಗಳಿಗೆ ಬುಲಾವ್ ಕೊಟ್ಟ ಹೆಚ್ಡಿಕೆ – ಭಾನುವಾರ ಟಿಕೆಟ್ ಫೈಟ್ಗೆ ಬೀಳುತ್ತಾ ಬ್ರೇಕ್..?
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯ್ಕೆ ವಿಚಾರ ದಿನದಿನಕ್ಕೂ ಕಗ್ಗಂಟಾಗ್ತಿದೆ. ಒಂದ್ಕಡೆ ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಅತೀ ಉತ್ಸಾಹದಲ್ಲಿ ಭವಾನಿ ರೇವಣ್ಣ ಓಡಾಡುತ್ತಿದ್ದಾರೆ. ಆದ್ರೆ ಹೆಚ್ಡಿ ಕುಮಾರಸ್ವಾಮಿ ಮಾತ್ರ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ನಿರ್ಧಾರವೇ ಫೈನಲ್ ಅಂತಿದ್ದಾರೆ. ಈ ಟಿಕೆಟ್ ಹಗ್ಗಾಜಗ್ಗಾಟಕ್ಕೆ ಫುಲ್ಸ್ಟಾಪ್ ಇಡಲು ಹೆಚ್ಡಿಕೆ ಈಗ ಹೊಸ ಅಸ್ತ್ರ ರೆಡಿ ಮಾಡ್ತಿದ್ದಾರೆ.
ಟಿಕೆಟ್ ಗುದ್ದಾಟಕ್ಕೆ ತೆರೆ ಎಳೆಯಲು ಇದೇ ಭಾನುವಾರ ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಹಾಸನ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆ ಕರೆದಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಮುಖಂಡರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಹೆಚ್ಡಿಕೆ ಕಚೇರಿಯಿಂದಲೇ ಮುಖಂಡರು ಹಾಗೂ ಪ್ರಮುಖ ಕಾರ್ಯಕರ್ತರಿಗೆ ಫೋನ್ ಮಾಡಿ ಬುಲಾವ್ ನೀಡಲಾಗಿದೆ. ಭಾನುವಾರ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ನಾಯಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ : ರಿಯಲ್ ಸ್ಟಾರ್ ಉಪೇಂದ್ರಗೆ ಸಿಕ್ತು ಅಧಿಕೃತ ಚಿಹ್ನೆ – ‘ಆಟೋ’ ಮೂಲಕ ಚುನಾವಣಾ ಕಹಳೆ
ಹಾಸನ ಅಭ್ಯರ್ಥಿಯಾಗಿ ಯಾರನ್ನ ಆಯ್ಕೆ ಮಾಡಿದ್ರೆ ಜೆಡಿಎಸ್ ಗೆಲುವು ಪಡೆಯಬಹುದು. ಯಾರ ಕಡೆ ಕ್ಷೇತ್ರದ ಜನರ ಹೆಚ್ಚಿನ ಒಲವು ಇದೆ ಎಂದು ಎಲ್ಲರ ಜೊತೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಮಾತ್ರವಲ್ಲದೆ ಹಾಸನ ಕ್ಷೇತ್ರದ ಬಗ್ಗೆ ಗೌಪ್ಯ ಸರ್ವೇ ಮಾಡಿಸಿ ಈಗಾಗ್ಲೇ ಅದರ ವರದಿಯನ್ನೂ ತರಿಸಿಕೊಂಡಿದ್ದಾರೆ. ಗೌಪ್ಯ ವರದಿ, ಪ್ರಮುಖರ ಅಭಿಪ್ರಾಯ ಆಧರಿಸಿ ಟಿಕೆಟ್ ಘೋಷಣೆ ಮಾಡಲಿದ್ದಾರೆ. ಈವರೆಗೂ ಕೂಡ ಭವಾನಿಗೆ ಟಿಕೆಟ್ ಕೊಡಲ್ಲ ಎಂದೇ ಹೆಚ್ಡಿಕೆ ಹೇಳ್ತಿದ್ದಾರೆ. ಆದ್ರೂ ಭವಾನಿ ಯಾರ ಮಾತಿಗೂ ಕ್ಯಾರೇ ಎನ್ನದೆ ಹಾಸನ ಕ್ಷೇತ್ರದಲ್ಲಿ ಟೆಂಪಲ್ ರನ್ ನಡೆಸ್ತಿದ್ದಾರೆ. ಹಾಗೇ ಪ್ರಚಾರವನ್ನೂ ಕೂಡ ಶುರು ಮಾಡಿದ್ದಾರೆ. ಹೀಗಾಗಿ ಈ ಟಿಕೆಟ್ ಗೊಂದಲಕ್ಕೆ ಫುಲ್ ಸ್ಟಾಪ್ ಇಡಲು ಹಾಸನ ಕ್ಷೇತ್ರದ ಜೆಡಿಎಸ್ ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಮುದ್ದಾಗಿದ್ದಾರೆ.
ಮತ್ತೊಂದೆಡೆ ಹಾಸನದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಪಿ ಸ್ವರೂಪ್ ಕೂಡ ಕ್ಷೇತ್ರದಲ್ಲಿ ರೌಂಡ್ಸ್ ಹಾಕ್ತಿದ್ದಾರೆ. ಈಗಾಗ್ಲೇ ಒಂದು ಸುತ್ತಿನ ಪ್ರಚಾರ ಕೂಡ ಮುಗಿಸಿದ್ದಾರೆ. ಹೆಚ್ಡಿ ರೇವಣ್ಣ ಮತ್ತು ಅವ್ರ ಕುಟುಂಬದವರ ಜೊತೆ ಸೇರದೆ ಪ್ರತ್ಯೇಕವಾಗಿ ಪ್ರಚಾರ ನಡೆಸ್ತಿದ್ದು ಟಿಕೆಟ್ ಪೈಪೋಟಿ ತೀವ್ರಗೊಂಡಿದೆ.