‘ಭವಾನಿ’ ಬಿಟ್ಟು ಕುಟುಂಬ ರಾಜಕಾರಣದ ‘ಸ್ವರೂಪ’ ಬದಲಿಸ್ತಾರಾ?- ಇವತ್ತು ಹಾಸನ ಟಿಕೆಟ್ ಫೈಟ್ ಕ್ಲೈಮ್ಯಾಕ್ಸ್..!

‘ಭವಾನಿ’ ಬಿಟ್ಟು ಕುಟುಂಬ ರಾಜಕಾರಣದ ‘ಸ್ವರೂಪ’ ಬದಲಿಸ್ತಾರಾ?- ಇವತ್ತು ಹಾಸನ ಟಿಕೆಟ್ ಫೈಟ್ ಕ್ಲೈಮ್ಯಾಕ್ಸ್..!

ಜೆಡಿಎಸ್ ಕರ್ನಾಟಕದ ಪ್ರಾದೇಶಿಕ ಪಕ್ಷ. ಆದ್ರೆ ರಾಜಕೀಯ ರಂಗದಲ್ಲಿ ಕುಟುಂಬ ರಾಜಕಾರಣ ಅನ್ನೋ ಕುಖ್ಯಾತಿ ಇದೆ. ನಿಷ್ಠಾವಂತ ಕಾರ್ಯಕರ್ತರಿಗಿಂತ ಕುಟುಂಬದವರಿಗೇ ಮಣೆ ಹಾಕಲಾಗುತ್ತದೆ ಅನ್ನೋ ಆರೋಪವಿದೆ. ಈ ಆರೋಪದ ನಡುವೆಯೇ ಹೆಚ್.ಡಿ ದೇವೇಗೌಡರ ಮನೆಯ ಮತ್ತೊಬ್ಬರು ವಿಧಾನಸಭಾ ಎಲೆಕ್ಷನ್​ಗೆ ಸ್ಪರ್ಧೆ ಮಾಡೋಕೆ ತುದಿಗಾಲಲ್ಲಿ ನಿಂತಿದ್ದು ಸಂಚಲನ ಮೂಡಿಸಿದೆ.

ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಫೈಟ್ ರಾಜ್ಯದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಅಭ್ಯರ್ಥಿ ಆಯ್ಕೆ ಗೊಂದಲವನ್ನ ಬಗೆಹರಿಸಲು ಇವತ್ತು ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಮುಹೂರ್ತ ಫಿಕ್ಸ್ ಮಾಡಿದ್ದಾರೆ.  ಹಾಸನ ವಿಧಾನಸಭಾ ಕ್ಷೇತ್ರದ ‘ದಳ’ಪತಿಗಳಿಗೆ ಬುಲಾವ್ ಕೊಟ್ಟಿದ್ದು, ಎಲ್ಲದಕ್ಕೂ ತೆರೆ ಬೀಳಲಿದೆ.

ಇದನ್ನೂ ಓದಿ : ‘ಸ್ವಿಮ್ಮಿಂಗ್ ಪೂಲ್’ ರಹಸ್ಯ.. ಸಾರಾ ಜೊತೆ ಸಂಧಾನ – ತನಿಖೆಯಲ್ಲಿ ಹೊರಬಿತ್ತು ಸಿಂಧೂರಿ ಸೀಕ್ರೆಟ್!

ಇವತ್ತು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಶಾಸಕರು, ಉಪಾಧ್ಯಕ್ಷರು, ಹಾಸನ ಜಿಲ್ಲಾಪಂಚಾಯ್ತಿ, ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸದಸ್ಯರು ಜೆಪಿ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್ ವಿಷಯವಾಗಿ ಹೆಚ್. ಡಿ ರೇವಣ್ಣ, ಭವಾನಿ ರೇವಣ್ಣ, ಹಾಗೂ ಅವರ ಪುತ್ರರು ಒತ್ತಡ ಹಾಕುತ್ತಿರುವ ಹಿನ್ನೆಲೆಯಲ್ಲಿ ಟಿಕೆಟ್ ಘೋಷಣೆಗೂ ಮುನ್ನ ಜಿಲ್ಲೆಯ ಸ್ಥಳೀಯ ನಾಯಕರೊಂದಿಗೆ ಸಭೆ ನಡೆಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಕುಮಾರಸ್ವಾಮಿ ಅವರು ತಮ್ಮದೇ ಆದ ಸಮೀಕ್ಷೆ ವರದಿಯನ್ನು ಹೊಂದಿದ್ದು, ಈ ವರದಿಯ ಪ್ರಕಾರ, ಒಕ್ಕಲಿಗ ಸಮುದಾಯದ ಉಪ ಪಂಗಡವಾಗಿರುವ ದಾಸ ಗೌಡರಲ್ಲಿರುವ ಯುವಕರು ದೇವೇಗೌಡರ ಕುಟುಂಬದವರೇ ಈ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ದಾಸಗೌಡ ಪಂಗಡದವರೇ ಆಗಿರುವ ಹೆಚ್.ಪಿ ಸ್ವರೂಪ್ ಅವರಿಗೆ ಯುವಕರ ಬೆಂಬಲ ಹೆಚ್ಚಿದ್ದು, ಜೆಡಿಎಸ್ ನಿಂದ ಸ್ವರೂಪ್ ಗೌಡ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಜೆಡಿಎಸ್ ಟಿಕೆಟ್ ಸಿಗದೇ ಇದ್ದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಸಹ ದಾಸಗೌಡ ಪಂಡಗಡದ ಯುವಕರು ಸ್ವರೂಪ್ ಅವರನ್ನೇ ಬೆಂಬಲಿಸಲು ಮುಂದಾಗಿದ್ದಾರೆ. ಆದರೆ ಕುಮಾರಸ್ವಾಮಿ ಡ್ಯಾಮೇಜ್ ಕಂಟ್ರೋಲ್ ಗೆ ತಂತ್ರ ರೂಪಿಸುತ್ತಿದ್ದಾರೆ.  ಈ ಪ್ರಕಾರ ದಾಸಗೌಡ ಪಂಗಡದ ಹಿರಿಯರನ್ನು ದೇವೇಗೌಡರ ನಿವಾಸಕ್ಕೆ ಕರೆಸಿ, ಅಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಹೆಚ್.ಡಿ ರೇವಣ್ಣ, ಭವಾನಿ ರೇವಣ್ಣ ಜಂಟಿಯಾಗಿ ಹಾಸನ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದು, ಇದೂ ಸಹ ಒತ್ತಡಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಸಭೆಯಲ್ಲಿ ಅಥವಾ ಹಾಸನದಲ್ಲೇ ನಡೆಯಲಿರುವ ಸಮಾವೇಶದಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ. ಮೂಲಗಳ ಪ್ರಕಾರ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಹಾಸನ ಕ್ಷೇತ್ರದಿಂದ ಗೆದ್ದರೆ ದಾಸಗೌಡ ಬಣವನ್ನು ಸಮಾಧಾನಪಡಿಸಲು ಸ್ವರೂಪ್ ಗೆ ಅಥವಾ ಅದೇ ಉಪ ಪಂಗಡದ ಮತ್ತೋರ್ವ ನಾಯಕನಿಗೆ ಎಂಎಲ್ ಸಿ ಟಿಕೆಟ್ ಭರವಸೆ ನೀಡುವ ಸಾಧ್ಯತೆ ಇದೆ. ಜೆಡಿಎಸ್ ನ ಹಿರಿಯ ನಾಯಕರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಹೆಚ್.ಡಿ ರೇವಣ್ಣ ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ಟಿಕೆಟ್ ಘೋಷಣೆ ಮಾಡಿದಲ್ಲಿ ಪ್ರಚಾರಕ್ಕೇ ಬರುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಇವತ್ತಿನ ಸಭೆ ಭಾರೀ ಕುತೂಹಲ ಮೂಡಿಸಿದೆ.

 

suddiyaana