ಕಷ್ಟಗಳ ಕಳೆಯುತ್ತಾನೆ ರಾಮನ ಭಂಟ ಹನುಮ – ಹಾಸನದಲ್ಲಿದೆ ಅತೀ ಎತ್ತರದ ಪಂಚಮುಖಿ ಆಂಜನೇಯ ದೇಗುಲ
ರಾಮನ ಭಕ್ತ ಹನುಮಂತ. ಆಂಜನೇಯ, ವಾಯುಪುತ್ರ, ರಾಮದಾಸ, ಕಪೀಶ್ವರಾಯ, ಮಹಾಕಾಯ, ವಜ್ರಕಾಯ, ಭಜರಂಗಿ, ಕಪಿಸೇನಾನಾಯಕ, ಕುಮಾರ ಬ್ರಹ್ಮಚಾರಿಣೆ, ಮಹಾಬಲಪರಾಕ್ರಮಿ, ರಾಮದೂತೈ ಹೀಗೆ ಒಂದಾ ಎರಡಾ. 108 ಹೆಸರುಗಳಿಂದ ಕರೆಸಿಕೊಳ್ಳುವ ಹನುಮಂತನ ಮಹಿಮೆಯೇ ಅಂಥಾದ್ದು. ರಾಮನ ಭಕ್ತನಾದ ಹನುಮಂತನನ್ನು ವಿಶೇಷವಾಗಿ ಶನಿವಾರಮತ್ತು ಮಂಗಳವಾರದಂದು ಪೂಜಿಸಲಾಗುತ್ತದೆ. ಹನುಮಂತನ ಹಲವು ರೂಪಗಳನ್ನು ಪೂಜಿಸಲಾಗುತ್ತದೆ. ಅವುಗಳಲ್ಲಿ ಪಂಚಮುಖಿ ಹನುಮಾನ್ ರೂಪವೂ ಒಂದು.
ಇದನ್ನೂ ಓದಿ : ರಾಜ್ಯದಲ್ಲಿ ಬರದ ಛಾಯೆ – ಸರಳ ಮತ್ತು ಅರ್ಥಪೂರ್ಣ ದಸರಾ ಆಚರಣೆಗೆ ಸರ್ಕಾರ ನಿರ್ಧಾರ
ಹನುಮಂತನನ್ನು ಸಂಕಟಮೋಚನ ಎಂದು ಕರೆಯಲಾಗುತ್ತದೆ. ಪ್ರತಿನಿತ್ಯ ಹನುಮಂತನ ಪೂಜೆ ಮಾಡುವುದರಿಂದ ಸಂತೋಷ, ಶಾಂತಿ, ಆರೋಗ್ಯ ಮತ್ತು ಸಂಪತ್ತು ದೊರೆಯುತ್ತದೆ. ಅದರಲ್ಲೂ ಪಂಚಮುಖಿ ಆಂಜನೇಯನನ್ನ ಪೂಜಿಸುವುದುರಿಂದ ಕಷ್ಟಗಳೆಲ್ಲಾ ಪರಿಹಾರವಾಗುತ್ತವೆ ಎಂದು ನಂಬಲಾಗದೆ. ಹಾಸನ ತಾಲೂಕಿನಲ್ಲಿ 54 ಅಡಿಯ ಅತಿ ಎತ್ತರದ ಪಂಚಮುಖಿ ಆಂಜನೇಯ ದೇವಸ್ಥಾನವಿದೆ. ಈ ದೇವಾಲಯ ಎಲ್ಲರನ್ನು ಆಕರ್ಷಿಸುತ್ತಿದ್ದು, ಶನಿವಾರ ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತೆ. ಹಾಸನದಿಂದ 6 ಕಿ.ಮೀ ದೂರದಲ್ಲಿರುವ ಹನುಮಂತಪುರದಲ್ಲಿ ಈ 54 ಅಡಿ ಎತ್ತರದ ಪಂಚಮುಖಿ ಆಂಜನೇಯ ದೇವಾಲಯವಿದೆ. ಇದು ಸುತ್ತಮುತ್ತಲ ಹಳ್ಳಿಗಳ ಜನತೆಗೆ ಹಾಗೂ ಹಾಸನದ ಜನತೆಯ ಬೇಡಿಕೆಯನ್ನು ಈಡೇರಿಸುತ್ತಾನಂತೆ.
ಸುಮಾರು 10 ವರ್ಷಗಳ ಹಿಂದೆ 54 ಅಡಿಯ ಪಂಚಮುಖಿ ಆಂಜನೇಯನನ್ನು ನಿರ್ಮಿಸಲಾಗಿದೆ. ಇದನ್ನು ನಿರ್ಮಿಸಿದ ನಂತರ 10 ವರ್ಷಗಳಿಂದ ಉತ್ತಮವಾದ ಮಳೆ, ಬೆಳೆ ಹಾಗೂ ಅಭಿವೃದ್ಧಿಯತ್ತ ಹಾಸನ ತಾಲೂಕು ಸಾಗುತ್ತಿದೆಯಂತೆ. ಪ್ರತಿ ಶನಿವಾರ ಆಂಜನೇಯನಿಗೆ ವಿಶೇಷ ಪೂಜೆ ಅಲಂಕಾರ, ಅಭಿಷೇಕ ನಡೆಯುತ್ತೆ. ಸುತ್ತಮುತ್ತಲಿನ ಊರಿನ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹಾಸನ ಮತ್ತು ಅರಕಲಗೂಡು ಮುಖ್ಯ ರಸ್ತೆಯ ಪಕ್ಕದಲ್ಲಿರುವ ಈ ಪಂಚಮುಖಿ ಆಂಜನೇಯ ನೋಡುಗರನ್ನು ಆಕರ್ಷಿಸುತ್ತಿದ್ದು, ಹೆಚ್ಚು ಜನ ಫೋಟೋ ಕ್ಲಿಕ್ಕಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಪಂಚಮುಖಿ ಆಂಜನೇಯ ದೇವಸ್ಥಾನಕ್ಕೆ ಹೇಗೆ ಹೋಗೋದು ಅಂದ್ರೆ ಹಾಸನದ ಬಸ್ ನಿಲ್ದಾಣದಿಂದ ಹನುಮಂತಪುರ ಬಸ್ಸಿನಲ್ಲಿ ಹೋಗಬಹುದು. ಅಥವಾ ತಮ್ಮ ಸ್ವಂತ ವಾಹನಗಳಲ್ಲಿ ಅರಕಲಗೂಡು ರಸ್ತೆಯಲ್ಲಿರುವ ಹನುಮಂತಪುರಕ್ಕೆ ಹೋಗಬಹುದು. ಈ ದೇವಸ್ಥಾನ ಮುಖ್ಯರಸ್ತೆಯ ಬದಿಯಲ್ಲಿ ಇರುವುದರಿಂದ ಜನರಿಗೆ ದೇವಾಲಯಕ್ಕೆ ಹೋಗಲು ಸುಲಭವಾಗುತ್ತದೆ.
ಇನ್ನು ಆಂಜನೇಯನ ಬಗ್ಗೆ ತಿಳಿಯೋದಾದ್ರೆ ರಾಮಾಯಣದ ಕಥೆಯ ಪ್ರಕಾರ, ಲಂಕಾ ಯುದ್ಧದ ಸಮಯದಲ್ಲಿ, ರಾವಣನ ಸಹೋದರ ಅಹಿರಾವಣನು ತನ್ನ ಮಾಂತ್ರಿಕ ಶಕ್ತಿಯನ್ನು ಬಳಸಿಕೊಂಡು ಭಗವಾನ್ ರಾಮ ಮತ್ತು ಲಕ್ಷ್ಮಣರನ್ನು ಪ್ರಜ್ಞಾಹೀನಗೊಳಿಸಿ ಪಾತಾಳಕ್ಕೆ ಕರೆದುಕೊಂಡು ಹೋಗುತ್ತಾನೆ. ಪಾತಾಳ ಲೋಕವನ್ನು ತಲುಪಿದ ನಂತರ, ಅಹಿರಾವಣನು ಭಗವಾನ್ ರಾಮ ಮತ್ತು ಲಕ್ಷ್ಮಣರನ್ನು ಒಂದು ಕೋಣೆಯಲ್ಲಿ ಇರಿಸಿದನು ಮತ್ತು ಅವರ ಐದು ದಿಕ್ಕುಗಳಲ್ಲಿ ಐದು ದೀಪಗಳನ್ನು ಬೆಳಗಿಸಿದನು. ಯಾಕೆಂದರೆ, ಯಾರು ಐದು ದಿಕ್ಕುಗಳಲ್ಲಿನ 5 ದೀಪಗಳನ್ನು ಒಂದೇ ಬಾರಿ ಆರಿಸುತ್ತಾರೋ ಆಗ ಮಾತ್ರ ಅಹಿರಾವಣನನ್ನು ಕೊಲ್ಲಬಹುದೆಂದು ಆತನು ದೇವರುಗಳಿಂದ ವರವನ್ನು ಪಡೆದುಕೊಂಡಿದ್ದನು.
ಇತ್ತ ಹನುಮಂತನು ರಾಮ ಮತ್ತು ಲಕ್ಷ್ಮಣರ ಪ್ರಾಣವನ್ನು ಕಾಪಾಡುವುದಕ್ಕಾಗಿ ಅಹಿರಾವಣನನ್ನು ಹಿಂಬಾಲಿಸಿಕೊಂಡು ಪಾತಾಳಕ್ಕೆ ಬರುತ್ತಾನೆ. ಅಲ್ಲಿ ಹನುಮಂತನು ಪಂಚಮುಖಿ ರೂಪವನ್ನು ತೆಗೆದುಕೊಂಡು ಐದು ದಿಕ್ಕುಗಳಲ್ಲಿನ 5 ದೀಪಗಳನ್ನೂ ಒಂದೇ ಬಾರಿ ನಂದಿಸಿ ಅಹಿರಾವಣನನ್ನು ಕೊಲ್ಲುತ್ತಾನೆ. ಅಂದಿನಿಂದ ಪಂಚಮುಖಿ ಹನುಮಂತನ ರೂಪವನ್ನು ಪೂಜಿಸಲಾಗುತ್ತದೆ. ಪಂಚಮುಖಿ ಹನುಮಂತನ ಆರಾಧನೆಗೆ ವಿಶೇಷ ಮಹತ್ವವಿದೆ. ಅವನ ಈ ರೂಪವನ್ನು ಪೂಜಿಸುವುದರಿಂದ ಅನೇಕ ಲಾಭಗಳು ಸಿಗುತ್ತವೆ. ಪಂಚಮುಖಿ ಹನುಮಂತನ ಐದು ಮುಖಗಳು ಐದು ವಿಭಿನ್ನ ದಿಕ್ಕುಗಳನ್ನು ಪ್ರತಿನಿಧಿಸುತ್ತದ. ಪಂಚಮುಖಿ ಹನುಮಂತನ ಐದು ಮುಖಗಳು ಹೀಗಿವೆ.
1- ವಾನರ ಮುಖ – ಪೂರ್ವ ದಿಕ್ಕನ್ನು ಪ್ರತಿನಿಧಿಸುತ್ತದೆ ಮತ್ತು ಇದು ಶತ್ರುಗಳ ವಿರುದ್ಧ ವಿಜಯವನ್ನು ಸಾಧಿಸುತ್ತದೆ.
2- ಗರುಡ ಮುಖ – ಪಶ್ಚಿಮ ದಿಕ್ಕನ್ನು ಪ್ರತಿನಿಧಿಸುತ್ತದೆ ಮತ್ತು ಇದು ಜೀವನದ ಅಡೆತಡೆಗಳು ಮತ್ತು ತೊಂದರೆಗಳನ್ನು ನಾಶಪಡಿಸುತ್ತದೆ.
3- ವರಾಹ ಮುಖ – ಉತ್ತರ ದಿಕ್ಕನ್ನು ಪ್ರತಿನಿಧಿಸುತ್ತದೆ ಮತ್ತು ಇದು ದೀರ್ಘಾಯುಷ್ಯ, ಕೀರ್ತಿ ಮತ್ತು ಶಕ್ತಿಯನ್ನು ನೀಡುತ್ತದೆ.
4- ನರಸಿಂಹ ಮುಖ – ದಕ್ಷಿಣ ದಿಕ್ಕನ್ನು ಪ್ರತಿನಿಧಿಸುತ್ತದೆ ಮತ್ತು ಇದು ಮನಸ್ಸಿನಿಂದ ಭಯ ಮತ್ತು ಉದ್ವೇಗವನ್ನು ತೆಗೆದುಹಾಕುತ್ತದೆ.
5- ಕುದುರೆ ಮುಖ- ಆಕಾಶ ದಿಕ್ಕನ್ನು ಪ್ರತಿನಿಧಿಸುತ್ತದೆ ಮತ್ತು ಇದು ಎಲ್ಲಾ ಆಸೆಗಳನ್ನು ಪೂರೈಸುತ್ತದೆ.
ಪಂಚಮುಖಿ ಹನುಮಂತನನ್ನು ಸ್ವಲ್ಪ ವಿಭಿನ್ನ ರೀತಿಯಲ್ಲಿ ಪೂಜಿಸುವ ಸಂಪ್ರದಾಯವಿದೆ. ಪಂಚಮುಖಿ ಹನುಮಂತನ ವಿಗ್ರಹ ಅಥವಾ ಚಿತ್ರವನ್ನು ಇರಿಸುವಾಗ, ಅದು ದಕ್ಷಿಣ ದಿಕ್ಕಿನಲ್ಲಿರಬೇಕು. ಮಂಗಳವಾರ ಮತ್ತು ಶನಿವಾರ ಹನುಮಂತನನ್ನು ಪೂಜಿಸಲು ವಿಶೇಷ ದಿನಗಳಾಗಿವೆ. ಈ ದಿನ ಕೆಂಪು ಹೂವುಗಳು, ಸಿಂಧೂರ ಮತ್ತು ಮಲ್ಲಿಗೆ ಎಣ್ಣೆಯನ್ನು ಹನುಮಂತನಿಗೆ ಅರ್ಪಿಸಬೇಕು. ಪಂಚಮುಖಿ ಹನುಮಂತನ ಚಿತ್ರವನ್ನು ಮನೆಯ ನೈಋತ್ಯ ಮೂಲೆಯಲ್ಲಿ ಇಡುವುದರಿಂದ ಎಲ್ಲಾ ರೀತಿಯ ವಾಸ್ತು ದೋಷಗಳು ದೂರವಾಗುತ್ತವೆ. ಪಂಚಮುಖಿ ಹನುಮಂತನ ವಿಗ್ರಹವನ್ನು ಮನೆಯ ಮುಖ್ಯ ಬಾಗಿಲಲ್ಲಿ ಇಡುವುದು ತುಂಬಾ ಮಂಗಳಕರವೆಂದು, ದುಷ್ಟ ಶಕ್ತಿಗಳ ನಾಶಕವೆಂದು ಪರಿಗಣಿಸಲಾಗಿದೆ. ಪಂಚಮುಖಿ ಹನುಮಂತನು ಭಗವಾನ್ ಆಂಜನೇಯ ಸ್ವಾಮಿಯ ರೂಪಗಳಲ್ಲಿ ಒಂದಾಗಿದೆ. ಪಂಚಮುಖಿ ಹನುಮಂತನೆಂದರೆ 5 ವಿವಿಧ ಮುಖಗಳನ್ನು ಹೊಂದಿರುವ ಹನುಮಂತನ ರೂಪವಾಗಿದೆ. ಶ್ರೀರಾಮ ಮತ್ತು ಲಕ್ಷ್ಮಣರ ರಕ್ಷಣೆಗಾಗಿ, ಅಹಿರಾವಣನ ನಾಶಕ್ಕಾಗಿ ತೆಗೆದುಕೊಂಡನು.