6 ಇನ್ನಿಂಗ್ಸ್ ಆಡಿದ್ರೂ ಅರ್ಧಶತಕವನ್ನೂ ಬಾರಿಸದ ಕರುಣ್ ನಾಯರ್ – 4ನೇ ಪಂದ್ಯದಿಂದ ಗೇಟ್ ಪಾಸ್?

6 ಇನ್ನಿಂಗ್ಸ್ ಆಡಿದ್ರೂ ಅರ್ಧಶತಕವನ್ನೂ ಬಾರಿಸದ ಕರುಣ್ ನಾಯರ್ – 4ನೇ ಪಂದ್ಯದಿಂದ ಗೇಟ್ ಪಾಸ್?

ಒಂದಲ್ಲ ಎರಡಲ್ಲ ಬರೋಬ್ಬರಿ 8 ವರ್ಷಗಳ ಮಹಾತಪಸ್ಸು.. ಇನ್ನೇನು ಟೀಂ ಇಂಡಿಯಾದ ಬಾಗಿಲು ಪರ್ಮನೆಂಟ್ ಆಗಿ ಮುಚ್ಚೇ ಹೋಯ್ತು ಅನ್ನೋ ಕಾಲ. ಆಗ ಇನ್ನೊಂದು ಚಾನ್ಸ್ ಸಿಕ್ರೂ ಅವನನ್ನ ತಡೆಯೋರು ಯಾರೂ ಇಲ್ಲ ಅಂತಾನೇ ಅಭಿಮಾನಿಗಳೂ ಕೂಡ ಪ್ರಾರ್ಥಿಸಿದ್ರು. ಅದೃಷ್ಟವೋ ಏನೋ.. 8 ವರ್ಷಗಳ ಬಳಿಕ ಭಾರತದ ಬಾಗಿಲು ಕೂಡ ಓಪನ್ ಆಗಿತ್ತು. ಆದ್ರೆ ಆ ಅವಕಾಶ ಕರುಣ್ ನಾಯರ್ ಕೈ ಹಿಡೀತಿಲ್ಲ. ಚಾನ್ಸ್ ಸಿಕ್ರೂ ಬ್ಯಾಟ್ ಸದ್ದು ಮಾಡ್ತಿಲ್ಲ. ಆವತ್ತು ಒಂದು ಅವಕಾಶ ಕೊಡಿ ಅಂತಾ ಕೇಳಿದ ಅಭಿಮಾನಿಗಳೇ ಈಗ ಸಾಕಪ್ಪ ಈತನ ಆಟ ಅಂತಿದ್ದಾರೆ.

ಇದನ್ನೂ ಓದಿ : ಕೆಣಕಿ ಕೆಟ್ಟ ಭಾರತ.. ಗೆದ್ದ ಇಂಗ್ಲೆಂಡ್ – ಭಾರತಕ್ಕೆ ಸ್ಲೆಡ್ಜ್ ರಿವರ್ಸ್ ಆಯ್ತಾ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಕನ್ನಡಿಗ ಕರುಣ್ ನಾಯರ್ ಆಯ್ಕೆಯಾದಾಗ ತುಂಬಾ ಜನ ಖುಷಿ ಪಟ್ಟಿದ್ರು. ಒಬ್ಬ ಸಮರ್ಥ ಆಟಗಾರನಿಗೆ ಸಿಕ್ಕ ನ್ಯಾಯ ಇದು ಅಂತಾ ಸಮಾಧಾನ ಪಟ್ಟಿದ್ರು. ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ರನ್ ಮಳೆ ಸುರಿಸಿರೋ ಕರುಣ್ ಟೀಂ ಇಂಡಿಯಾ ಪರವೂ ಅಂಥದ್ದೇ ಪ್ರದರ್ಶನ ನೀಡ್ತಾರೆ. ಭಾರತಕ್ಕೆ ಆನೆ ಬಲ ಬಂದಂತಾಗಿದೆ ಅನ್ನೋ ಭರವಸೆಯಲ್ಲೇ ಇದ್ರು. ಬೆಟ್ಟದಷ್ಟು ಭರವಸೆಗೆ ಪುಷ್ಠಿ ನೀಡುವಂತೆ ಭಾರತ ಎ ತಂಡದ ಪರ ಅಬ್ಬರದ ಬ್ಯಾಟಿಂಗ್ ನಡೆಸಿದ್ರು. ಆದ್ರೆ ಅದೇ ಲಾಸ್ಟ್.. ಅಧಿಕೃತ ಪಂದ್ಯ ಶುರು ಆಗ್ತಿದ್ದಂತೆ ಕಂಪ್ಲೀಟ್ ಮಂಕಾಗಿದ್ದಾರೆ. ಸಿಕ್ಕಿರೋ ಚಾನ್ಸ್​ನ ತಾವೇ ಕೈಯ್ಯಾರೆ ಕಳ್ಕೊಳ್ತಿದ್ದಾರೆ.

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಶತಕಗಳ ಸರಮಾಲೆ ಕಟ್ಟಿದ್ದ ಕರುಣ್ ನಾಯರ್ ಈಗ ಇಂಗ್ಲೆಂಡ್ ಸರಣಿಯಲ್ಲಿ ಒಂದು ಅರ್ಧಶತಕವನ್ನೂ ಗಳಿಸೋಕೆ ಆಗ್ದೇ ಒದ್ದಾಡ್ತಿದ್ದಾರೆ. ಇಂಗ್ಲೆಂಡ್‌ ತಂಡದ ವಿರುದ್ಧ ಆರಂಭವಾದ ಟೆಸ್ಟ್ ಸರಣಿಯಲ್ಲಿ ಇದುವರೆಗೆ 6 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್‌ ಮಾಡಿದ್ದಾರೆ. ಟಾಪ್ ಆರ್ಡರ್​ನಲ್ಲೇ ಚಾನ್ಸ್ ನೀಡಲಾಗಿದೆ. ಆದ್ರೆ ಇದುವರೆಗೆ ಒಂದೇ ಒಂದು ಅರ್ಧಶತಕವನ್ನೂ ಬಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ  ಕರುಣ್ ನಾಯರ್ ಅವರ ಮೇಲೆ ಫ್ಯಾನ್ಸ್ ಕೂಡ ಸಿಕ್ಕಾಗಿದ್ದಾರೆ. ಆವತ್ತು ಕರುಣ್ ಪರ ಬ್ಯಾಟ್ ಬೀಸಿದ್ದವ್ರೇ ಈಗ ಸಾಕು ಬೇರೆಯವ್ರಿಗೆ ಚಾನ್ಸ್ ಕೊಡಿ ಅಂತಿದ್ದಾರೆ. ಅದೂ ಅಲ್ದೇ ಕರುಣ್ ಬದಲಿಗೆ ಶ್ರೇಯಸ್ ಅಯ್ಯರ್​ರನ್ನ ಟೀಂಗೆ ಸೆಲೆಕ್ಟ್ ಮಾಡಿಕೊಳ್ಬೇಕಿತ್ತು ಅಂತಾ ತಗಾದೆ ತೆಗೆದಿದ್ದಾರೆ.

ಕರುಣ್ ನಾಯರ್ ನಿಜಕ್ಕೂ ಟ್ಯಾಲೆಂಟೆಡ್ ಪ್ಲೇಯರ್. ಇದೇ ಇಂಗ್ಲೆಂಡ್‌ ವಿರುದ್ಧ 303 ರನ್ ಬಾರಿಸಿ ದಾಖಲೆ ಕೂಡ ನಿರ್ಮಿಸಿದ್ದರು. ಆದರೆ ಈಗ ಈ ಟೆಸ್ಟ್ ಸರಣಿಯಲ್ಲಿ, ಅವರ ಬ್ಯಾಟ್‌ ಸೈಲೆಂಟ್ ಆಗಿದೆ. ಲೀಡ್ಸ್ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 0 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 20 ರನ್‌ ಬಾರಿಸಿ ಔಟಾಗಿದ್ರು. ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಕ್ರಮವಾಗಿ 31 ಮತ್ತು 26 ರನ್‌ ಕಲೆಹಾಕಿದ್ದರು. ಈಗ ಲಾರ್ಡ್ಸ್ ಟೆಸ್ಟ್‌ನಲ್ಲಿ 40 ರನ್‌ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 14 ರನ್‌ಗಳಿಗೆ ಸುಸ್ತಾದ್ರು. ಇಂಟ್ರೆಸ್ಟಿಂಗ್ ಅಂದ್ರೆ 50 ರನ್​ಗಳ ಹತ್ತಿರವೂ ಬರೋಕೆ ಸಾಧ್ಯವಾಗಿಲ್ಲ. ಅದ್ರಲ್ಲೂ ಕ್ರೂಶಿಯರ್ ಸ್ಲಾಟ್, ಟೈಮ್​ನಲ್ಲೇ ಕೈಕೊಟ್ಟಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಅವಕಾಶ ಕೊಟ್ಟ ಮೇಲೂ ಬಳಸಿಕೊಳ್ಳದ ಕರುಣ್​ರನ್ನ ನೆಕ್ಸ್​​ಟ್ ಮ್ಯಾಚ್​​ಗೆ ಡ್ರಾಪ್ ಮಾಡಿ ಅಂತಿದ್ದಾರೆ.

ಅಭಿಮಾನಿಗಳು ಅಷ್ಟೇ ಅಲ್ಲದೆ  ಮಾಜಿ ಆಟಗಾರರು ಕೂಡ ಕರುಣ್ ನಾಯರ್ ಬ್ಯಾಟಿಂಗ್‌ಗೆ ನಿರಾಸೆಗೊಂಡಿದ್ದಾರೆ. ದಿನೇಶ್ ಕಾರ್ತಿಕ್, ಆರ್ ಅಶ್ವಿನ್, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಅಥರ್ಟನ್ ಅಸಮಾಧಾನ ಹೊರ ಹಾಕಿದ್ದಾರೆ. ಉತ್ತಮ ಆರಂಭ ಪಡೆದ್ರೂ ಅದನ್ನ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯ ಆಗ್ತಿಲ್ಲ. ಹೀಗೇ ಆದ್ರೆ ಮುಂದಿನ ದಿನಗಳಲ್ಲಿ ಮ್ಯಾನೇಜ್​ಮೆಂಟ್ ದೃಢ ನಿರ್ಧಾರ ಕೈಗೊಳ್ಳೋ ಹಿಂಟ್ ಕೊಟ್ಟಿದ್ದಾರೆ. ಒಟ್ನಲ್ಲಿ ಮೂರು ಪಂದ್ಯಗಳಲ್ಲಿ ಫ್ಲಾಪ್ ಆಗಿರೋ ಕರುಣ್​ಗೆ ಮುಂದಿನ ಪಂದ್ಯದಲ್ಲಿ ಚಾನ್ಸ್ ಕೊಡ್ತಾರಾ ಅನ್ನೋದೇ ಪ್ರಶ್ನೆ ಇದೆ.

Shantha Kumari