ಹರಿಯಾಣದಲ್ಲಿ ಕೋಮು ಗಲಭೆ – ನುಹ್, ಗುರುಗ್ರಾಮ್‌ನಲ್ಲಿ ಇಂಟರ್‌ನೆಟ್ ನಿಷೇಧ

ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣ ತತ್ತರಿಸಿದೆ. ಎರಡು ಗುಂಪುಗಳ ಘರ್ಷಣೆಯಿಂದಾಗಿ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೇ ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡ್ತಿದ್ದಾರೆ. 200 ಮಂದಿಯನ್ನೊಳಗೊಂಡ ಶಸ್ತ್ರಸಜ್ಜಿತ ಗುಂಪೊಂದು ಏಕಾಏಕಿ ದಾಳಿ ನಡೆಸಿದ್ದು, ಬಹಳಷ್ಟು ಹಾನಿಯುಂಟು ಮಾಡಿದೆ. ಈ ಸಂಘರ್ಷದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದ ನುಹ್ ಮತ್ತು ರಾಜ್ಯದ ಇತರ ಕೆಲವು ಸ್ಥಳಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಆಗಸ್ಟ್ 5 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಕೋಮು ಘರ್ಷಣೆ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ನುಹ್ ಜೊತೆಗೆ, ಫರಿದಾಬಾದ್, ಪಲ್ವಾಲ್ ಮತ್ತು ಗುರುಗ್ರಾಮ್ ಜಿಲ್ಲೆಯ ಸೋಹ್ನಾ, ಪಟೌಡಿ ಮತ್ತು ಮಾನೇಸರ್ ಉಪ-ವಿಭಾಗದ ಪ್ರಾದೇಶಿಕ ನ್ಯಾಯವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಎಸ್‌ಎಂಎಸ್ ಸೇವೆಗಳನ್ನು ಆಗಸ್ಟ್ 5 ರವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ವಂದೇ ಭಾರತ್ಗೂ ಲಗ್ಗೆ ಇಟ್ಟ ನಂದಿನಿ! – ರೈಲಿನೊಳಗೆ ನಂದಿನಿ ಉತ್ಪನ್ನಗಳ ಮಾರಾಟ?
ಇನ್ನು ಕೋಮುಗಲಭೆಗೆ ತುತ್ತಾಗಿರುವ ಹರಿಯಾಣದ ನೂಹ್ ಜಿಲ್ಲೆಯಲ್ಲಿ ಇನ್ನೂ ಪರಿಸ್ಥಿತಿ ಬಿಗುವಿನಿಂದಲೇ ಕೂಡಿದೆ. ಇದೇ ವೇಳೆ ಪರಿಸ್ಥಿತಿ ನಿರ್ವಹಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚುವರಿಯಾಗಿ ನಾಲ್ಕು ಕಂಪನಿಗಳಷ್ಟು ಅರೆಸೇನಾ ಪಡೆಗಳನ್ನು ನಿಯೋಜನೆ ಮಾಡುವಂತೆ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಇದೇ ವೇಳೆ, ರಾಜ್ಯದ ವಿವಿಧ ಭಾಗಗಳಲ್ಲಿ ಆ.5ರ ವರೆಗೆ ಇಂಟರ್‌ನೆಟ್ ನಿಷೇಧಿಸಿ ಆದೇಶಿಸಲಾಗಿದೆ. ಮತ್ತೊಂದೆಡೆ, ಗಲಭೆ ಹಿನ್ನೆಲೆಯಲ್ಲಿ ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ದೆಹಲಿ, ಉತ್ತರ ಪ್ರದೇಶ ಸರ್ಕಾರಗಳಿಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.