ವಯಸ್ಸಾಗುವಿಕೆ ತಡೆಗಟ್ಟಲು ಹೊಸ ಔಷಧಿ ಸಂಶೋಧನೆ – ವಿಜ್ಞಾನಲೋಕದಲ್ಲಿ ಮತ್ತೊಂದು ಚಮತ್ಕಾರ

ವಯಸ್ಸಾಗುವಿಕೆ ತಡೆಗಟ್ಟಲು ಹೊಸ ಔಷಧಿ ಸಂಶೋಧನೆ – ವಿಜ್ಞಾನಲೋಕದಲ್ಲಿ ಮತ್ತೊಂದು ಚಮತ್ಕಾರ

ವಿಜ್ಞಾನ ಕ್ಷೇತ್ರದಲ್ಲಿ ಅದೆಷ್ಟೋ ಜಾದುಗಳು ನಡೆಯುತ್ತಲೇ ಇರುತ್ತವೆ. ಮನುಷ್ಯನಲ್ಲಿ ಕುತೂಹಲತೆಯ ಅಸ್ತಿತ್ವ ಎಲ್ಲಿ ತನಕ ಇರುತ್ತದೆಯೋ ಅಲ್ಲಿಯತನಕ ಮನುಷ್ಯ ಅಸಾಧ್ಯಗಳನ್ನ ಸಾಧ್ಯ ಮಾಡುವ ಕಡೆಗೆ ಪ್ರಯತ್ನ ಮಾಡುತ್ತಲೇ ಇರುತ್ತಾನೆ. ಹಾಗೇ ವಯಸ್ಸಾಗುವಿಕೆಯನ್ನ ನಿಲ್ಲಿಸುವ ಮನುಷ್ಯ ಪ್ರಯತ್ನ ಅದೂ ಇವತ್ತು ನಿನ್ನೆಯದಲ್ಲ. ಅದೆಷ್ಟೋ ವರ್ಷಗಳಿಂದ ವಿಜ್ಞಾನಿಗಳು ವಯಸ್ಸನ್ನ ಹಿಮ್ಮೆಟ್ಟಿಸುವ ಕುರಿತಾಗಿ ತಲೆ ಕೆಡಿಸಿಕೊಂಡಿದ್ದರು. ಆದರೆ ಈಗ ವಿಜ್ಞಾನಿಗಳು ವಯಸ್ಸಾಗುವಿಕೆಯನ್ನ ತಡೆಯುವ ಕುರಿತಾಗಿ ಹೊಸ ಔಷಧಿಯೊಂದನ್ನ ಕಂಡು ಹಿಡಿದಿದ್ದಾರೆ.

ವಯಸ್ಸಾಗುವಿಕೆಯನ್ನ ತಡೆಯಲು ಹೊಸ ಔಷಧಿ ಸಂಶೋಧನೆ!

ಹಾರ್ವರ್ಡ್‌ನ ವಿಜ್ಞಾನಿಗಳು ಔಷಧಿಗಳ ಕಾಕ್‌ಟೈಲ್ ಅನ್ನು ಕಂಡುಹಿಡಿದಿದ್ದಾರೆ. ಅದನ್ನು ಮಾತ್ರೆಯಾಗಿ ಕೂಡಾ ಸಂಯೋಜಿಸಬಹುದು, ಅದು ವಯಸ್ಸನ್ನು ಹಿಮ್ಮೆಟ್ಟಿಸುತ್ತದೆ ಎಂದು ‘ಕೆಮಿಕಲಿ ಇಂಡ್ಯೂಸ್ಡ್ ರಿಪ್ರೊಗ್ರಾಮಿಂಗ್ ಟು ರಿವರ್ಸ್ ಸೆಲ್ಯುಲಾರ್ ಏಜಿಂಗ್’ ಎಂಬ ಹೆಸರಿನ ಅಧ್ಯಯನದಲ್ಲಿ ಸಂಶೋಧಕರು ಜುಲೈ 12 ರಂದು ಏಜಿಂಗ್ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ. ತಂಡವು ಆರು ರಾಸಾಯನಿಕ ಕಾಕ್ ಟೈಲ್​ಗಳನ್ನು ಕಂಡುಹಿಡಿದಿದೆ. ಇವು ಮಾನವ ಮತ್ತು ಇಲಿಗಳ ಚರ್ಮದ ಜೀವಕೋಶಗಳಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನ ಹಲವಾರು ವರ್ಷಗಳ ಹಿಂದಕ್ಕೆ ಹಿಮ್ಮೆಟ್ಟಿಸಿತ್ತು. ಸಂಶೋಧಕರು ದೇಹದ ಜೀವಕೋಶಗಳನ್ನು ಪುನರುತ್ಪಾದಿಸಲು ರಾಸಾಯನಿಕ ವಿಧಾನವನ್ನು ಪರಿಚಯಿಸಿದ್ದಾರೆ. ಈ ವಿಧಾನವೂ  ಜೀವಕೋಶಗಳು ಪರಿಣಾಮಕಾರಿಯಾಗಿ ಯೌವನ ಸ್ಥಿತಿಗೇ ಮರಳುವಂತೆ ಮಾಡುತ್ತದೆ.

ಈ ಹೊಸ ಪ್ರಯೋಗವೂ ಒಂದೇ ಮಾತ್ರೆಯೊಂದಿಗೆ ವಯಸ್ಸಾಗುವಿಕೆಯನ್ನ ಹಿಮ್ಮೆಟ್ಟಿಸುವ ಸಾಮರ್ಥ್ಯವನ್ನು ನೀಡುತ್ತದೆ. ದೃಷ್ಟಿ ಸುಧಾರಿಸುವುದರಿಂದ ಹಿಡಿದು ಹಲವಾರು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ. ವಯಸ್ಸಾಗುವಿಕೆಯನ್ನ ತಡೆಯುವ ಜೀನ್ ಥೆರಪಿಗೆ ರಾಸಾಯನಿಕ ಪರ್ಯಾಯವನ್ನು ಅಭಿವೃದ್ಧಿಪಡಿಸುವ ಮೂಲಕ, ಈ ಸಂಶೋಧನೆಯು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಯನ್ನು ಇನ್ನಷ್ಟು ಪರಿಣಾಮಕಾರಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ಹೇಳುತ್ತಾರೆ.

suddiyaana