ಧರಣಿ ಹೆಸ್ರಲ್ಲಿ ಧಮ್ಕಿ ಹಾಕಿದ್ರಾ ಪೂಂಜಾ? – ಪೊಲೀಸರನ್ನು ಕೆಣಕಿದ್ದಕ್ಕೆ ಬಂಧನವಾಗ್ತಾರಾ?
ರಾಜ್ಯ ಸರ್ಕಾರ ಮಾಡಿರೋ ಪ್ಲ್ಯಾನ್ ಏನು?

ಧರಣಿ ಹೆಸ್ರಲ್ಲಿ ಧಮ್ಕಿ ಹಾಕಿದ್ರಾ ಪೂಂಜಾ? – ಪೊಲೀಸರನ್ನು ಕೆಣಕಿದ್ದಕ್ಕೆ ಬಂಧನವಾಗ್ತಾರಾ?ರಾಜ್ಯ ಸರ್ಕಾರ ಮಾಡಿರೋ ಪ್ಲ್ಯಾನ್ ಏನು?

ರಾಜ್ಯ ರಾಜಕಾರಣದಲ್ಲಿ ಕಳೆದ ಎರಡು ದಿನಗಳಿಂದ ಹರೀಶ್ ಪೂಂಜಾ ವಿಚಾರ ಸಾಕಷ್ಟು ಸಂಚಲನ ಸೃಷ್ಟಿಸಿದೆ. ರಾಜ್ಯ ಸರ್ಕಾರ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದೆ. ಇನ್ನೇನು ಬೆಳ್ತಂಗಡಿ ಶಾಸಕರು ಅರೆಸ್ಟ್ ಆಗೇ ಬಿಟ್ರೇನೋ ಅನ್ನುವಷ್ಟರ ಮಟ್ಟಿಗೆ ದೊಡ್ಡ ಹೈದ್ರಾಮಾ ಕ್ರಿಯೇಟ್ ಆಗಿತ್ತು. ಪೊಲೀಸ್ ಠಾಣೆ ಬಳಿಯೇ ಜಟಾಪಟಿ ನಡೆದಿತ್ತು. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಬೆಳ್ತಂಗಡಿ ಪೊಲೀಸ್ ‌ಠಾಣೆಗೆ ಶರಣಾಗಿದ್ದು ವಿಚಾರಣೆ ಬಳಿಕ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕವೂ ಸರ್ಕಾರ ಮತ್ತು ವಿಪಕ್ಷ ನಾಯಕರ ನಡುವೆ ವಾಕ್ಸಮರ ನಡೆಯುತ್ತಲೇ ಇದೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಕೇಸ್‌ಗೆ ಬಿಗ್‌ಟ್ವಿಸ್ಟ್‌ – ಎಸ್​ಐಟಿ ಸಹಾಯವಾಣಿಗೆ ಬಂತು 30ಕ್ಕೂ ಹೆಚ್ಚು ಕರೆ!

ಏನಿದು ಘಟನೆ?  

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಅವರನ್ನು ಬುಧವಾರ ಪೊಲೀಸರು ಅವರ ಮನೆಯಲ್ಲಿ ಬಂಧಿಸಲು ಯತ್ನಿಸಿದ ಘಟನೆ ನಡೆದಿತ್ತು. ತಾಲೂಕಿನಲ್ಲಿ ಕಲ್ಲುಗಣಿಗಾರಿಕೆ ಪ್ರಕರಣವೊಂದಕ್ಕೆ ಸಂಬಂಧಿಸಿ ಸ್ಥಳೀಯ ಬಿಜೆಪಿ ಮುಖಂಡರಾಗಿರುುವ ಶಶಿರಾಜ್ ಶೆಟ್ಟಿ ಮತ್ತು ಪ್ರಮೋದ್ ಎಂಬವರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು. ಅವರಲ್ಲಿ ಶಶಿರಾಜ್ ಶೆಟ್ಟಿ ಎಂಬವರನ್ನು ರಾತ್ರೋ ರಾತ್ರಿ ಮನೆಗೆ ತೆರೆಳಿ ಬಂಧಿಸಿದ್ದರು. ಈ ಪ್ರಕರಣದಲ್ಲಿ ಶಶಿರಾಜ್ ಶೆಟ್ಟಿ ಅವರು ನಿರಪರಾಧಿಯಾಗಿದ್ದು ಆವರ ಬಿಡುಗಡೆಗೆ ಒತ್ತಾಯಿಸಿ ಶಾಸಕ ಹರೀಶ್ ಪೂಂಜಾ ಅವರು ನೂರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಜ್ಯ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಅಧಿಕಾರಿಗಳಿಗೆ ಅಸಂವಿಧಾನಿಕ ಪದಗಳಲ್ಲಿ ನಿಂದಿಸಿದ್ದಾರೆ. ಜೊತೆಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬ ಆರೋಪದಲ್ಲಿ ಪೂಂಜಾ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುಮೋಟೋ ಪ್ರಕರಣ ದಾಖಲಾಗಿತ್ತು. ಆ ಬಳಿಕ ಬೆಳ್ತಂಗಡಿ ಮಿನಿ ವಿಧಾನ ಸಭೆ ಎದುರು ಶಾಸಕರು ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ್ದರು. ಬಂಧನಕ್ಕೊಳಗಾಗಿರುವ ಬಿಜೆಪಿ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್‌ ಹಿಡಿಯಲು ಸಿದ್ಧ. ಮಾತ್ರವಲ್ಲದೆ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಪೊಲೀಸ್‌ ಠಾಣೆಗಳಿಗೆ ಆದ ಗತಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೂ ಕಾಣಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಅನುಮತಿ ಪಡೆಯದೆ ಪ್ರತಿಭಟನೆ ಮತ್ತು ಸರ್ಕಾರಿ ಕಛೇರಿ ಕಾರ್ಯಗಳಿಗೆ ಅಡ್ಡಿ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಮತ್ತೊಂದು ಸುಮೋಟೋ ಪ್ರಕರಣ ದಾಖಲಾಗಿತ್ತು. ಇದೇ ಕಾರಣಕ್ಕೆ ಪೊಲೀಸರು ಶಾಸಕ ಪೂಂಜಾ ಅವರನ್ನು ಬಂಧಿಸಲು ಬುಧವಾರ ಅವರ ಗರ್ಡಾಡಿ ಮನೆಗೆ ತೆರಳಿದ್ದರು. ಬೆಳಿಗ್ಗಿನಿಂದಲೇ ಅವರ ಮನೆ ಮುಂದೆ ಕಾದಿದ್ದರು ಆದರೆ ಈ ವೇಳೆ ಆಲ್ಲಿ ಕಾರ್ಯಕರ್ತರು ಶಾಸಕರನ್ನು ಬಂಧಿಸಿದರೆ, ನಮ್ಮನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದ್ದರಿಂದ ಜಟಾಪಟಿ ನಡೆದಿತ್ತು.

ಇನ್ನು ಘಟನೆ ಬಗ್ಗೆ ಕಾಂಗ್ರೆಸ್ ನಾಯಕರು ಕೆರಳಿದ್ದು, ಶಾಸಕ ಹರೀಶ್ ಪೂಂಜಾ ರೌಡಿಯಂತೆ ವರ್ತನೆ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಮತ್ತೊಂದೆಡೆ ವಿನಾಕಾರಣ ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವನ್ನು ಪ್ರಶ್ನಿಸಿದ ಶಾಸಕ ಹರೀಶ್‌ ಪೂಂಜಾ ಅವರ ಬಂಧನದಂತಹ ದುಸ್ಸಾಹಸಕ್ಕೆ ಪೊಲೀಸರು ಕೈ ಹಾಕಿದರೆ ಮುಂದೆ ಇಂತಹ ಘಟನೆಗಳಿಗೆ ರಾಜ್ಯ ಸರಕಾರ, ಪೊಲೀಸರೇ ಹೊಣೆ ಹೊರಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಪೂಂಜಾ ವಿಚಾರ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಮರಕ್ಕೆ ನಾಂದಿ ಹಾಡಿದೆ.

Shwetha M