ಟೀಂ ಇಂಡಿಯಾಗೆ ಪಾಂಡ್ಯ ಕ್ಯಾಪ್ಟನ್ – ರೋಹಿತ್ ನಿವೃತ್ತಿ ಕನ್ಫರ್ಮ್ ಆಯ್ತಾ?
ಆಲ್ ರೌಂಡರ್ ಗೆ ಪಟ್ಟ.. ಲೆಕ್ಕಾಚಾರವೇನು?
![ಟೀಂ ಇಂಡಿಯಾಗೆ ಪಾಂಡ್ಯ ಕ್ಯಾಪ್ಟನ್ – ರೋಹಿತ್ ನಿವೃತ್ತಿ ಕನ್ಫರ್ಮ್ ಆಯ್ತಾ?ಆಲ್ ರೌಂಡರ್ ಗೆ ಪಟ್ಟ.. ಲೆಕ್ಕಾಚಾರವೇನು?](https://suddiyaana.com/wp-content/uploads/2025/02/382510.4.webp)
ತವರಿನಲ್ಲೇ ನ್ಯೂಜಿಲೆಂಡ್ ವಿರುದ್ಧ ಸೋಲು.. ಆಸ್ಟ್ರೇಲಿಯಾದಲ್ಲಿ 10 ವರ್ಷಗಳ ಬಳಿಕ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಸೋಲು ಟೀಂ ಇಂಡಿಯಾಗೆ ದೊಡ್ಡ ಆಘಾತ ನೀಡಿತ್ತು. ಒಂದ್ಕಡೆ ತಂಡ ಮುಗ್ಗರಿಸ್ತಿದ್ರೆ ಮತ್ತೊಂದೆಡೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಫ್ಲ್ಯಾಪ್ ಶೋನಿಂದ ಹೊರ ಬರ್ತಿದೆ. ಬ್ಯಾಕ್ ಟು ಬ್ಯಾಕ್ ರೆಡ್ ಬಾಲ್ನಲ್ಲಿ ಎಡವಿದ್ರೂ ಕೂಡ ಏಕದಿನ ಮಾದರಿಯಲ್ಲಿ ಕಮ್ ಬ್ಯಾಕ್ ಮಾಡ್ಬೋದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದ್ರೆ ಇಲ್ಲೂ ಕೂಡ ಠುಸ್ ಪಟಾಕಿಯಾಗಿದ್ದಾರೆ. ಇದೇ ಕಳಪೆ ಫಾರ್ಮ್ ಬಿಸಿಸಿಐಗೆ ಹೊಸ ಸಾರಥಿಯನ್ನ ಹುಡುಕುವಂತೆ ಮಾಡಿದೆ. ಭಾರತ ತಂಡದ ಮುಂದಿನ ನಾಯಕ ಯಾರು ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಕೇಳಿ ಬರ್ತಿರೋ ಉತ್ತರವೇ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ!
ಇದನ್ನೂ ಓದಿ : ಶ್ರೇಷ್ಠಾಗೆ ಹೊಸ ಬಾಯ್ ಫ್ರೆಂಡ್? – ತಾಂಡವ್ ಉರಿಗೆ ಭಾಗ್ಯ ಮದ್ದು!
ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಮ್ಯಾಚ್ ಸೋತ ಬೆನ್ನಲ್ಲೇ ಭಾರತಕ್ಕೆ ಹೊಸ ನಾಯಕನನ್ನ ನೇಮಕ ಮಾಡುವಂತೆ ಸಾಕಷ್ಟು ಮಾತುಗಳು ಕೇಳಿ ಬಂದಿದ್ವು. ಇದೀಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭವಾದ ಬೆನ್ನಲ್ಲೇ ಈ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಸದ್ಯ ರೋಹಿತ್ ಶರ್ಮಾ ಟೀಂ ಇಂಡಿಯಾದ ಏಕದಿನ ಮತ್ತು ಟೆಸ್ಟ್ ಫಾರ್ಮೆಟ್ ಕ್ರಿಕೆಟ್ನ ಕ್ಯಾಪ್ಟನ್ ಆಗಿದ್ದಾರೆ. ಆದ್ರೆ ಚಾಂಪಿಯನ್ಸ್ ಟ್ರೋಫಿ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡೋ ಚಾನ್ಸಸ್ ಇದೆ. ಹಾಗೇನಾದ್ರೂ ರೋಹಿತ್ ರಿಟೈರ್ಡ್ ಆದ್ರೆ ಪಾಂಡ್ಯ ಹೆಗಲಿಗೆ ನಾಯಕನ ಜವಾಬ್ದಾರಿ ನೀಡಬಹುದು. ಹಾಗಂತ ಇದ್ರಲ್ಲಿ ಅಚ್ಚರಿ ಏನೂ ಇಲ್ಲ. ಹಾಗೆ ನೋಡಿದ್ರೆ ಕ್ಯಾಪ್ಟನ್ಸಿಗೆ ಪಾಂಡ್ಯ ಹೆಸರು ಹಿಂದಿನಿಂದ್ಲೂ ಕೇಳಿ ಬರ್ತಾನೇ ಇದೆ. ಅದ್ರಲ್ಲೂ ಟಿ-20 ವಿಶ್ವಕಪ್ ಗೆದ್ದ ಬಳಿಕ ಪಾಂಡ್ಯನೇ ಟಿ-20ಐ ಕ್ಯಾಪ್ಟನ್ ಎನ್ನಲಾಗಿತ್ತು. ಆದ್ರೆ ಲಾಸ್ಟ್ ಮೂಮೆಂಟ್ನಲ್ಲಿ ನಾಯಕತ್ವ ಸೂರ್ಯಕುಮಾರ್ ಯಾದವ್ ಪಾಲಾಯ್ತು. ಎರಡು ವರ್ಷಗಳ ಹಿಂದೆಯೇ ಪಾಂಡ್ಯ ಭಾರತ ತಂಡದ ವೈಸ್ ಕ್ಯಾಪ್ಟನ್ ಆಗಿದ್ರು. ಬಟ್ ಲಾಸ್ಟ್ ಇಯರ್ ಪಿಟ್ನೆಸ್ ಮತ್ತು ಬೇರೆ ಬೇರೆ ಕಾರಣಗಳಿಗಾಗಿ ಪಾಂಡ್ಯರನ್ನ ಉಪನಾಯಕನ ಸ್ಥಾನದಿಂದಲೂ ಕೆಳಗಿಳಿಸಲಾಗಿತ್ತು.
ಟೀಂ ಇಂಡಿಯಾ ಟಿ-20 ಫಾರ್ಮೆಟ್ನಲ್ಲಿ ಸೋಲೇ ಇಲ್ಲದೆ ಮುನ್ನುಗ್ಗುತ್ತಿದ್ರೂ ಏಕದಿನ ಮತ್ತು ಟೆಸ್ಟ್ ಗಳಲ್ಲಿ ಮಾತ್ರ ಭಾರತ ತಂಡದ ಪ್ರದರ್ಶನ ಸ್ಥಿರವಾಗಿಲ್ಲ. ಇದೀಗ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ ಏಕದಿನ ಸರಣಿ ಮತ್ತು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗಳ ಪ್ರದರ್ಶನದ ಕಡೆಗೆ ಎಲ್ಲರ ಗಮನ ಇದೆ. ಹಾಗೇ ಭಾರತ ತಂಡದ ಪ್ರದರ್ಶನ ಅದರಲ್ಲೂ ನಾಯಕ ರೋಹಿತ್ ಶರ್ಮಾ ಅವರ ಪ್ರದರ್ಶನದ ಮೇಲೆ ಬಿಸಿಸಿಐ ನಿಗಾ ಇಟ್ಟಿದೆ. ಈಗಾಗ್ಲೇ ಮೊದಲನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ದಾರೆ. ಒಂದು ವೇಳೆ ರೋಹಿತ್ ಈಗಲೂ ಫಾರ್ಮ್ ಗೆ ಮರಳಲು ಸಾಧ್ಯವಾಗದೇ ಇದ್ರೆ ಶಾಶ್ವತವಾಗಿ ರಾಷ್ಟ್ರೀಯ ತಂಡದ ಬಾಗಿಲು ಮುಚ್ಚುವುದು ಖಚಿತ. ಈ ಬಗ್ಗೆ ಈಗಾಗಲೇ ಬಿಸಿಸಿಐ ಮತ್ತು ರೋಹಿತ್ ಶರ್ಮಾ ನಡುವೆ ಮಾತುಕತೆಗಳು ನಡೆದಿರುವುದಾಗಿ ವರದಿಯಾಗಿದೆ.
ಇಲ್ಲಿ ಹಾರ್ದಿಕ್ ಪಾಂಡ್ಯ ಬಗ್ಗೆ ಎಲ್ರಿಗೂ ಇಷ್ಟ ಆಗ್ತಿರೋ ಫ್ಯಾಕ್ಟರ್ ಇದೇ. ನಾಯಕತ್ವ ಸಿಗ್ಲಿಲ್ಲ, ವೈಸ್ ಕ್ಯಾಪ್ಟನ್ಸಿಯೂ ಹೋಯ್ತು ಅಂತಾ ಪಾಂಡ್ಯ ಯಾವತ್ತೂ ಆಟದಲ್ಲಿ ಫಾರ್ಮ್ ಕಳೆದುಕೊಂಡಿಲ್ಲ. ಟಿ20ಯಲ್ಲಿ ಸೂರ್ಯ ಕುಮಾರ್ ಯಾದವ್ ತಂಡವನ್ನು ಸಮರ್ಥವಾಗಿ ನಿಭಾಯಿಸ್ತಾ ಇದ್ದಾರೆ. ಅಂದ್ರೆ ಒಬ್ಬ ಕ್ಯಾಪ್ಟನ್ ಆಗಿ ಏನು ಮಾಡ್ಬೇಕೋ ಅದೆಲ್ಲವನ್ನೂ ಮಾಡ್ತಿದ್ದಾರೆ. ಆದ್ರೆ ವೈಯಕ್ತಿಕವಾಗಿ ಬಿಗ್ ಇನ್ನಿಂಗ್ಸ್ ಬರ್ತಾ ಇಲ್ಲ. ಅತ್ತ ಏಕದಿನ ತಂಡದ ಉಪನಾಯಕನಾಗಿರುವ ಶುಭ್ಮನ್ ಗಿಲ್ ಫಾರ್ಮ್ ಕೂಡ ಸ್ಥಿರವಾಗಿಲ್ಲ. ಆದ್ರೆ ಪಾಂಡ್ಯ ಬೆಟರ್ ಪರ್ಫಾಮೆನ್ಸ್ ಕೊಡ್ತಾನೇ ಇದ್ದಾರೆ. ಇದೇ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ಅವರಿಗೆ ಈ ಹಿಂದೆಯೂ ತಂಡದಲ್ಲಿ ಅನ್ಯಾಯ ಆಗಿದೆ ಎಂದು ಪ್ರಧಾನ ಕೋಚ್ ಗೌತಮ್ ಗಂಭೀರ್ ಮಾತ್ರವಲ್ಲದೆ ಬಿಸಿಸಿಐ ನ ಕೆಲ ಪದಾಧಿಕಾರಿಗಳೂ ಹೇಳಿದ್ದಾರೆ. ಈಗಲೂ ಬಹಳಷ್ಟು ಮಂದಿಗೆ ಹಾರ್ದಿಕ್ ಫಾರ್ಮ್ ಬಗ್ಗೆ ಖುಷಿ ಇದೆ. ನಾಯಕತ್ವದ ಬಗ್ಗೆಯೂ ಭರವಸೆ ಇದೆ. ಇದೇ ಕಾರಣಕ್ಕೆ ರೋಹಿತ್ ಶರ್ಮಾ ನಾಯಕನ ಪಟ್ಟದಿಂದ ಕೆಳಗಿಳಿಯೋ ಸಿಚುಯೇಷನ್ ಬಂದ್ರೆ ಹಾರ್ದಿಕ್ ಪಾಂಡ್ಯ ಹೆಸರೇ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.