6 ವರ್ಷಗಳಿಂದ ಟೆಸ್ಟ್ ಗಿಲ್ಲ ಪಾಂಡ್ಯ – ಸೀಮಿತ ಓವರ್ ನಲ್ಲಷ್ಟೇ ಹಾರ್ದಿಕ್ ಆಟ?
ಗಂಭೀರ್ ರೂಲ್ಸ್.. ಕರಿಯರ್ ಕ್ಲೋಸ್?

ಟೀಂ ಇಂಡಿಯಾದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಒಂದಿಲ್ಲೊಂದು ವಿಚಾರವಾಗಿ ಸುದ್ದಿಯಲ್ಲಿ ಇರ್ತಾರೆ. ಅದು ಪ್ರೊಫೆಶನಲ್ ಲೈಫ್ ಆಗಿರ್ಲಿ ಅಥವಾ ಖಾಸಗಿ ಜೀವನವೇ ಇರಲಿ. ಅತಿ ಕಡಿಮೆ ಸಮಯದಲ್ಲೇ ಖ್ಯಾತಿ ಪಡೆದು ಟೀಂ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಕೆಲವೇ ಕೆಲ ಆಟಗಾರರಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಒಬ್ಬರು. ಮುಂಬೈ ಇಂಡಿಯನ್ಸ್ನೊಂದಿಗೆ ವೃತ್ತಿಜೀವನ ಆರಂಭಿಸಿದ ಹಾರ್ದಿಕ್ ಪಾಂಡ್ಯ, ಆ ಬಳಿಕ ವಿಶ್ವಕ್ರಿಕೆಟ್ ಲೋಕವೇ ಬೆರಗುಗೊಳಿಸುವಂತೆ ಪ್ರದರ್ಶನ ನೀಡಿದ್ದಾರೆ. ಅದ್ರಲ್ಲೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ ನೀಡಿದ ಅದ್ಭುತ ಪ್ರದರ್ಶನವನ್ನ ಯಾರೂ ಮರೆಯೋಕೆ ಸಾಧ್ಯನೇ ಇಲ್ಲ. ಭಾರತ 2ನೇ ಬಾರಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಪಾಂಡ್ಯನೇ. ಆದ್ರೀಗ ಅದೇ ಪಾಂಡ್ಯ ಕ್ರಿಕೆಟ್ ಕರಿಯರ್‌ಗೆ ಸಂಕಷ್ಟ ಎದುರಾಗಿದೆ. ಯಾಕೆ ಮತ್ತು ಹೇಗೆ ಅನ್ನೋದನ್ನೇ ಹೇಳ್ತೇನೆ ನೋಡಿ.
ಇದನ್ನೂ ಓದಿ: ನಟಿ ಕಂಗನಾ ಮದುವೆಗೆ ಕೇಸ್‌ಗಳೇ ವಿಘ್ನ? – ಪೊಲೀಸರನ್ನು ಕಂಡು ಓಡಿ ಹೋಗ ಗಂಡಿನ ಕಡೆಯವರು!
ಪಾಂಡ್ಯಗೆ ಶಾಕ್ ಕೊಡ್ತಾರಾ ಗಂಭೀರ್?
ಪ್ರಸೆಂಟ್ ಸಿಚುಯೇಶನ್ನಲ್ಲಿ ಭಾರತ ತಂಡದಲ್ಲಿ ಇರೋ ಸ್ಟಾರ್ ಆಲ್ರೌಂಡರ್ ಅಂದ್ರೆ ಅದು ಹಾರ್ದಿಕ್ ಪಾಂಡ್ಯ. ಟಿ20 ವಿಶ್ವಕಪ್ ವೇಳೆ ಬ್ಯಾಟಿಂಗ್ ಆ್ಯಂಡ್ ಬೌಲಿಂಗ್ ಎರಡರಲ್ಲೂ ಮಿಂಚಿದ್ರು. ಭಾರತ 2ನೇ ಬಾರಿ ಟಿ20 ವಿಶ್ವಕಪ್ ಎತ್ತಿಹಿಡಿಯುವಲ್ಲಿ ಮಹತ್ವದ ಪಾತ್ರವಹಿಸಿದ್ರು. ಆದ್ರೀಗ, ಪಾಂಡ್ಯಗೆ ಹೊಸ ಟೆನ್ಶನ್ ಕಾಡ್ತಿದೆ. ಅದಕ್ಕೆ ಕಾರಣ ಹೆಡ್ ಕೋಚ್ ಗೌತಮ್ ಗಂಭೀರ್. ಗಂಭೀರ್ ಈ ಹಿಂದೆ ಕಾಮೆಂಟೇಟರ್ ಆಗಿದ್ದಾಗ, ಇಂಟರ್ನ್ಯಾಷನಲ್ ಕ್ರಿಕೆಟ್ ಆಡೋ ಆಟಗಾರರು ಮೂರು ಫಾರ್ಮೆಟ್ನಲ್ಲಿ ಆಡ್ಬೇಕು. ಯಾವುದೇ ಆಟಗಾರ ಕೇವಲ ಟೆಸ್ಟ್ ಅಥವಾ ಒನ್ಡೇ, ಟಿ20 ಕ್ರಿಕೆಟ್‌ಗೆ ಸೀಮಿತರಾಗಬಾರದು ಎಂದಿದ್ರು. ಆದ್ರೆ ಗಂಭೀರ್ರ ಈ ಆಲೋಚನೆಯೇ ಹಾರ್ದಿಕ್ ಪಾಂಡ್ಯಗೆ ಅಡ್ಡಿ ಯಾಗುತ್ತಾ..? ಅನ್ನೋ ಪ್ರಶ್ನೆ ಮೂಡಿದೆ. ಕೆಲ ವರ್ಷಗಳ ಹಿಂದೆ ತ್ರೀ ಫಾರ್ಮೆಟ್ ಪ್ಲೇಯರ್ ಆಗಿದ್ದ ಪಾಂಡ್ಯ, ಈಗ ಲಿಮಿಟೆಡ್ ಓವರ್ ಕ್ರಿಕೆಟ್ನಲ್ಲಿ ಮಾತ್ರ ಆಡ್ತಿದ್ದಾರೆ. 6 ವರ್ಷಗಳಿಂದ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿಲ್ಲ. 2018ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವೇ ಹಾರ್ದಿಕ್ ಆಡಿದ ಕೊನೆಯ ಟೆಸ್ಟ್ ಪಂದ್ಯ. ಆದ್ರೀಗ, ಗಂಭೀರ್ ಕೋಚ್ ಆಗಿರೋದ್ರಿಂದ ಹಾರ್ದಿಕ್ ಮತ್ತೆ ಟೆಸ್ಟ್ ಕ್ಯಾಪ್ ಧರಿಸಬಹುದು ಅನ್ನೋ ಮಾತುಗಳು ಕೇಳಿಬರ್ತಿವೆ. 2021 ಮತ್ತು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಟೀಂ ಇಂಡಿಯಾ ಸೋಲು ಕಂಡಿತ್ತು. ಈ ಸೋಲುಗಳಿಗೆ ಪಾಂಡ್ಯರಂಥ ಬ್ಯಾಟಿಂಗ್ ಆಲ್ರೌಂಡರ್ ಇಲ್ಲದೇ ಇದ್ದದ್ದೇ, ಪ್ರಮುಖ ಕಾರಣವಾಗಿತ್ತು. ಟೀಂ ಇಂಡಿಯಾ ಮುಂದಿನ 3 ವರ್ಷಗಳಲ್ಲಿ ಗಂಭೀರ್ ತರಬೇತಿಯಲ್ಲಿ 4 ಐಸಿಸಿ ಟೂರ್ನಿ ಆಡಲಿದೆ. ತಮ್ಮ ಅವಧಿಯಲ್ಲಿ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಕೊಡೋ ಪಣತೊಣತೊಟ್ಟಿರೋ ಗಂಭೀರ್, ಟೆಸ್ಟ್ ಫಾರ್ಮೆಟ್ನಲ್ಲೂ ಆಡುವಂತೆ ಹಾರ್ದಿಕ್‌ಗೆ ಮನವೊಲಿಸಲಿದ್ದಾರೆ ಎನ್ನಲಾಗ್ತಿದೆ. ಹಾಗೇನಾದ್ರೂ ಆದ್ರೆ ರೆಡ್‌ಬಾಲ್ ಕ್ರಿಕೆಟ್‌ಗೆ ಹಾರ್ದಿಕ್ ಕಮ್‌ಬ್ಯಾಕ್ ಮಾಡೋದು ಫಿಕ್ಸ್.
ಪದೇಪದೆ ಕಾಡುವ ಗಾಯದ ಸಮಸ್ಯೆಯ ಹೊರತಾಗಿಯೂ ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ ಅತ್ಯದ್ಭುತ ಪ್ರದರ್ಶನ ನೀಡಿದ್ದಾರೆ. ಗಾಯದ ಸಮಸ್ಯೆ ಕಾರಣದಿಂದಲೇ ಟಿ-20 ನಾಯಕತ್ವವೂ ಕೈ ತಪ್ಪಿ ಹೋಗಿದೆ. ಇದೀಗ 2025ರ ಐಪಿಎಲ್ಗೆ ಮುಂಬೈ ಇಂಡಿಯನ್ಸ್ನ ಕ್ಯಾಪ್ಟನ್ಸಿಯೂ ಕೈ ತಪ್ಪುತ್ತೆ ಅನ್ನೋ ಸುದ್ದಿ ಇದೆ. ಏನೇ ಹೇಳಿ ಬಾಲ್ಯದಲ್ಲಿ ಕ್ರಿಕೆಟ್ ಪರಿಕರಗಳನ್ನು ಖರೀದಿಸಲು ಹಾರ್ದಿಕ್ ಬಳಿ ಹಣವಿರಲಿಲ್ಲ. ಇದೇ ಕಾರಣದಿಂದ ಆರಂಭಿಕ ದಿನಗಳಲ್ಲಿ ಹಾರ್ದಿಕ್ ಟೆನಿಸ್ ಬಾಲ್ʼನಲ್ಲಿ ಕ್ರಿಕೆಟ್ ಆಡುತ್ತಿದ್ದರು. ಹಾರ್ದಿಕ್ ಮತ್ತು ಅವರ ಸಹೋದರ ಕೃನಾಲ್, 200 ರೂಪಾಯಿಗೋಸ್ಕರ ತಮ್ಮ ಪಕ್ಕದ ಹಳ್ಳಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆದ್ರೆ 2013 ರಲ್ಲಿ ಮುಂಬೈ ವಿರುದ್ಧದ ಟಿ20 ಪಂದ್ಯದ ಮೂಲಕ ದೇಶೀಯ ಕ್ರಿಕೆಟ್ʼಗೆ ಪಾದಾರ್ಪಣೆ ಮಾಡಿದ ಪಾಂಡ್ಯ ನಂತರ, ಹಾರ್ದಿಕ್ ಹಿಂತಿರುಗಿ ನೋಡಲಿಲ್ಲ, ಐಪಿಎಲ್ ನಲ್ಲಿ ಅಬ್ಬರಿಸಿ ಟೀಂ ಇಂಡಿಯಾ ಪರವೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಟೀಂ ಇಂಡಿಯಾದ ಬೆಸ್ಟ್ ಆಲ್ರೌಂಡರ್ ಆಗಿರೋ ಹಾರ್ದಿಕ್ ಪಾಂಡ್ಯಗೆ ಮತ್ತಷ್ಟು ಚಾನ್ಸ್ ಸಿಗಲಿ ಅನ್ನೋದೇ ಅಭಿಮಾನಿಗಳ ಆಶಯ.