ಒಂದೇ ಮ್ಯಾಚ್ ನಲ್ಲಿ ಪಾಂಡ್ಯ ದಾಖಲೆ.. – ರೋಹಿತ್ ಗೆ ಬ್ಯಾಡ್ ಲಕ್

ಒಂದೇ ಮ್ಯಾಚ್ ನಲ್ಲಿ ಪಾಂಡ್ಯ ದಾಖಲೆ.. – ರೋಹಿತ್ ಗೆ ಬ್ಯಾಡ್ ಲಕ್

ಇದೊಂದು ಗೆಲುವು. ಇಂಥಾದ್ದೊಂದು ವಿಕ್ಟರಿಗಾಗಿಯೇ ಮುಂಬೈ ಇಂಡಿಯನ್ಸ್ ತಂಡ ಚಾತಕಪಕ್ಷಿಯಂತೆ ಕಾಯ್ತಿತ್ತು. ಆಟಗಾರರ ಮನಸ್ಸುಗಳು ಛಿದ್ರವಾಗಿದ್ರೂ ಒಂದು ಜಯಭೇರಿಗಾಗಿ ಎಂಐ ಫ್ರಾಂಚೈಸಿ ಹವಣಿಸುತ್ತಿತ್ತು. ಒಂದ್ಕಡೆ ನಾಯಕತ್ವ ಕಳೆದುಕೊಂಡಿರೋ ರೋಹಿತ್ ಶರ್ಮಾರ ಅಸಮಾಧಾನ. ಮತ್ತೊಂದ್ಕಡೆ ನೂತನ ಕ್ಯಾಪ್ಟನ್ ಆಗಿ ಬಂದ ಹಾರ್ದಿಕ್ ಪಾಂಡ್ಯಗೆ ತಿರಸ್ಕಾರದ ಸ್ವಾಗತ. ಟೀಂನಲ್ಲಿ ಬಿರುಕು. ಅಭಿಮಾನಿಗಳ ಆಕ್ರೋಶ.. ಸೋಶಿಯಲ್ ಮೀಡಿಯಾ ಟ್ರೋಲ್.. ಅಬ್ಬಬ್ಬಾ ಈ ಐಪಿಎಲ್​ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವೇ ಹಾಟ್ ಟಾಪಿಕ್ ಆಗಿತ್ತು. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್, ಡ್ರೆಸ್ಸಿಂಗ್ ರೂಮ್, ಕೋಚ್ ಹೀಗೆ ಎಲ್ಲವೂ  ಸುದ್ದಿಯಾಗ್ತಾನೇ ಇತ್ತು. 5 ಸಲ ಚಾಂಪಿಯನ್ ಆಗಿ ಬ್ಯಾಟಿಂಗ್, ಬೌಲಿಂಗ್​ನಲ್ಲೂ ಸೂಪರ್ ಸ್ಟ್ರಾಂಗ್ ತಂಡವಾಗಿದ್ರೂ ಬ್ಯಾಕ್ ಟು ಬ್ಯಾಕ್ ಸೋಲು ಅನುಭವಿಸಿದ್ದ ತಂಡ ಕೊನೆಗೂ ಥೂಫಾನ್​ನಂತೆ ಎದ್ದು ಬಂದಿದೆ. ಒಂದೇ ಒಂದು ವಿಜಯ ದಾಖಲೆಗಳ ಜೊತೆಗೆ ಅಂಕಪಟ್ಟಿಯಲ್ಲೂ ಜಿಗಿಯುವಂತೆ ಮಾಡಿದೆ. ಅಷ್ಟೇ ಅಲ್ಲದೆ ಮುಂಬೈ ಗೆಲುವು ಆರ್​ಸಿಬಿ ತಂಡಕ್ಕೆ ಬಿಗ್ ಶಾಕ್ ಕೊಟ್ಟಿದೆ. ಹಾಗಾದ್ರೆ ಮೊದಲ ಜಯದಲ್ಲೇ ಎಂಐ ಬರೆದ ದಾಖಲೆ ಏನು..? ಆರ್​ಸಿಬಿಗೆ ಶಾಕ್ ಕೊಟ್ಟಿದ್ದೇನು..? ಈ ಬಗ್ಗೆ ಮಾಹಿತಿ ಇಲ್ಲಿದೆ

ಇದನ್ನೂ ಓದಿ: ಬಂಡಾಯದಿಂದ ಹಿಂದಕ್ಕೆ ಸರಿಯಲು ಎರಡು ಷರತ್ತು ಹಾಕಿದ ಈಶ್ವರಪ್ಪ!

ಐಪಿಎಲ್​ನಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ದೆಹಲಿ ಕ್ಯಾಪಿಟಲ್ಸ್ ವಿರುದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಹಾರ್ದಿಕ್ ಪಡೆ ಗೆದ್ದು ಬೀಗಿದ್ದಲ್ಲದೆ ವಿಶೇಷ ದಾಖಲೆಯನ್ನೂ ಬರೆದಿದೆ. ಈ ಗೆಲುವು ಹಾರ್ದಿಕ್ ಪಾಂಡ್ಯಗೆ ನಿಜಕ್ಕೂ ಮರಳಗಾಡಿನಲ್ಲಿ ಹನಿ ನೀರು ಸಿಕ್ಕಷ್ಟೇ ತೃಪ್ತಿ ತಂದಿದೆ. ಮುಂಬೈ ಬ್ಯಾಟ್ಸ್‌ಮನ್‌’ಗಳ ಸ್ಫೋಟಕ ಪ್ರದರ್ಶನದ ಮೂಲಕ   5 ವಿಕೆಟ್ ನಷ್ಟಕ್ಕೆ 234 ಗಳಿಸಿತು. ಚೇಸಿಂಗ್​ಗೆ ಇಳಿದ ಡೆಲ್ಲಿ ಎಂಟು ವಿಕೆಟ್ ನಷ್ಟಕ್ಕೆ 208 ರನ್ ಗಳಿಸುವಷ್ಟರಲ್ಲಿ 29 ರನ್‌ಗಳಿಂದ ಪಂದ್ಯವನ್ನು ಕೈ ಚೆಲ್ಲಿತು. ದೆಹಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ರೋಹಿತ್ ಶರ್ಮಾ 49, ಟಿಮ್ ಡೇವಿಡ್ 45, ಇಶಾನ್ ಕಿಶನ್ 42, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ರೊಮಾರಿಯೋ ಶೆಫರ್ಡ್ ತಲಾ 39 ರನ್ ಗಳಿಸಿದರು. ಇನ್ನು ಪಂದ್ಯದ ವೇಳೆ ಮುಂಬೈ ತಂಡ ಅಮೋಘ ದಾಖಲೆಯನ್ನೂ ಮಾಡಿದೆ. ಮುಂಬೈ ಇಂಡಿಯನ್ಸ್ ಮಾಡಿದ 234 ರನ್‌’ಗಳ ಸ್ಕೋರ್’ನಲ್ಲಿ ಯಾವೊಬ್ಬ ಬ್ಯಾಟ್ಸ್’ಮನ್ ಕೂಡ ಅರ್ಧಶತಕ ಬಾರಿಸಿಲ್ಲ. ಈ ಮೂಲಕ T20 ಕ್ರಿಕೆಟ್‌’ನಲ್ಲಿ ಅರ್ಧಶತಕವಿಲ್ಲದೆ ಗರಿಷ್ಠ ಸ್ಕೋರ್ ತಲುಪಿದ ತಂಡ ಎಂದೆನಿಸಿಕೊಂಡಿದೆ.

ಇನ್ನು ಡೆಲ್ಲಿ ಪರ ಪೃಥ್ವಿ ಶಾ 40 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 66 ರನ್ ಗಳಿಸಿದರೆ, ಟ್ರಿಸ್ಟಾನ್ ಸ್ಟಬ್ಸ್ 25 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 71 ರನ್ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್‌ ತಂಡ ಪಂದ್ಯದಲ್ಲಿ ಹಲವು ದಾಖಲೆಯನ್ನೂ ನಿರ್ಮಿಸಿದೆ. ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತು. ಕೊನೆಯ ಐದು ಓವರ್‌ಗಳಲ್ಲಿ 96 ರನ್‌ ಕಲೆ ಹಾಕಿದ ತಂಡವು, ಸ್ಫೋಟಕ ಪಂದ್ಯಕ್ಕೆ ಸಾಕ್ಷಿಯಾಯ್ತು. ಆದರೆ, ತಂಡದ ಇನ್ನಿಂಗ್ಸ್‌ನಲ್ಲಿ ಒಬ್ಬರು ಕೂಡಾ ಕನಿಷ್ಠ ಅರ್ಧಶತಕ ದಾಖಲಿಸಿಲ್ಲ ಎಂಬುದೇ ವಿಶೇಷ. ಮುಂಬೈ ತಂಡದ ಪರ ಗರಿಷ್ಠ‌ ಮೊತ್ತ ಕಲೆ ಹಾಕಿದವರು ರೋಹಿತ್ ಶರ್ಮಾ. 49 ರನ್ ಗಳಿಸಿದ ಅವರು, ಕೇವಲ ಒಂದು ರನ್‌ನಿಂದ ಅರ್ಧಶತಕ ಮಿಸ್‌ ಮಾಡಿಕೊಂಡರು. ಆ ಬಳಿಕ ಇಶಾನ್ ಕಿಶನ್, ಟಿಮ್‌ ಡೇವಿಡ್‌, ರೊಮಾರಿಯೋ ಶೆಫರ್ಡ್‌ ಸೇರಿದಂತೆ ತಂಡದ ಇತರ ಆಟಗಾರರು ಕೂಡಾ ಅಬ್ಬರಿಸಿದರು. ಆದರೆ, ಯಾರೊಬ್ಬರು ಕೂಡಾ ಹಾಫ್‌ ಸೆಂಚುರಿ ಬಾರಿಸಿಲ್ಲ. ಈ ಮೂಲಕ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಮುಂಬೈ ಇನ್ನಿಂಗ್ಸ್‌ ಹೊಸ ದಾಖಲೆಗೆ ಕಾರಣವಾಗಿದೆ. ಯಾವೊಬ್ಬ ಬ್ಯಾಟರ್‌ ಕೂಡಾ ಅರ್ಧಶತಕ ಗಳಿಸದೆ ತಂಡವೊಂದು ಅತ್ಯಧಿಕ ಮೊತ್ತಕ್ಕೆ ಸಾಕ್ಷಿಯಾಗಿದೆ. ಇನ್ನು ಐಪಿಎಲ್​ನಲ್ಲಿ 200ರನ್‌ ಗಡಿ ದಾಟುವುದರೊಂದಿಗೆ, ಮುಂಬೈ ತಂಡವು 24ನೇ ಬಾರಿಗೆ ಐಪಿಎಲ್‌ನಲ್ಲಿ 200 ರನ್‌ಗೂ ಅಧಿಕ ಮೊತ್ತ ಕಲೆ ಹಾಕಿದೆ. ಇದರೊಂದಿಗೆ ಆರ್‌ಸಿಬಿ ದಾಖಲೆಯನ್ನು ಸರಿಗಟ್ಟಿದೆ. ಆದ್ರೆ 29 ಸಲ 200ಕ್ಕೂ ಹೆಚ್ಚು ರನ್ ಬಾರಿಸಿರುವ ಸಿಎಸ್​ಕೆ ತಂಡ ಫಸ್ಟ್ ಪ್ಲೇಸ್​ನಲ್ಲಿದೆ.

ಅಲ್ದೇ ಏಪ್ರಿಲ್ 7ರಂದು ನಡೆದ ಐಪಿಎಲ್ ಪಂದ್ಯಗಳಲ್ಲಿ ಎರಡು ಪಂದ್ಯಗಳ ಫಲಿತಾಂಶವು ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆಯನ್ನೇ ಮಾಡಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳಿಂದ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೊದಲ ಬಾರಿಗೆ ಜಿಗಿತ ಕಂಡಿದೆ. ಮುಂಬೈ ಇಂಡಿಯನ್ಸ್ ಈ ಸೀಸನ್​ನಲ್ಲಿ ಮೊದಲನೇ ಗೆಲುವು ದಾಖಲಿಸಿ ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ಎಂಟನೇ ಸ್ಥಾನಕ್ಕೆ ಜಂಪ್ ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಇದೀಗ -1.370 ನೆಟ್‌ ರನ್ ರೇಟ್‌ನೊಂದಿಗೆ ಕೊನೆಯ ಸ್ಥಾನಕ್ಕೆ ಇಳಿದಿದೆ. ಇನ್ನು ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾತ್ರಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 33 ರನ್‌ಗಳ ಗೆಲುವು ಸಾಧಿಸಿದ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ 2024ರ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ರಾಜಸ್ಥಾನ್ ರಾಯಲ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 4 ಗೆಲುವು ಸಾಧಿಸುವ ಮೂಲಕ 8 ಅಂಕಗಳು ಮತ್ತು +1.120 ನೆಟ್‌ ರನ್ ರೇಟ್‌ನೊಂದಿಗೆ ಅಗ್ರಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆಡಿದ 3 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕಗಳು ಮತ್ತು +2.518 ನೆಟ್‌ ರನ್ ರೇಟ್‌ನೊಂದಿಗೆ 2ನೇ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 3 ಗೆಲುವು ಮತ್ತು 1 ಸೋಲು ಕಂಡಿದ್ದು, ಒಟ್ಟು 6 ಅಂಕಗಳು ಮತ್ತು +0.775 ನೆಟ್‌ ರನ್ ರೇಟ್‌ನೊಂದಿಗೆ 3ನೇ ಸ್ಥಾನ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಸೋಲು ಕಂಡಿದೆ. ಒಟ್ಟು 4 ಅಂಕಗಳು ಮತ್ತು +0.517 ನೆಟ್‌ ರನ್ ರೇಟ್‌ನೊಂದಿಗೆ 4ನೇ ಸ್ಥಾನಕ್ಕೆ ಇಳಿದಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ 4 ಪಂದ್ಯಗಳಲ್ಲಿ 2 ಗೆಲುವು ಮತ್ತು 2 ಸೋಲು ಕಂಡಿದ್ದು, 4 ಅಂಕಗಳು ಹಾಗೂ +0.409 ನೆಟ್‌ ರನ್ ರೇಟ್‌ನೊಂದಿಗೆ 5ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ತಂಡವು ಆಡಿದ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಸೋಲು ಅನುಭವಿಸಿದ್ದು, ಒಟ್ಟು 4 ಅಂಕಗಳು ಮತ್ತು -0.220 ನೆಟ್‌ ರನ್ ರೇಟ್‌ನೊಂದಿಗೆ 6ನೇ ಸ್ಥಾನ ಹೊಂದಿದೆ. ಗುಜರಾತ್ ಟೈಟನ್ಸ್ ತಂಡವು ಆಡಿದ 5 ಪಂದ್ಯಗಳಲ್ಲಿ 2 ಗೆಲುವು ಮತ್ತು 3 ಸೋಲು ಕಂಡಿದೆ. ಈ ಮೂಲಕ 4 ಅಂಕಗಳು ಮತ್ತು -0.797 ನೆಟ್‌ ರನ್ ರೇಟ್‌ನೊಂದಿಗೆ 7ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 4 ಪಂದ್ಯಗಳಲ್ಲಿ 1 ಗೆಲುವು ಮತ್ತು 3 ಸೋಲು ಕಂಡಿದ್ದು, 2 ಅಂಕಗಳು ಹಾಗೂ -0.704 ನೆಟ್‌ ರನ್ ರೇಟ್‌ನೊಂದಿಗೆ 8ನೇ ಸ್ಥಾನಕ್ಕೇರಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 5 ಪಂದ್ಯಗಳಲ್ಲಿ 1 ಗೆಲುವು ಮತ್ತು 4 ಸೋಲು ಅನುಭವಿಸಿದ್ದು, 2 ಅಂಕಗಳು ಮತ್ತು -0.843 ನೆಟ್‌ ರನ್ ರೇಟ್‌ನೊಂದಿಗೆ 9ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೀಗ ಆಡಿದ 5 ಪಂದ್ಯಗಳಲ್ಲಿ 1 ಗೆಲುವು ಮತ್ತು 4 ಸೋಲು ಅನುಭವಿಸಿ -1.370 ನೆಟ್‌ ರನ್ ರೇಟ್‌ನೊಂದಿಗೆ ಕೊನೆಯ ಸ್ಥಾನಕ್ಕೆ ಇಳಿದಿದೆ.  ಒಟ್ನಲ್ಲಿ ಕಳಪೆ ಪ್ರದರ್ಶನದ ಮೂಲಕ ಕೊನೇ ಸ್ಥಾನದಲ್ಲಿದ್ದ ಮುಂಬೈಗೆ ಒಂದು ಗೆಲುವು ಭರವಸೆ ಮೂಡಿಸಿದೆ. ಗುಜರಾತ್​ನ ಸೋಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದ ಪಾಂಡ್ಯಗೆ ಈಗ ಕಾನ್ಫಿಡೆನ್ಸ್ ಬಂದಂತೆ ಕಾಣ್ತಿದೆ. ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನಿಡುವ ಭರವಸೆಯಲ್ಲಿದ್ದಾರೆ.

Shwetha M