HITಮ್ಯಾನ್ ಉತ್ತರಾಧಿಕಾರಿ ಯಾರು? -ಐವರ ರೇಸ್.. ಯಾರಿಗೆ ಕ್ಯಾಪ್ಟನ್ ಪಟ್ಟ?
ಹಾರ್ದಿಕ್ ಪಾಂಡ್ಯಗೆ ಒಲಿಯಿತಾ ಅದೃಷ್ಟ?

HITಮ್ಯಾನ್ ಉತ್ತರಾಧಿಕಾರಿ ಯಾರು? -ಐವರ ರೇಸ್.. ಯಾರಿಗೆ ಕ್ಯಾಪ್ಟನ್ ಪಟ್ಟ?ಹಾರ್ದಿಕ್ ಪಾಂಡ್ಯಗೆ ಒಲಿಯಿತಾ ಅದೃಷ್ಟ?

ಕೆರೆಬಿಯನ್ ನಾಡಲ್ಲಿ ಹರಿಣಗಳ ಬೇಟೆಯಾಡಿ ಟೀಂ ಇಂಡಿಯಾ ಟೈಗರ್ಸ್ ಟಿ-20 ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಮಿನಿ ಸಮರ ಗೆದ್ದ ಗುಂಗು ಇನ್ನೂ ಕೂಡ 140 ಕೋಟಿ ಭಾರತೀಯರ ಕಿವಿಯಲ್ಲಿ ಗುಯ್​ಗುಡ್ತಿದೆ. ಆದ್ರೆ ಈ ಸಂಭ್ರಮದ ನಡುವೆಯೇ ಕ್ರಿಕೆಟ್ ಲೋಕದ ಲೆಜೆಂಡರಿ ಆಟಗಾರರ ಯುಗಾಂತ್ಯವಾಗಿದೆ. ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಆಪತ್​ಬಾಂಧವನಂತೆ ಬಂದು ಗೆಲುವಿನ ಪಟ್ಟಕ್ಕೇರಿಸುತ್ತಿದ್ದ ಕಿಂಗ್ ವಿರಾಟ್ ಕೊಹ್ಲಿ ಟಿ-20ಐ ಫಾರ್ಮೇಟ್​ಗೆ ಗುಡ್​ ಬೈ ಹೇಳಿದ್ದಾರೆ. ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ತಂಡವನ್ನ ಮುನ್ನಡೆಸುತ್ತಿದ್ದ ನಾಯಕ ರೋಹಿತ್ ಶರ್ಮಾ ಕೂಡ ವಿದಾಯ ಘೋಷಿಸಿದ್ದಾರೆ. ಮತ್ತೊಂದೆಡೆ ಹೆಜ್ಜೆ ಹೆಜ್ಜೆಗೂ ದ್ರೋಣಾಚಾರ್ಯನಂತೆ ನಿಂತು ಪ್ರತೀ ಆಟಗಾರನ ಶಕ್ತಿಯಾಗಿದ್ದ ರಾಹುಲ್ ದ್ರಾವಿಡ್ ಕೂಡ ಕೋಚ್ ಹುದ್ದೆಯಿಂದ ಇಳಿದು ಶಸ್ತ್ರತ್ಯಾಗ ಮಾಡಿದ್ದಾರೆ. ಹಾಗೇ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಕೂಡ ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗೆ ವಿಶ್ವಗೆದ್ದ ಗೆಲುವಿನ ಖುಷಿಯೊಂದಿಗೆ ನಾಲ್ವರು ಲೆಜೆಂಡರಿ ಕ್ರಿಕೆಟಿಗರು ವಿದಾಯದ ಆಘಾತ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಈ ನಾಲ್ವರು ದಿಗ್ಗಜರ ಸ್ಥಾನ ತುಂಬುವ ಸಮರ್ಥ ಆಟಗಾರರ ಆಯ್ಕೆಯೇ ಈಗ ಬಿಸಿಸಿಐಗೆ ಸವಾಲ್ ಆಗಿದೆ. ಅದ್ರಲ್ಲೂ ಹಿಟ್​ಮ್ಯಾನ್ ರೋಹಿತ್ ಶರ್ಮಾರ ಸ್ಥಾನಕ್ಕೆ ರಿಪ್ಲೇಸ್ ಮಾಡೋದೇ ಬಹುದೊಡ್ಡ ಚಾಲೆಂಜ್ ಆಗಲಿದೆ. ಈಗಾಗ್ಲೇ ಐವರು ಪ್ಲೇಯರ್ಸ್ ನೆಕ್ಸ್ಟ್​​ ಟಿ-20ಐ ಫಾರ್ಮೆಟ್ ನಾಯಕರಾಗಲು ರೇಸ್​ನಲ್ಲಿದ್ದಾರೆ. ಅಷ್ಟಕ್ಕೂ ಯಾರು ಆ ಐವರು ಆಟಗಾರರು..? ಯಾರಿಗೆ ಒಲಿಯುತ್ತೆ ನಾಯಕನ ಪಟ್ಟ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಪಾಂಡ್ಯ ಕಣ್ಣೀರಿಗೆ ಇದೇ ಕಾರಣ? – ನತಾಶಾಗೆ ಯಾಕಿಷ್ಟು ಧಿಮಾಕು?

ರೋಹಿತ್ ಶರ್ಮಾ. ಟೀಂ ಇಂಡಿಯಾದ ಲೆಜೆಂಡರಿ ಕ್ರಿಕೆಟರ್. 17 ವರ್ಷಗಳ ಬಳಿಕ ಭಾರತಕ್ಕೆ ಟಿ-20 ವಿಶ್ವಕಪ್ ಗೆದ್ದುಕೊಟ್ಟ ನಾಯಕ. ಶನಿವಾರ ತಡರಾತ್ರಿ ಭಾರತವನ್ನು ಮಿನಿ ವಿಶ್ವಯುದ್ಧದ ಚಾಂಪಿಯನ್ ಪಟ್ಟಕ್ಕೇರಿಸಿ ಟಿ-20ಐಗೆ ವಿದಾಯ ಘೋಷಿಸಿದ್ದಾರೆ. ಆದ್ರೀಗ ಹಿಟ್​ಮ್ಯಾನ್ ಆಬ್ಸೆನ್ಸ್ ತುಂಬುವಂಥಹ ಒಬ್ಬ ಸಮರ್ಥ ನಾಯಕನನ್ನ ಆಯ್ಕೆ ಮಾಡಬೇಕಿದೆ. ರೋಹಿತ್​ರಂಥ ಮಿಸ್ಟರ್ ಪರ್ಫೆಕ್ಟ್ ಕ್ಯಾಪ್ಟನ್ ಹಾಗೇ ಆಟಗಾರನಾಗಿ ಅವರ ಸ್ಥಾನವನ್ನ ನಿಭಾಯಿಸುವಷ್ಟು ಕೇಪೆಬಲ್ ಲೀಡರ್ ಬೇಕಿದೆ. ಇದೇ ಸವಾಲು ಈಗ ಬಿಸಿಸಿಐ ಹೆಗಲೇರಿದೆ. ಚುಟುಕು ಮಾದರಿಯಲ್ಲಿ ಅಬ್ಬರದ ಪ್ರದರ್ಶನ ನೀಡುವ ಜತೆಗೆ ತಂಡದ ಮುಂದಾಳತ್ವ ವಹಿಸಲು ಯಾರು ಸಮರ್ಥರು ಎಂಬ ಚರ್ಚೆ ಕೂಡ ಜೋರಾಗಿದೆ. ತಂಡದಲ್ಲಿ ಹಿರಿಯ ಆಟಗಾರರ ಸಂಖ್ಯೆ ಕಡಿಮೆ ಇರೋದ್ರಿಂದ ಬಹುಶಃ ಈ ಐವರಲ್ಲಿ ಒಬ್ಬರಿಗೆ ಕ್ಯಾಪ್ಟನ್ಸಿ ಸಿಗೋ ಲೆಕ್ಕಾಚಾರ ನಡೀತಿದೆ. ಅವ್ರಲ್ಲಿ ಮೊದಲ ರೇಸ್​ನಲ್ಲಿರೋದು ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ.

ಹಾರ್ದಿಕ್ ಪಾಂಡ್ಯಗೆ ಒಲಿಯುತ್ತಾ ನಾಯಕನ ಪಟ್ಟ?

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತದ ಪಾಲಿಗೆ ರಿಯಲ್ ಹೀರೋ ಆದ ಆಟಗಾರ. ಕಡೆಯ ಓವರ್​ನಲ್ಲಿ ಭಾರತಕ್ಕೆ ಗೆಲುವಿನ ಕಿರೀಟ ತೊಡಿಸಿದ ಛಲದಂಕಮಲ್ಲ. ಅಲ್ಲದೆ ಟೂರ್ನಿಯಲ್ಲಿ ಭಾರತ ತಂಡಕ್ಕೆ ವೈಸ್ ಕ್ಯಾಪ್ಟನ್ ಕೂಡ ಆಗಿದ್ರು. ಪ್ರಶಸ್ತಿ ಗೆಲುವಿನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಟಿ 20 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲು ಇರುವ ಮುಂಚೂಣಿ ಹೆಸರೇ ಹಾರ್ದಿಕ್ ಪಾಂಡ್ಯ. ಹಾಗೇ ಐಪಿಎಲ್​ನಲ್ಲೂ ಕೂಡ ನಾಯಕನಾಗಿ ಸಕ್ಸಸ್ ಆಗಿದ್ದಾರೆ. ಐಪಿಎಲ್ 2022 ರಲ್ಲಿ ನಾಯಕನಾಗಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದ ಪಾಂಡ್ಯ ಮುಂದಿನ ಋತುವಿನಲ್ಲಿ ಫ್ರಾಂಚೈಸಿಯನ್ನು ಫೈನಲ್​ಗೆ ಕೊಂಡೊಯ್ದಿದ್ದರು. ಹೀಗಾಗಿ ಹಾರ್ದಿಕ್ ಈ ಸ್ವರೂಪದಲ್ಲಿ ನಾಯಕತ್ವದ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದಾರೆ. ಅದರ ಜತೆಗೆ 2022-23ರ ಅವಧಿಯಲ್ಲಿ 16 ಟಿ20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. 2022 ರ ಟಿ 20 ವಿಶ್ವಕಪ್​​ನ ಸೆಮಿಫೈನಲ್​ನಲ್ಲಿ ಭಾರತ ನಿರ್ಗಮಿಸಿದ ನಂತರ ನ್ಯೂಜಿಲೆಂಡ್​​ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಗೆ ಪಾಂಡ್ಯ ನಾಯಕರಾಗಿದ್ದರು. ಶ್ರೀಲಂಕಾ ವಿರುದ್ಧ 3-0 ವೈಟ್ವಾಶ್ ಮತ್ತು ತವರಿನಲ್ಲಿ ಕಿವೀಸ್ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದ ತಂಡದ ಮುಂದಾಳತ್ವ ವಹಿಸಿದ್ದರು. ನಾಯಕನಾಗಿ ಅವರ ಕೊನೆಯ ಟಿ 20 ಐ ಸರಣಿ ಕಳೆದ ವರ್ಷ ಆಗಸ್ಟ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 2-3 ಅಂತರದಲ್ಲಿ ಸರಣಿ ಸೋಲಿನೊಂದಿಗೆ ಕೊನೆಗೊಂಡಿತ್ತು. ಹಾರ್ದಿಕ್ ಪಾಂಡ್ಯ ಏಕದಿನ ತಂಡದ ಪ್ರಮುಖ ಆಟಗಾರನಾಗಿರುವುದರಿಂದ ಎರಡು ಸ್ವರೂಪಗಳನ್ನು ಹೇಗೆ ನಿಭಾಯಿಸ್ತಾರೆ ಅನ್ನೋ ಚರ್ಚೆ ಕೂಡ ಇದೆ.

ಕ್ಯಾಪ್ಟನ್ ರೇಸ್ ನಲ್ಲಿ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ 

ಇನ್ನು ಸೂರ್ಯಕುಮಾರ್ ಯಾದವ್ ಬಗ್ಗೆ ಹೇಳೋದೇ ಬೇಡ. ಸೂರ್ಯಕುಮಾರ್ ವಿಶ್ವದ ಪ್ರಮುಖ ಟಿ 20 ಬ್ಯಾಟರ್​ಗಳಲ್ಲಿ ಒಬ್ಬರು. ಈ ಮಾದರಿಯಲ್ಲಿ ಬ್ಯಾಟ್​ನೊಂದಿಗೆ ಭಾರತದ ಪರ ಆಕ್ರಮಣಕಾರಿಯಾಗಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಸೂರ್ಯ ಭಾರತವನ್ನು ಮುನ್ನಡೆಸಿದ್ದರು. ನಂತರ ಡಿಸೆಂಬರ್​​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ 20 ಐಗಳಲ್ಲಿ ತಂಡದ ನಾಯಕರಾಗಿದ್ದರು. ನಾಯಕನಾಗಿದ್ದ ತಮ್ಮ ಕೊನೆಯ ಪಂದ್ಯದಲ್ಲಿ, ಸೂರ್ಯಕುಮಾರ್ 56 ಎಸೆತಗಳಲ್ಲಿ ಶತಕ ಬಾರಿಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ 106 ರನ್​ಗಳ ಬೃಹತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ರೆ ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಇನ್ನೂ ಕಾಯಂ ಸ್ಥಾನ ಪಡೆಯದ ಕಾರಣ, ಸೂರ್ಯಕುಮಾರ್ ತಮ್ಮ ಗಮನವನ್ನು ಆಟದ ಕಿರು ಸ್ವರೂಪಕ್ಕೆ ಮೀಸಲಿಡುವ ಸಂಪೂರ್ಣ ಅವಕಾಶವನ್ನೂ ಹೊಂದಿದ್ದಾರೆ.

ಬುಮ್ ಬುಮ್ ಬುಮ್ರಾಗಿದೆ ಭರ್ಜರಿ ಚಾನ್ಸ್

ಜಸ್ಪ್ರೀತ್ ಬುಮ್ರಾ ಬೌಲಿಂಗ್ ಜಾದು ಬಗ್ಗೆಯಂತೂ ಮಾತಾಡೋ ಹಾಗೇ ಇಲ್ಲ. ಭಾರತದ ಆಲ್-ಫಾರ್ಮ್ಯಾಟ್ ವೇಗದ ಬೌಲರ್ ಆಧುನಿಕ ಯುಗದ​ ಅತ್ಯುತ್ತಮ ಕ್ರಿಕೆಟಿಗ. ಭಾರತ ತಂಡದ ಯಶಸ್ಸಿನ ರೂವಾರಿ ಕೂಡ. ಸೀಮಿತ ನಾಯಕತ್ವ ಅನುಭವವನ್ನು ಹೊಂದಿದ್ದರೂ ಕೂಡ ಬುಮ್ರಾ ತಮ್ಮ ತೀಕ್ಷ್ಣ ಚಾತುರ್ಯ ಮತ್ತು ಆಟದಿಂದಲೇ ಜಗತ್ ವಿಖ್ಯಾತಿ ಗಳಿಸಿದ್ದಾರೆ. ಸಾಕಷ್ಟು ಸಲ ತಂಡದ ಉಪನಾಯಕನಾಗಿರುವ ಎಕ್ಸ್​ಪೀರಿಯನ್ಸ್ ಕೂಡ ಇದೆ.  ಕಳೆದ ವರ್ಷ ಐರ್ಲೆಂಡ್ ವಿರುದ್ಧ ಎರಡು ಟಿ 20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ದೇ ಎಲ್ಲಾ ಮೂರು ಸ್ವರೂಪಗಳಲ್ಲಿ ಅವರ ಬೌಲಿಂಗ್ ಭಾರತಕ್ಕೆ ಮುಖ್ಯ. ಆದ್ರೆ ಇತ್ತೀಚಿಗೆ ಸಾಕಷ್ಟು ಗಾಯಗಳಿಂದ ಬಳಲ್ತಿದ್ದು ಹೀಗಾಗಿ ಬಿಸಿಸಿಐ ಆಡಳಿತವು ಬುಮ್ರಾಗೆ ಹೆಚ್ಚುವರಿ ಜವಾಬ್ದಾರಿ ನೀಡುವ ಸಾಧ್ಯತೆ ಕಮ್ಮಿ ಇದೆ. ಬಟ್ ಬುಮ್ರಾ ನಾಯಕನಾಗೋಕೆ ಎಲ್ಲಾ ಸಾಮರ್ಥ್ಯವನ್ನೂ ಕೂಡ ಹೊಂದಿದ್ದಾರೆ.

ಭಾರತ ತಂಡವನ್ನ ಮುನ್ನಡೆಸ್ತಾರಾ ರಿಷಬ್ ಪಂತ್? 

ಕ್ರಿಕೆಟ್ ಕರಿಯರ್ ಮುಗ್ದೇ ಹೋಯ್ತು ಅನ್ಕೊಂಡಿದ್ದ ರಿಷಬ್ ಪಂತ್ ಕಮ್ ಬ್ಯಾಕ್ ಅಂತೂ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದೆ. ಭೀಕರ ಕಾರು ಅಪಘಾತದಿಂದ ಆದ ಗಾಯಗಳಿಂದ ಚೇತರಿಸಿಕೊಂಡ ರಿಷಭ್​ ಪಂತ್ ಯಾರೂ ಊಹೆ ಮಾಡದ ರೀತಿಯಲ್ಲಿ ಮೈದಾನದಲ್ಲಿ ಅಬ್ಬರಿಸುತ್ತಿದ್ದಾರೆ. ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಪಂತ್, ಆ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅಲ್ಲದೆ 2022 ರಲ್ಲಿ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತವನ್ನು ಮುನ್ನಡೆಸಿದ್ದರು. ಆ ಪಂದ್ಯ 2-2 ಡ್ರಾದಲ್ಲಿ ಕೊನೆಗೊಂಡಿತ್ತು. ಈ ಬಾರಿ ಟಿ-20 ವಿಶ್ವಕಪ್ ಪಂದ್ಯದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಆಡಿದ್ರೂ ಕೂಡ ಮುಂದಿನ ಪಂದ್ಯಗಳಲ್ಲಿ ರಿಷಬ್ ಸೆಲೆಕ್ಟ್ ಆಗೇ ಆಗ್ತಾರೆ ಅಂತಾ ಹೇಳೋಕೆ ಆಗಲ್ಲ. ಅವರ ಬ್ಯಾಟಿಂಗ್​ನಲ್ಲಿ ಅಸ್ಥಿತರೆ ಇರುವ ಕಾರಣ ನಾಯಕತ್ವ ಜವಾಬ್ದಾರಿ ನೀಡುವ ಬಗ್ಗೆ ಬಿಸಿಸಿಐ ಸಾಕಷ್ಟು ಚರ್ಚೆ ನಡೆಸಲಿದೆ.

ಭಾರತ ತಂಡದ ಕ್ಯಾಪ್ಟನ್ ಆಗ್ತಾರಾ ಶುಭ್​ ಮನ್ ಗಿಲ್? 

ಇನ್ನು ಶುಭ್​ಮನ್ ಗಿಲ್​ರನ್ನ ಟೀಂ ಇಂಡಿಯಾದ ಪ್ರಿನ್ಸ್ ಅಂತಾನೇ ಕರೆಯಲಾಗುತ್ತೆ. ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ಐಪಿಎಲ್​ನಲ್ಲಿ ಮಂಬೈ ತಂಡದ ಪಾಲಾದ ಬಳಿಕ ಶುಭ್​ಮನ್ ಗಿಲ್ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ರು. ಇದೀಗ ಜಿಂಬಾಬ್ವೆಯಲ್ಲಿ ಮುಂಬರುವ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ. ಟಿ 20 ವಿಶ್ವಕಪ್ 2024ರ ತಂಡದ 15ರ ಬಳಗದಲ್ಲಿ ಸ್ಥಾನ ಪಡೆಯದಿದ್ದರೂ ರೋಹಿತ್ ಮತ್ತು ಕೊಹ್ಲಿ ಅವರ ನಿವೃತ್ತಿಯ ನಂತರ ಗಿಲ್ ಟಿ 20 ಐಗಳಲ್ಲಿ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿಯೋದು ಕನ್ಫರ್ಮ್. ಆದ್ರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಕೂಡ ನಾಯಕತ್ವದ ಅನುಭವವನ್ನು ಹೊಂದಿಲ್ಲದಿದ್ರೂ 24 ವರ್ಷದ ಗಿಲ್ ಏಕದಿನ ಮತ್ತು ಟೆಸ್ಟ್ ತಂಡಗಳ ಪ್ರಮುಖ ಸದಸ್ಯರಾಗಿದ್ದಾರೆ. ಭವಿಷ್ಯಕ್ಕಾಗಿ ನಾಯಕನನ್ನು ರೂಪಿಸುವಲ್ಲಿ ಮ್ಯಾನೇಜ್ಮೆಂಟ್ ಕಣ್ಣಿಟ್ಟಿರುವ ಅಭ್ಯರ್ಥಿಗಳಲ್ಲಿ ಗಿಲ್ ಮುಂಚೂಣಿಯಲ್ಲಿದ್ದಾರೆ.

ಹೀಗೆ ಐವರು ಆಟಗಾರರು ಟಿ-20 ಐ ನಾಯಕನ ರೇಸ್​ನಲ್ಲಿದ್ದಾರೆ. ಆದ್ರೆ ಈ ಐವರ ಪೈಕಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಈ ಹಿಂದೆ ಭಾರತ ಟಿ20 ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಟಿ20 ವಿಶ್ವಕಪ್​ಗೂ ಮುಂಚಿತವಾಗಿ ಕೆಳಗಿಳಿಸಲಾಗಿತ್ತು. ಅಲ್ಲದೆ ರೋಹಿತ್ ಶರ್ಮಾಗೆ ಕ್ಯಾಪ್ಟನ್ ಪಟ್ಟ ನೀಡಲಾಗಿತ್ತು. ಇದೀಗ ಟಿ20 ವಿಶ್ವಕಪ್ ಗೆಲುವಿನೊಂದಿಗೆ ಹಿಟ್​ಮ್ಯಾನ್ ಟಿ20ಐ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ನಲ್ಲಿ ಉಪನಾಯಕರಾಗಿ ಕಾಣಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಮುಂಬರುವ ಸರಣಿಗಳಲ್ಲಿ ಕ್ಯಾಪ್ಟನ್ ಆಗುವುದು ಬಹುತೇಕ ಖಚಿತ. ಇದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ಪರೋಕ್ಷವಾಗಿ ಹೇಳಿದ್ದಾರೆ. ಭಾರತ ತಂಡದ ನಾಯಕನ ಆಯ್ಕೆಯನ್ನು ಆಯ್ಕೆದಾರರು ನಿರ್ಧರಿಸುತ್ತಾರೆ. ಅವರೊಂದಿಗೆ ಚರ್ಚಿಸಿದ ನಂತರ ನಾವು ಅದನ್ನು ಘೋಷಿಸುತ್ತೇವೆ. ನೀವು ಹಾರ್ದಿಕ್ ಬಗ್ಗೆ ಕೇಳಿದ್ದೀರಿ, ಅವರ ಫಾರ್ಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿದ್ದವು. ಇದಾಗ್ಯೂ ನಾವು ಮತ್ತು ಆಯ್ಕೆದಾರರು ಅವರ ಮೇಲೆ ನಂಬಿಕೆಯಿಟ್ಟೆವು. ಅದರಂತೆ ಟಿ20 ವಿಶ್ವಕಪ್​ಗೆ ಆಯ್ಕೆ ಮಾಡಿದೆವು. ಇದೀಗ ಅದ್ಭುತ ಪ್ರದರ್ಶನ ನೀಡಿ ಹಾರ್ದಿಕ್ ಪಾಂಡ್ಯ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಜಯ್ ಶಾ ಹೇಳಿದ್ದಾರೆ. ಇಲ್ಲಿ ಜಯ್ ಶಾ ಹಾರ್ದಿಕ್ ಪಾಂಡ್ಯ ಅವರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಾರಣ, ರೋಹಿತ್ ಶರ್ಮಾ ಅವರ ಉತ್ತರಾಧಿಕಾರಿಯಾಗಿ ಪಾಂಡ್ಯ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸದ್ಯ ಭಾರತ ಮತ್ತು ಝಿಂಬಾಬ್ವೆ ನಡುವೆ ಟಿ20 ಸರಣಿಯು ಜುಲೈ 6 ರಿಂದ ಶುರುವಾಗಲಿದೆ. ಟಿ20 ವಿಶ್ವಕಪ್​ನಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಅಲ್ಲದೆ 5 ಪಂದ್ಯಗಳ ಈ ಸರಣಿಗಾಗಿ ಯುವ ಪಡೆಯನ್ನು ಆಯ್ಕೆ ಮಾಡಲಾಗಿದ್ದು, ಈ ತಂಡದ ನಾಯಕತ್ವವನ್ನು ಶುಭ್​ಮನ್ ಗಿಲ್​ಗೆ ವಹಿಸಲಾಗಿದೆ. ಇನ್ನು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಕಾಣಿಸಿಕೊಳ್ಳಲಿದ್ದು, ಈ ಸರಣಿ ವೇಳೆ ಭಾರತ ಟಿ20 ತಂಡದ ನೂತನ ನಾಯಕನನ್ನು ಘೋಷಣೆ ಮಾಡಲಾಗುತ್ತದೆ. ಅದರಂತೆ ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಹಾರ್ದಿಕ್ ಪಾಂಡ್ಯ ಪಟ್ಟಕ್ಕೇರೋದು ಬಹುತೇಕ ಫಿಕ್ಸ್ ಆಗಿದೆ.

ಟಿ-20ಗೆ ವಿದಾಯ ಘೋಷಿಸಿದ್ರೂ ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ತಂಡಗಳ ಕ್ಯಾಪ್ಟನ್ ಆಗಿ ಮುಂದುವರೆಯುವ ಸಾಧ್ಯತೆಯಿದೆ. ಏಕೆಂದರೆ 2025 ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು ಟೆಸ್ಟ್ ವಿಶ್ವಚಾಂಪಿಯನ್​ಶಿಪ್ ನಡೆಯಲಿದ್ದು, ಹೀಗಾಗಿ ಮುಂದಿನ ವರ್ಷದವರೆಗೆ ರೋಹಿತ್ ಶರ್ಮಾ ಅವರನ್ನೇ ನಾಯಕನಾಗಿ ಮುಂದುವರೆಸುವ ಸಾಧ್ಯತೆ ಹೆಚ್ಚಿದೆ.

Shwetha M

Leave a Reply

Your email address will not be published. Required fields are marked *