ಹರ್‌ ಘರ್‌ ತಿರಂಗಾ ಅಭಿಯಾನ – ಮನೆಯಲ್ಲಿ ಧ್ವಜಾರೋಹಣ ಮಾಡಿದ ಅಮಿತ್ ಶಾ

ಹರ್‌ ಘರ್‌ ತಿರಂಗಾ ಅಭಿಯಾನ – ಮನೆಯಲ್ಲಿ ಧ್ವಜಾರೋಹಣ ಮಾಡಿದ ಅಮಿತ್ ಶಾ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ಹರ್‌ ಘರ್‌ ತಿರಂಗಾ’  ಅಭಿಯಾನವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಸಲಾಗುತ್ತಿರುವ ‘ಹರ್‌ ಘರ್‌ ತಿರಂಗ’ ಅಭಿಯಾನಕ್ಕೆ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡಿದ್ದಾರೆ.

ಇದನ್ನೂ ಓದಿ: ನಾನ್‍ ಸ್ಟಿಕ್ ಪಾತ್ರೆ ಬಳಸುವ ಮುನ್ನ ಎಚ್ಚರ! – ಹೊಟ್ಟೆ ಸೇರುತ್ತೆ ಅಪಾಯಕಾರಿ ಕೆಮಿಕಲ್ಸ್‌!

ಆಜಾದಿ ಕಾ ಅಮೃತ್ ಮಹೋತ್ಸವದ ಆಶ್ರಯದಲ್ಲಿ ಪ್ರಾರಂಭಿಸಲಾದ ಹರ್ ಘರ್ ತಿರಂಗ ಅಭಿಯಾನದ 4 ನೇ ಆವೃತ್ತಿಯನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಘೋಷಿಸಿತು. ದೇಶಾದ್ಯಂತ ನಾಗರಿಕರು ಭಾರತೀಯ ರಾಷ್ಟ್ರೀಯ ಧ್ವಜವಾದ ತಿರಂಗವನ್ನು ಮನೆ ಮೇಲೆ ಹಾರಿಸುವಂತೆ ಪ್ರೇರೇಪಿಸಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಅಮಿತ್‌ ಶಾ, ಪತ್ನಿ ಸೋನಲ್ ಶಾ ಅವರೊಂದಿಗೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಟೆರೇಸ್‌ನಲ್ಲಿ ತಿರಂಗ ಹಾರಿಸುತ್ತಿರುವ ವೀಡಿಯೋ ವೈರಲ್‌ ಆಗಿದೆ.

ದೇಶಾದ್ಯಂತ ನಡೆಸಲಾದ ಈ ಅಭಿಯಾನವು ಜನಾಂದೋಲನವಾಗಿ ಮಾರ್ಪಟ್ಟಿದೆ. ಅಭಿಯಾನದ ನಾಲ್ಕನೇ ವರ್ಷದಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.

ಈ ವರ್ಷ ನಾವು ತಿರಂಗಾ ಅಭಿಯಾನದ ನಾಲ್ಕನೇ ಆವೃತ್ತಿಯನ್ನು ಆಚರಿಸಲಿದ್ದೇವೆ. ಇದಕ್ಕಾಗಿ 5 ಲಕ್ಷಕ್ಕೂ ಹೆಚ್ಚು ಜನರು ಸ್ವಯಂಸೇವಕರಾಗಿ ನೋಂದಾಯಿಸಿಕೊಂಡಿದ್ದಾರೆ. ಆ ಮೂಲಕ ತಿರಂಗಾ ಅಭಿಯಾನಕ್ಕೆ ಜನರನ್ನು ಪ್ರೇರೇಪಿಸುತ್ತಾರೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.

ಹರ್ ಘರ್ ತಿರಂಗ ಕೇವಲ ಅಭಿಯಾನ ಅಲ್ಲ. ಇದು ನಮ್ಮ ರಾಷ್ಟ್ರೀಯ ಧ್ವಜದ ಕಾಲಾತೀತ ಬಣ್ಣಗಳ ಅಡಿಯಲ್ಲಿ 1.4 ಶತಕೋಟಿ ಭಾರತೀಯರನ್ನು ಒಂದುಗೂಡಿಸುವ ಭಾವನಾತ್ಮಕ ಚಳವಳಿಯಾಗಿದೆ. ಇದು ದೇಶಭಕ್ತಿಯನ್ನು ಹುಟ್ಟುಹಾಕುವುದು, ನಾಗರಿಕ ಹೆಮ್ಮೆಯ ಭಾವನೆ ಮೂಡಿಸುವುದು, ನಮ್ಮ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಜೀವಂತ ಸಂಕೇತವಾಗಿ ತಿರಂಗದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದು ಶೇಖಾವತ್‌ ಹೇಳಿದ್ದಾರೆ.

Shwetha M