61ನೇ ವಸಂತಕ್ಕೆ ಕಾಲಿಟ್ಟ ಸೆಂಚುರಿ ಸ್ಟಾರ್ ಶಿವಣ್ಣ – ‘ಘೋಸ್ಟ್’ ಸಿನಿಮಾ ತಂಡದಿಂದ ಸ್ಪೆಷಲ್ ಗಿಫ್ಟ್

61ನೇ ವಸಂತಕ್ಕೆ ಕಾಲಿಟ್ಟ ಸೆಂಚುರಿ ಸ್ಟಾರ್ ಶಿವಣ್ಣ – ‘ಘೋಸ್ಟ್’ ಸಿನಿಮಾ ತಂಡದಿಂದ ಸ್ಪೆಷಲ್ ಗಿಫ್ಟ್

ನಟನೆಯಲ್ಲಿ ಸಾರ್ವಭೌಮ. ನಾಟ್ಯದಲ್ಲಿ ನಟರಾಜ. ಸ್ಯಾಂಡರ್ ವುಡ್ ನಲ್ಲಿ ಸಿನಿಮಾಗಳ ಮೂಲಕವೇ ಸೆಂಚುರಿ ಹೊಡೆದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಇಂದು 61ನೇ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ರಾತ್ರಿಯಿಂದಲೇ ಶಿವಣ್ಣನ ಅಭಿಮಾನಿಗಳು ಅವರ ನಿವಾಸದ ಮುಂದೆ ಜಮಾಯಿಸಿ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡಿದ್ರು.

ಪ್ರೀತಿಯ ತಮ್ಮ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ನಿಧನದ ಕಾರಣದಿಂದ ಶಿವಣ್ಣ ಕಳೆದ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಈ ವರ್ಷ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಬರ್ತ್‌ಡೇಯನ್ನ ಆಚರಿಸಿಕೊಂಡಿದ್ದಾರೆ. ಫ್ಯಾನ್ಸ್‌ಗಾಗಿ ತಮ್ಮ ಸಮಯವನ್ನ ಮೀಸಲಿಡುತ್ತಿದ್ದಾರೆ. ಮಂಗಳವಾರ ರಾತ್ರಿ 11:30ಕ್ಕೆ ನಾಗವಾರದ ಮನೆಯಲ್ಲಿ ಆಪ್ತರ ಜೊತೆ ಆಚರಣೆ ಶಿವಣ್ಣ, ಬರ್ತ್‌ಡೇ ಸೆಲೆಬ್ರೆಟ್ ಮಾಡಿದ್ದಾರೆ. ಬುಧವಾರ ಬೆಳಗ್ಗೆ 8ರಿಂದ 10ಗಂಟೆಯವರೆಗೆ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದರು. ಬಳಿಕ  ಡಾ.ರಾಜ್‌ಕುಮಾರ್ ಸಮಾಧಿಗೆ ಪೂಜೆ ಸಲ್ಲಿಸಿದರು.

ಇದನ್ನೂ ಓದಿ : ಸಮಂತಾಗೆ ಹೊಸ ಮಾದರಿಯ ಥೆರಪಿ! – 6 ತಿಂಗಳು ಕಷ್ಟ ಕಷ್ಟ.. 

‘ಆನಂದ’ ಸಿನಿಮಾದಿಂದ ವೃತ್ತಿ ಬದುಕು ಆರಂಭಿಸಿದ ನಟ, 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 60ರ ವಯಸ್ಸಿನಲ್ಲೂ ಯಂಗ್ & ಎನರ್ಜಿಟಿಕ್ ಆಗಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. ಶಿವರಾಜ್‌ಕುಮಾರ್ ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಸದ್ಯ ‘ಘೋಸ್ಟ್’ ಸಿನಿಮಾದ ಲುಕ್‌ನಿಂದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ ಲುಕ್‌ನಿಂದ ಶಿವಣ್ಣ ಕಿಕ್ ಕೊಟ್ಟಿದ್ದಾರೆ. ಶಿವಣ್ಣ ಬರ್ತ್‌ಡೇ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ‘ಘೋಸ್ಟ್’ (Ghost Film) ಸಿನಿಮಾ ತಂಡದಿಂದ ಬಿಗ್ ಡ್ಯಾಡಿ ವೀಡಿಯೋ ರಿಲೀಸ್ ಆಗಲಿದೆ.

ಶಿವಣ್ಣ 1986ರಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ ಮೂಡಿಬಂದ ಆನಂದ್ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಪ್ರವೇಶಿಸಿದರು. ಇದೇ ಚಿತ್ರದ ಮೂಲಕ ಚಿ.ಉದಯಶಂಕರ್‌ ರವರ ಪುತ್ರ ಗುರುದತ್ತ್ ಮತ್ತು ಸುಧಾರಾಣಿ ಕೂಡ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರ 250 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು ಕನ್ನಡ ಚಿತ್ರರಂಗದಲ್ಲಿ ಅದ್ಭುತ ದಾಖಲೆ ಬರೆಯಿತು. ಈ ಚಿತ್ರದ ‘ಟುವ್ವಿ ಟುವ್ವಿ’ ಹಾಡು ಆಗಿನ ಯುವಜನತೆಯ ಹಾಟ್ ಫೇವರೇಟ್ ಆಗಿತ್ತು. ವಿಶೇಷವೆಂದರೆ ಈ ಚಿತ್ರವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು ನಟಿ ರಕ್ಷಿತಾ ಪ್ರೇಮ್‌ರವರ ತಂದೆ ಖ್ಯಾತ ಛಾಯಾಗ್ರಾಹಕ ಬಿ.ಸಿ.ಗೌರಿಶಂಕರ್. ನಂತರ ಎಂ.ಎಸ್.ರಾಜಶೇಖರ್ ನಿರ್ದೇಶನದಲ್ಲಿ ನಟಿಸಿದ ‘ರಥ-ಸಪ್ತಮಿ’ ಮತ್ತು ‘ಮನಮೆಚ್ಚಿದ ಹುಡುಗಿ’ ಚಿತ್ರಗಳು ಕೂಡ ಶತದಿನ ಪೂರೈಸಿದವು. ನಟಿಸಿದ ಮೊದಲ ಮೂರು ಚಿತ್ರಗಳು ಶತದಿನ ಪೂರೈಸಿದ್ದರಿಂದ ಶಿವಣ್ಣನಿಗೆ ‘ಹ್ಯಾಟ್ರಿಕ್ ಹೀರೋ’ ಬಿರುದು ಬಂತು. ನಂತರ ಬಂದ ‘ಶಿವ ಮೆಚ್ಚಿದ ಕಣ್ಣಪ್ಪ’ ಚಿತ್ರದಲ್ಲಿ ಡಾ.ರಾಜ್ ಮತ್ತು ಪುನೀತ್ ಅತಿಥಿ ಪಾತ್ರದಲ್ಲಿ ನಟಿಸಿದರು. 1995 ರಲ್ಲಿ ಉಪೇಂದ್ರರವರು ನಿರ್ದೇಶಿಸಿದ ‘ಓಂ’ ಚಿತ್ರ ಭೂಗತ ಲೋಕದಲ್ಲಿ ಅರಳುವ ಪ್ರೇಮ ಕಥಾನಕವನ್ನು ಮನೋಘ್ನವಾಗಿ ಬಿಂಬಿಸಿತು. ಈ ಚಿತ್ರ ಹಲವಾರು ಬಾರಿ ಮರು ಪ್ರದರ್ಶನ ಕಂಡು ಇಂದಿಗೂ ಅದೇ ಕ್ರೇಜ್ ಉಳಿಸಿಕೊಂಡಿದೆ.

1996 ರಲ್ಲಿ ತೆರೆಕಂಡ ‘ಜನುಮದ ಜೋಡಿ’ ಚಿತ್ರ ಆಗಿನ ಕಾಲದಲ್ಲಿ 10 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರವಾಗಿ ದಾಖಲೆ ಬರೆಯಿತು. ಈ ಚಿತ್ರ ಅಮೆರಿಕ ವಿಶ್ವವಿದ್ಯಾಲಯವೊಂದರ ಮಾನವಶಾಸ್ತ್ರ ವಿಭಾಗದ ಆಧ್ಯಯನ ವಿಷಯವಾಗಿದೆ. 1998ರಲ್ಲಿ ತೆರೆಕಂಡ ‘ಅಂಡಮಾನ್’ ಚಿತ್ರದಲ್ಲಿ ಶಿವಣ್ಣರವರ ಪುತ್ರಿ ನಿವೇದಿತಾ ಚಿತ್ರದಲ್ಲಿ ಕೂಡ ಪುತ್ರಿಯಾಗಿ ನಟಿಸಿದರು. 1999 ರಲ್ಲಿ ತೆರೆಕಂಡ ಶಿವಣ್ಣನ 50ನೇ ಚಿತ್ರ ‘ಎ.ಕೆ.47′ ನೂರೆಪ್ಪತ್ತೈದು ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು ದಾಖಲೆ ಬರೆಯಿತು. 2005ರಲ್ಲಿ ತೆರೆಕಂಡ ‘ಜೋಗಿ’ ಚಿತ್ರ ಅರವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು. ಈ ಚಿತ್ರದಲ್ಲಿ ರಾಜ್-ಪಾರ್ವತಮ್ಮನವರು’ ಆರಂಭದ ದೃಶ್ಯದಲ್ಲಿ ಕಾಣಿಸಿಕೊಂಡು ಪುತ್ರನನ್ನು ಹರಿಸಿದ್ದರು. 2014 ರಲ್ಲಿ ತೆರೆಕಂಡ ‘ಭಜರಂಗಿ’ ಮತ್ತು 2018ರಲ್ಲಿ ತೆರೆಗೆಬಂದ ‘ಟಗರು’ ಚಿತ್ರಗಳು ಕನ್ನಡ ಸಿನಿಮಾ ಬಾಕ್ಸಾಫೀಸಿನಲ್ಲಿ ದಾಖಲೆ ಬರೆದವು. ಐವತ್ತು ದಾಟಿದರೂ ಈಗಲೂ ಚೈತನ್ಯದ ಚಿಲುಮೆಯಂತಿರುವ ಶಿವರಾಜ್‌ಕುಮಾರ್ ಈಗಿನ ಯುವನಟರಿಗೆ ಮಾದರಿ.

suddiyaana