ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ 81ನೇ ಹುಟ್ಟುಹಬ್ಬ – ಕನ್ನಡಿಗನ ರಾಜಕೀಯ ಹಾದಿಯೇ ರೋಚಕ
ಅಮ್ಮನ ಸಹೀವದಹನ ಕಣ್ಣಾರೆ ಕಂಡಿದ್ದ ಖರ್ಗೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ 81ನೇ ಹುಟ್ಟುಹಬ್ಬ – ಕನ್ನಡಿಗನ ರಾಜಕೀಯ ಹಾದಿಯೇ ರೋಚಕಅಮ್ಮನ ಸಹೀವದಹನ ಕಣ್ಣಾರೆ ಕಂಡಿದ್ದ ಖರ್ಗೆ

ಮಲ್ಲಿಕಾರ್ಜುನ ಖರ್ಗೆ. ಕಾಂಗ್ರೆಸ್ ನ ಪ್ರಭಾವಿ ನಾಯಕ. ಕರ್ನಾಟಕದಲ್ಲಿ ಹುಟ್ಟು ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ರಾಜಕೀಯ ಧುರೀಣ. ತಮ್ಮ ಇಡೀ ರಾಜಕೀಯ ಜೀವನವನ್ನು ಕಾಂಗ್ರೆಸ್‌ನಿಂದಲೇ ಕಟ್ಟಿಕೊಂಡು, ಪಕ್ಷವನ್ನೇ ಉಸಿರಾಗಿಸಿಕೊಂಡು, ಪಕ್ಷ ನಿಷ್ಠೆಯಿಂದಲೇ ಗುರುತಿಸಿಕೊಂಡವರು. ಅಧಿಕಾರ ಇರಲಿ, ಇಲ್ಲದರಲಿ ಪಕ್ಷಕ್ಕೆ ಎಂದೂ ದ್ರೋಹ ಬಗೆದವರಲ್ಲ. ಕಾಂಗ್ರೆಸ್ ನಿಷ್ಠೆ ಎಂಬುದಕ್ಕೆ ಖರ್ಗೆಯೇ ಉದಾಹರಣೆ. ಅಂತರ ಪ್ರಭಾವಿ ನಾಯಕನಿಗೆ ಇಂದು 81ನೇ ವರ್ಷದ ಹುಟ್ಟುಹಬ್ಬ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ(AICC) ಅಧ್ಯಕ್ಷ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂದು ಜುಲೈ 21ರಂದು 81ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಖರ್ಗೆ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರು ದೇಶಾದ್ಯಂತ ಶುಭಾಶಯ ಕೋರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸರ್ಕಾರದಲ್ಲಿ ಶಾಸಕ, ಸಚಿವ ನಂತರ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಅನುಭವ ಹೊಂದಿದ್ದಾರೆ. ಕೇವಲ 5ನೇ ವಯಸ್ಸಿನಲ್ಲಿ ತಾಯಿ ಸಜೀವ ದಹನವಾಗುತ್ತಿರುವುದನ್ನು ಕಂಡ ಮಲ್ಲಿಕಾರ್ಜುನ ಖರ್ಗೆ ಕೆಲ ತಿಂಗಳು ಕಾಡಿನಲ್ಲಿ ಕಳೆಯಬೇಕಾದ ಸಂದರ್ಭ ಬಂದಿತ್ತು. ಬಾಲ್ಯದಿಂದಲೂ ಹೋರಾಟಕ್ಕಿಳಿದ ಖರ್ಗೆ 9 ಬಾರಿ ಶಾಸಕ, ಎರಡು ಬಾರಿ ಸಂಸದರಾಗಿದ್ದರು.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಾರ್ವಟ್ಟಿಯಲ್ಲಿ ಮಾಪಣ್ಣ ಖರ್ಗೆ ಮತ್ತು ತಾಯಿ ಸಬವ್ವಾರ ಮಗನಾಗಿ ಜುಲೈ 21, 1942ರಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆಯವರು ಗುಲ್ಬರ್ಗಾದ ನೂತನ ವಿದ್ಯಾಲಯದಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಸರ್ಕಾರಿ ಡಿಗ್ರಿ ಕಾಲೇಜು ಗುಲ್ಬರ್ಗಾ ದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು ಮತ್ತು ಶೇಠ್ ಶಂಕರ್ಲಾಲ್ ಲಾಹೋಟಿ ಲಾ ಕಾಲೇಜಿನಿಂದ ಕಾನೂನು ಪದವಿ ಪಡೆದರು. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ಕಚೇರಿಯಲ್ಲಿ ಜೂನಿಯರ್ ಆಗಿ ಕಾನೂನು ಕ್ರಮ ಕೈಗೊಂಡ ಅವರು ತಮ್ಮ ಕಾನೂನು ವೃತ್ತಿಜೀವನದ ಆರಂಭದಲ್ಲಿ ಕಾರ್ಮಿಕ ಸಂಘಗಳಿಗೆ ಹೋರಾಡಿದರು.

ಪದವಿ ಓದುತ್ತಿದ್ದಾಗಲೇ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ನಂತರ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾಗಿದ್ದರು. ಎಲ್ಎಲ್ ಬಿ ಪದವಿ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ, ಕಲಬುರಗಿ ನಗರದಲ್ಲಿರುವ ಎಂ ಎಸ್ ಕೆ ಮಿಲ್ ನೌಕರರ ಕಾನೂನು ಸಲಹೆಗಾರರಾಗಿ, ಕಾರ್ಮಿಕ ಹಕ್ಕಗಳಿಗಾಗಿ ಹೋರಾಟ ನಡೆಸಿದ್ದರು. 1969 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆ, ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಇನ್ನು ಖರ್ಗೆಯವರ ರಾಜಕೀಯ ಜೀವನ ನೋಡೋದಾದ್ರೆ 1972 ರಲ್ಲಿ ಸ್ಪರ್ಧಿಸಿದರು ಮತ್ತು ಗುರ್ಮಿತ್ಕಲ್ ಕ್ಷೇತ್ರದಿಂದ ಗೆದ್ದರು. 1973 ರಲ್ಲಿ, ಅವರು ಕರ್ನಾಟಕ ರಾಜ್ಯದಲ್ಲಿ ಪುರಸಭೆಯ ಆಕ್ಟ್ರೊಯಿ ನಿರ್ಮೂಲನ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. 1974 ರಲ್ಲಿ, ಅವರು ರಾಜ್ಯ ಸ್ವಾಮ್ಯದ ಲೆದರ್ ಡೆವಲಪ್ಮೆಂಟ್ ಕಾರ್ಪೊರೇಶನ್ನ ಅಧ್ಯಕ್ಷರಾಗಿ ನೇಮಕಗೊಂಡರು.1976 ರಲ್ಲಿ ಅವರು  ಪ್ರಾಥಮಿಕ ಶಿಕ್ಷಣಕ್ಕಾಗಿ ರಾಜ್ಯ ಸಚಿವರಾಗಿ ನೇಮಕಗೊಂಡರು, 1978 ರಲ್ಲಿ ಅವರು ಗುರಮಿಠಕಲ್ ಕ್ಷೇತ್ರದಿಂದ ಎಂಎಲ್ಎ ಆಗಿ ಎರಡನೇ ಬಾರಿಗೆ ಚುನಾಯಿತರಾದರು ಮತ್ತು ದೇವರಾಜ್ ಅರಸ್ ಸಚಿವಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರಾಗಿ ನೇಮಕಗೊಂಡರು.

1980 ರಲ್ಲಿ ಅವರು ಗುಂಡೂರಾವ್ ಸಂಪುಟದಲ್ಲಿ ಸಚಿವರಾದರು. 1983 ರಲ್ಲಿ, ಗುರಮಿಠಕಲ್​ನಿಂದ ಕರ್ನಾಟಕ ವಿಧಾನಸಭೆಗೆ ಅವರು ಮೂರನೇ ಬಾರಿಗೆ ಆಯ್ಕೆಯಾದರು. 1985 ರಲ್ಲಿ ಅವರು ಕರ್ನಾಟಕ ವಿಧಾನಸಭೆಗೆ ಗುರಮಿಠಕಲ್​ನಿಂದ ನಾಲ್ಕನೇ ಬಾರಿಗೆ ಆಯ್ಕೆಯಾದರು. ಕರ್ನಾಟಕ ವಿಧಾನಸಭೆಯಲ್ಲಿ ಪ್ರತಿಪಕ್ಷದ ಉಪ ನಾಯಕರಾಗಿ ನೇಮಕಗೊಂಡರು. 1989 ರಲ್ಲಿ, ಗುರಮಿಠಕಲ್​ನಿಂದ ಕರ್ನಾಟಕ ವಿಧಾನಸಭೆಗೆ ಅವರು ಐದನೇ ಬಾರಿ ಆಯ್ಕೆಯಾದರು. 1990 ರಲ್ಲಿ ಅವರು ಬಂಗಾರಪ್ಪ ಅವರ ಸಂಪುಟದಲ್ಲಿ ಆದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಸೇರಿಕೊಂಡರು.

2005 ರಲ್ಲಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. 2008 ರಲ್ಲಿ ಅವರು ಚಿತ್ತಾಪುರದಿಂದ ಅಸೆಂಬ್ಲಿಗೆ ಸತತ ಒಂಬತ್ತನೆಯ ಬಾರಿ ದಾಖಲೆಗೆ ಆಯ್ಕೆಯಾದರು. 2008 ರಲ್ಲಿ ಎರಡನೇ ಬಾರಿ ಪ್ರತಿಪಕ್ಷ ನಾಯಕರಾಗಿ ನೇಮಿಸಲಾಯಿತು. 2009 ರಲ್ಲಿ, ಕಲಬುರಗಿ ಪಾರ್ಲಿಮೆಂಟರಿ ಕ್ಷೇತ್ರದಿಂದ ಸಾಮಾನ್ಯ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು ಮತ್ತು ಅವರ ಹತ್ತನೇ ಸತತ ಚುನಾವಣೆಯಲ್ಲಿ ಜಯಗಳಿಸಿದರು. 2014 ರ ಸಾರ್ವತ್ರಿಕ ಚುನಾವಣೆಗಳಲ್ಲಿ, ಖರ್ಗೆ ಸ್ಪರ್ಧಿಸಿದ ಮತ್ತು ಕಲಬುರಗಿ ಸಂಸದೀಯ ಸ್ಥಾನದಿಂದ ಗೆದ್ದಿದ್ದು, ಅವರನ್ನು ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿ ನೇಮಿಸಲಾಯಿತು. 2022ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡರು. ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ರಾಜಕಾರಣಿಯಾಗಿರುವ ಖರ್ಗೆಯವರ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ.

 

suddiyaana