ಹಂಪಿ ಉತ್ಸವ ನವೆಂಬರ್ ಗೆ ಬೇಡ ಫೆಬ್ರವರಿಗೆ ಮಾಡಲು ಸಿಎಂ ಸೂಚನೆ – ಐತಿಹಾಸಿಕ ಸಂಭ್ರಮಕ್ಕೂ ಬರದ ಕಾರ್ಮೋಡ
ಹಂಪಿ ಎಂದು ಹೇಳುವಾಗಲೇ ನೆನಪಿಗೆ ಬರುವುದು ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎಂಬ ಹಾಡು. ಹಂಪಿಯ ಭವ್ಯ ಪರಂಪರೆ, ಹಂಪಿಯಲ್ಲಿ ಕಂಡುಬರುವ ವಾಸ್ತುಶಿಲ್ಪಗಳ ಕೆತ್ತನೆ, ಹಂಪಿಯಲ್ಲಿರುವ ವೈಭವ.. ಇದನ್ನೆಲ್ಲಾ ನೋಡಬೇಕು ಎಂಬವರಿಗೆ ಹಂಪಿ ಉತ್ಸವ ಕೂಡಾ ಒಂದು ವೇದಿಕೆಯಾಗಿತ್ತು. ಆದರೆ, ಈ ಬಾರಿ ಹಂಪಿ ಉತ್ಸವ ನಡೆಯುವುದೇ ಅನುಮಾನವಾಗಿದೆ.
ಇದನ್ನೂ ಓದಿ : ಉತ್ಸವದ ವೇಳೆ ನಡೆಯಿತು ದುರಂತ – ದೇವಸ್ಥಾನದ ಕೊಳದಲ್ಲಿ ಮುಳುಗಿ 5 ಮಂದಿ ಸಾವು
ಈ ವರ್ಷ ನವೆಂಬರ್‌ನಲ್ಲಿ ಹಂಪಿ ಉತ್ಸವ ನಡೆಸಲು ನಿರ್ಧಾರ ಮಾಡಲಾಗಿತ್ತು. ಆದರೆ ಬರ ಪರಿಸ್ಥಿತಿಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿಯಲ್ಲಿ ಹಂಪಿ ಉತ್ಸವ ನಡೆಸಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಫೆಬ್ರವರಿಯಲ್ಲಿ ಹಂಪಿ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ವಿಜಯನಗರ- ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ಉತ್ಸವ ನಡೆಸುವುದು ಕಷ್ಟ. ಫೆಬ್ರವರಿ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಉತ್ಸವ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಸರ್ಕಾರದ್ದು. ಹೀಗಾಗಿ ಫೆಬ್ರವರಿಯಲ್ಲಿ ಹಂಪಿ ಉತ್ಸವ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರುಸೃಷ್ಟಿಸಲು ರಾಜ್ಯ ಸರ್ಕಾರ ಹಂಪಿ ಉತ್ಸವವನ್ನು ನಡೆಸುತ್ತಾ ಬಂದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಉತ್ಸವವನ್ನು ಆಚರಿಸಲಾಗುತ್ತದೆ. ಹಂಪಿ ಉತ್ಸವವು ವಿಜಯನಗರ ಸಾಮ್ರಾಜ್ಯದ ಆಡಂಬರ, ವೈಭವಕ್ಕೂ ಸಾಕ್ಷಿಯಾಗಿದೆ. ಲಕ್ಷಾಂತರ ಪ್ರವಾಸಿಗರು ಕೂಡಾ ಹಂಪಿ ಉತ್ಸವಕ್ಕೆ ಆಗಮಿಸುತ್ತಾರೆ. ಹಂಪಿ ಉತ್ಸವದಲ್ಲಿ ಕಲೆ, ಸಂಗೀತ ಮತ್ತು ನೃತ್ಯದ ಮೂಲಕ ಕರ್ನಾಟಕದ ವೈಭವವನ್ನು ಸಾರಲಾಗುತ್ತದೆ.