ಗಾಜಾ ಪಟ್ಟಿಯಲ್ಲಿ ಹಮಾಸ್ ನ 16 ವರ್ಷಗಳ ಆಳ್ವಿಕೆ ಅಂತ್ಯವಾಯ್ತಾ? – ಗಾಜಾ ಸಂಸತ್ ಕಟ್ಟಡ ವಶಪಡಿಸಿಕೊಂಡ ಇಸ್ರೇಲ್ ಸೇನೆ!
ಹಮಾಸ್ ಹಾಗೂ ಇಸ್ರೇಲ್ ನಡುವಿನ ಭೀಕರ ಕದನ ಆರನೇ ವಾರಕ್ಕೆ ಕಾಲಿಟ್ಟಿದೆ. ಹಮಾಸ್ ಉಗ್ರರನ್ನು ನಿರ್ನಾಮ ಮಾಡಲು ಇಸ್ರೇಲ್ ಸೇನೆ ಪಣತೊಟ್ಟಿದೆ. ಈ ಹಿನ್ನೆಲೆಯಲ್ಲಿ ಗಾಜಾ ನಗರದ ಮೇಲೆ ಮೇಲಿಂದ ಮೇಲೆ ದಾಳಿ ಮಾಡುತ್ತಲೇ ಇದೆ. ಇದೀಗ ಗಾಜಾ ಪಟ್ಟಿಯನ್ನು ಆಳುತ್ತಿರುವ ಹಮಾಸ್‌ನ ಸಂಸತ್ ಕಟ್ಟಡವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ವಶಪಡಿಸಿಕೊಂಡಿವೆ ಎಂದು ವರದಿಯಾಗಿದೆ.
ಇಸ್ರೇಲ್ ಸೇನೆಯು ಕೆಲವು ದಿನಗಳ ಹಿಂದೆ ಗಾಜಾ ನಗರವನ್ನು ಸುತ್ತುವರೆದಿತ್ತು. ಪ್ಯಾಲೆಸ್ತೀನ್ ಅಥಾರಿಟಿ (ಪಿಎ) ಅನ್ನು ಹೊರಹಾಕಿದ ನಂತರ ಗಾಜಾ ಪಟ್ಟಿಯನ್ನು ಹಲವು ವರ್ಷಗಳಿಂದ ಆಳುತ್ತಿರುವ ಹಮಾಸ್ ಸಂಸತ್ ಕಟ್ಟಡವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ವಶಪಡಿಸಿಕೊಂಡಿವೆ. ಇಸ್ರೇಲ್ ಸೇನೆಯ ಗೋಲಾನಿ ಬ್ರಿಗೇಡ್ ಹಮಾಸ್ ಸಂಸತ್ ಕಟ್ಟಡವನ್ನು ವಶಪಡಿಸಿಕೊಂಡಿದೆ ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ. ಇದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.
ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಗಾಜಾ ಪಟ್ಟಿಯನ್ನು ಹಮಾಸ್ 16 ವರ್ಷಗಳಿಂದ ಆಳ್ವಿಕೆ ನಡೆಸಿದೆ. ಆದರೆ ಇದೀಗ ಇಸ್ರೇಲ್ ವಶವಾಗಿದೆ. ಹಮಾಸ್ ಗಾಜಾ ಪಟ್ಟಿ ಅಧಿಕಾರಿವನ್ನು ಕಳೆದುಕೊಂಡಿದೆ. ಉಗ್ರರರು ದಕ್ಷಿಣದ ಕಡೆ ಪಲಾಯನವಾಗುತ್ತಿದ್ದಾರೆ. ನಾಗರಿಕರು ಹಮಾಸ್ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ. ಅಲ್ಲಿನ ಜನರಿಗೆ ಹಮಾಸ್ ಸರ್ಕಾರದ ಬಗ್ಗೆ ನಂಬಿಕೆ ಇಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಯುದ್ಧ ಆರಂಭವಾದಾಗಿನಿಂದ ಗಾಜಾದ 2.3 ಮಿಲಿಯನ್ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವರದಿ ತಿಳಿಸಿದೆ.
ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ ಮೇಲೆ ಹಮಾಸ್ ಗುಂಪು ಮಾರಣಾಂತಿಕ ದಾಳಿ ನಡೆಸಿತ್ತು ಇದಾದ ಬಳಿಕ ಹಮಾಸ್ ಭಯೋತ್ಪಾದಕರನ್ನು ಹತ್ತಿಕ್ಕಲು ಇಸ್ರೇಲ್‌ನ ಮಿಲಿಟರಿ ಗಾಜಾ ನಗರದ ಮೇಲೆ ತನ್ನ ದಾಳಿಯನ್ನು ನಡೆಸಲು ಆರಂಭಿಸಿತು. ಅದರಂತೆ ಇಸ್ರೇಲ್ ಪಡೆ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಬಂಡುಕೋರರ ಅಡಗುತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಮುಂದಾಗಿದೆ.