ಹಮಾಸ್ – ಇಸ್ರೇಲ್ ದಾಳಿಯನ್ನೇ ಲಾಭ ಮಾಡಿಕೊಂಡ ಹುಚ್ಚುದೊರೆ! – ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ಯಾ ಉತ್ತರ ಕೊರಿಯಾ?
ಅನೇಕ ರಾಷ್ಟ್ರಗಳಲ್ಲಿ ಉಗ್ರ ಚಟುವಟಿಕೆ ಹೆಚ್ಚಾಗುತ್ತಲೇ ಇದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಅನೇಕ ರಾಷ್ಟ್ರಗಳು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ. ಇದೀಗ ಭಯೊತ್ಪಾದಕ ಚಟುವಟಿಕೆ ಬಗ್ಗೆ ಆತಂಕಕಾರಿ ಮಾಹಿತಿಯೊಂದು ಅಧ್ಯಯನ ವರದಿಯಿಂದ ಬಹಿರಂಗವಾಗಿದೆ. ಮಧ್ಯಪೂರ್ವ ರಾಷ್ಟ್ರಗಳ ಉಗ್ರರಿಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಭಯಾನಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದಾನೆ ಎಂಬ ಸ್ಪೋಟಕ ವಿಚಾರ ಬಯಲಾಗಿದೆ.
ಹೌದು, ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಯನ್ನು ಉಲ್ಲೇಖಿಸಿ ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಇದನ್ನು ವರದಿ ಮಾಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಇಸ್ರೇಲ್ ಮೇಲೆ ದಾಳಿ ಮಾಡಿರುವ ಪ್ಯಾಲೆಸ್ತೀನ್ನ ಹಮಾಸ್ ಮತ್ತು ಇತರೆ ಉಗ್ರ ಸಂಘಟನೆಗಳು ಈ ಶಸ್ತ್ರಾಸ್ತ್ರಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿವೆ. ಇಸ್ರೇಲ್-ಹಮಾಸ್ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಹಮಾಸ್‌ಗೆ ಎಲ್ಲ ರೀತಿಯ ಬೆಂಬಲ ನೀಡುವಂತೆ ಕಿಮ್ ಜಾಂಗ್ ಉನ್ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾನೆಂದು ತಿಳಿದುಬಂದಿದೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ – ಶಾಲೆಗಳಿಗೆ 2 ದಿನ ರಜೆ, ನಿರ್ಮಾಣ ಕೆಲಸಕ್ಕೆ ನಿಷೇಧ
ತನ್ನ ಪರಮಾಣು ಪರೀಕ್ಷೆಗಳಿಂದಾಗಿ ವಿಶ್ವಸಂಸ್ಥೆಯ ನಿರ್ಬಂಧಗಳನ್ನು ಎದುರಿಸುತ್ತಿರುವ ಉತ್ತರ ಕೊರಿಯಾ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿಲ್ಲ. ಹೀಗಾಗಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚು ಹಣ ಸಂಪಾದನೆಯಲ್ಲಿ ತೊಡಗಿದ್ದಾನೆಂದು ಹೇಳಲಾಗಿದೆ. ವರದಿಯ ಪ್ರಕಾರ ತನ್ನ ದೇಶವು ಯುದ್ಧದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳಲು ಹಮಾಸ್‌ಗೆ ಸಂಪೂರ್ಣ ಬೆಂಬಲವನ್ನು ನೀಡುವಂತೆ ಕಿಮ್ ತನ್ನ ಅಧಿಕಾರಿಗಳಿಗೆ ತಿಳಿಸಿದ್ದಾನೆಂದು ವರದಿಯಾಗಿದೆ.
ಇಸ್ರೇಲ್ ಮೇಲೆ ದಾಳಿ ನಡೆಸಿರುವ ಹಮಾಸ್, ಉತ್ತರ ಕೊರಿಯಾದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಇಸ್ರೇಲಿ ಶಸ್ತ್ರಸಜ್ಜಿತ ವಾಹನಗಳನ್ನು ನಾಶಪಡಿಸಲು ಹಮಾಸ್‌ಗೆ F-7 ರಾಕೆಟ್ ಚಾಲಿತ ಗ್ರೆನೇಡ್‌ಗಳನ್ನು ಉತ್ತರ ಕೊರಿಯಾ ಪೂರೈಸುತ್ತಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಹಮಾಸ್, ಉತ್ತರ ಕೊರಿಯಾದ ಬುಲ್ಸೇ-ಗೈಡೆಡ್ ಆ್ಯಂಟಿ ಟ್ಯಾಂಕ್ ಕ್ಷಿಪಣಿಗಳನ್ನು ಬಳಸುತ್ತಿದೆ ಎಂಬುದಕ್ಕೆ ಪುರಾವೆಗಳು ಸಹ ಹೊರಹೊಮ್ಮಿವೆ.
ಭಯೋತ್ಪಾದಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಉತ್ತರ ಕೊರಿಯಾದ ನಿರ್ಧಾರವು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ. ಆದರೆ, ತಮ್ಮ ವಿರುದ್ಧದ ಆರೋಪಗಳಿಗೆ ಯಾವುದೇ ಸತ್ಯವಿಲ್ಲ ಮತ್ತು ಅವು ಆಧಾರರಹಿತ ಹಾಗೂ ಸುಳ್ಳು ಎಂದು ಉತ್ತರ ಕೊರಿಯಾ ಆರೋಪವನ್ನು ನಿರಾಕರಿಸಿದೆ.