2 ತಿಂಗಳ ಬಳಿಕ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

2 ತಿಂಗಳ ಬಳಿಕ 25 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಹಮಾಸ್‌ ಹಾಗೂ ಇಸೇಲ್‌ ನಡುವಿನ ಕದನ ಆರಂಭವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ಅಂತಾರಾಷ್ಟ್ರೀಯ ಸಮುದಾಯದ ಮಧ್ಯ ಪ್ರವೇಶದ ಬಳಿಕ ಹಮಾಸ್ ಉಗ್ರ ಸಂಘಟನೆ 25 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹಮಾಸ್ ವಕ್ತಾರರು ಮಾಹಿತಿ ನೀಡಿದ್ದಾರೆ ಎಂದು ಏಜೆನ್ಸಿ ಫ್ರಾನ್ಸ್ ಪ್ರೆಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿಯಲ್ಲಿರುವಂತೆ 13 ಮಂದಿ ಇಸ್ರೇಲಿ ಪ್ರಜೆಗಳು ಮತ್ತು 12 ಮಂದಿ ಥಾಯ್ಲೆಂಡ್ ಪ್ರಜೆಗಳು ಸೇರಿದಂತೆ ಒಟ್ಟು 25 ಮಂದಿ ಒತ್ತೆಯಾಳುಗಳನ್ನು ಹಮಾಸ್ ಸಂಘಟನೆ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಈ 25 ಒತ್ತೆಯಾಳುಗಳನ್ನು ಶುಕ್ರವಾರ ಈಜಿಪ್ಟ್ ನ ರಾಫಾ ಗಡಿ ಮೂಲಕ ಇಸ್ರೇಲ್‌ಗೆ ಮರಳಲು ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ. ಅವರನ್ನು ರೆಡ್ ಕ್ರಾಸ್ ಸಿಬ್ಬಂದಿಗಳು ಈಜಿಪ್ಟಿಗೆ ಹಸ್ತಾಂತರಿಸಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಹುತಾತ್ಮ ಯೋಧ ಕ್ಯಾ.ಪ್ರಾಂಜಲ್ ಅಂತ್ಯಕ್ರಿಯೆ ಶನಿವಾರ – ಅಂತಿಮ ದರ್ಶನಕ್ಕೆ ಅವಕಾಶ

ಈ ಬಗ್ಗೆ ಇಸ್ರೇಲ್‌ ಸೇನೆ ಮಾಹಿತಿ ನೀಡಿದೆ. ಪ್ಯಾಲೆಸ್ಟೀನಿಯನ್‌ ಬಂಡುಕೋರರ ಗಡಿಯಾಚೆಗಿನ ದಾಳಿಯ ಸಮಯದಲ್ಲಿ ಸೆರೆಹಿಡಿಯಲಾಗಿದ್ದ 13 ಇಸ್ರೇಲಿ ಒತ್ತೆಯಾಳುಗಳು ತಮ್ಮ ನಾಡಿಗೆ ಮರಳಿದರು. ಅವರು ತಮ್ಮ ಕುಟುಂಬಗಳೊಂದಿಗೆ ಮತ್ತೆ ಸೇರುವ ಮೊದಲು ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಾರೆ. ಬಿಡುಗಡೆಯಾದವರ ಪೈಕಿ ನಾಲ್ವರು ಮಕ್ಕಳು ಮತ್ತು ಆರು ವೃದ್ಧ ಮಹಿಳೆಯರು ಸೇರಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಬಿಡುಗಡೆ ಮಾಡಿದ ಪಟ್ಟಿಯು ತಿಳಿಸಿದೆ.

ಹಮಾಸ್ ಒತ್ತೆಯಾಳುಗಳನ್ನು ಮಾನವೀಯ ಸಂಘಟನೆಗೆ ಹಸ್ತಾಂತರಿಸಿದ ನಂತರ ರೆಡ್ ಕ್ರಾಸ್ ವಾಹನಗಳ ಬೆಂಗಾವಲು ಗಾಜಾ ಮತ್ತು ಈಜಿಪ್ಟ್ ನಡುವಿನ ಗಡಿಯನ್ನು ದಾಟುತ್ತಿರುವ ದೃಶ್ಯ ವೈರಲ್‌ ಆಗಿದೆ. ಈ ವೇಳೆ ಕೆಲವು ಪ್ರಯಾಣಿಕರು ಕೈ ಬೀಸುತ್ತಿರುವ ದೃಶ್ಯವೂ ಇದೆ. ಕತಾರ್, ಈಜಿಪ್ಟ್ ಮತ್ತು ಯುನೈಟೆಡ್ ಸ್ಟೇಟ್ಸ್ ಜೊತೆಗೂಡಿ ಮಾತುಕತೆಯ ನಂತರದ ಒಪ್ಪಂದದ ಅಡಿಯಲ್ಲಿ ಇಸ್ರೇಲ್ ವಶಪಡಿಸಿಕೊಂಡಿದ್ದ ಪ್ಯಾಲೆಸ್ಟೀನಿಯನ್‌ ಕೈದಿಗಳು, ಮಹಿಳೆಯರು ಮತ್ತು ಹದಿಹರೆಯದ ಹುಡುಗರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.

Shwetha M