ಹಮಾಸ್ ಹಾಗೂ ಇಸ್ರೇಲ್ ನಡುವೆ ಕದನ ವಿರಾಮ – 13 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಸಿದ್ಧತೆ
ಹಮಾಸ್ ಹಾಗೂ ಇಸ್ರೇಲ್ ನಡುವಿನ ಭೀಕರ ಯುದ್ಧ ನಡೆಯುತ್ತಿದೆ. ಇದೀಗ ಈ ಯುದ್ಧದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಒತ್ತೆಯಾಳುಗಳ ಬಿಡುಗಡೆಗಾಗಿ ಕದನ ವಿರಾಮ ನಿರ್ಧಾರಕ್ಕೆ ಒಪ್ಪಂದ ಏರ್ಪಟ್ಟಿದ್ದು, ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಘೋಷಣೆಯಾಗಲಿದೆ ಎಂದು ವರದಿಯಾಗಿದೆ.
ಕಳೆದ ಅಕ್ಟೋಬರ್ 7 ರಿಂದ ನಡೆಯುತ್ತಿರುವ ಇಸ್ರೇಲ್-ಹಮಾಸ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಒತ್ತೆಯಾಳುಗಳ ಬಿಡುಗಡೆಗಾಗಿ ಕದನ ವಿರಾಮ ನಿರ್ಧಾರಕ್ಕೆ ಒಪ್ಪಂದ ಏರ್ಪಟ್ಟಿದೆ. ಶುಕ್ರವಾರದಿಂದ ನಾಲ್ಕು ದಿನ ಕದನ ವಿರಾಮ ಘೋಷಣೆಯಾಗಲಿದ್ದು, ಒತ್ತೆಯಾಳುಗಳ ವಿನಿಮಯವೂ ನಡೆಯಲಿದೆ. ಒಟ್ಟು 4 ದಿನಗಳು ಕದನ ವಿರಾಮ ಇರಲಿದೆ. ಮೊದಲ ದಿನವೇ ಹಮಾಸ್ ಉಗ್ರರ ಗುಂಪು ಸೆರೆಹಿಡಿದಿದ್ದ 13 ಮಂದಿ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಮಧ್ಯವರ್ತಿ ಕತಾರ್ ಹೇಳಿದೆ.
ಕತಾರ್ ವಿದೇಶಾಂಗ ಸಚಿವಾಲಯದ ಪ್ರಕಾರ, ಹಮಾಸ್ ಸಂಜೆ 7:30ರ ನಂತರ ಒತ್ತೆಯಾಳುಗಳ ಮೊದಲ ಬ್ಯಾಚ್ ಅನ್ನು ಬಿಡುಗಡೆ ಮಾಡಲಿದೆ. ಒಂದೇ ಕುಟುಂಬದ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡು 13 ಮಂದಿಯನ್ನು ಹಮಾಸ್ ಬಿಡುಗಡೆಗೊಳಿಸಲಿದೆ. ಒಪ್ಪಂದದ ಪ್ರಕಾರ 4 ದಿನಗಳಲ್ಲಿ ಒಟ್ಟು 50 ಮಂದಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಬಿಡುಗಡೆ ಮಾಡಲಿರುವ ಒತ್ತೆಯಾಳುಗಳ ಪಟ್ಟಿ ಸ್ವೀಕರಿಸಿದ್ದು, ಬಿಡುಗಡೆಗೊಳ್ಳಲಿರುವ ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.
ಈ ನಡುವೆ ಇಸ್ರೇಲ್ ಜೈಲಿನಲ್ಲಿರುವ ಪ್ಯಾಲೆಸ್ತೀನ್ ಕೈದಿಗಳನ್ನೂ ಶುಕ್ರವಾರ ಬಿಡುಗಡೆಗೊಳಿಸುವುದಾಗಿ ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಜೇದ್ ಅಲ್ ಅನ್ಸಾರಿ ತಿಳಿಸಿದ್ದಾರೆ.
ಕತಾರ್ ಮತ್ತು ಯುಎಸ್ ಆಯೋಜಿಸಿದ ಒಪ್ಪಂದ ಕೊನೆಗೂ ಫಲ ಕೊಟ್ಟಿದ್ದು, 50 ಒತ್ತೆಯಾಳುಗಳ ಬಿಡುಗಡೆ ಸಂಬಂಧ ಇಸ್ರೇಲ್-ಹಮಾಸ್ ನಡುವೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಇಸ್ರೇಲ್ ಸಂಪುಟವೂ ಒಪ್ಪಿಗೆ ಸೂಚಿಸಿತ್ತು. ಈ ಒಪ್ಪಂದದ ಭಾಗವಾಗಿ ಇಸ್ರೇಲ್ 4 ದಿನ ಪ್ಯಾಲೆಸ್ತೀನ್ ಮೇಲೆ ಯಾವುದೇ ರೀತಿಯ ದಾಳಿ ಮಾಡುವುದಿಲ್ಲ. ಈ ಸಂದರ್ಭದಲ್ಲಿ 240 ಒತ್ತೆಯಾಳುಗಳ ಪೈಕಿ ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 50 ಮಂದಿಯನ್ನು ಹಮಾಸ್ ಬಿಡುಗಡೆ ಮಾಡಬೇಕಾಗುತ್ತದೆ. ಇಸ್ರೇಲ್ ಕೂಡ ತಮ್ಮ ಜೈಲುಗಳಲ್ಲಿರೋ ಪ್ಯಾಲೆಸ್ತೀನ್ ಮಹಿಳೆಯರು, ಮಕ್ಕಳನ್ನು ಬಿಡುಗಡೆ ಮಾಡಲಿದೆ.